Sunday 25 December 2011

ವಚನ-ಸಿಂಚನ ೧೭:ಅರಿವು

ಮುತ್ತು ನೀರಲ್ಲಾಯಿತ್ತು,ವಾರಿಕಲ್ಲು ನೀರಲ್ಲಾಯಿತ್ತು,
ಉಪ್ಪು ನೀರಲ್ಲಾಯಿತ್ತು
ಉಪ್ಪು ಕರಗಿತ್ತು,ವಾರಿಕಲ್ಲು ಕರಗಿತ್ತು,
ಮುತ್ತು ಕರಗಿದುದನಾರು ಕಾಣರು...
ಈ ಸಂಸಾರಿ ಮಾನವರು ಲಿಂಗವ ಮುಟ್ಟಿ
 ಭವಭಾರಿಗಳಾದರು  !
ನಾ ನಿಮ್ಮ ಮುಟ್ಟಿ ಕರಿಗೊಂಡೆನಯ್ಯಾ!
ಚೆನ್ನಮಲ್ಲಿಕಾರ್ಜುನಯ್ಯಾ !!!
                                    -ಅಕ್ಕಮಹಾದೇವಿ

ಇಲ್ಲಿ ಅಕ್ಕಮಹಾದೇವಿ ನೀರಿನಲ್ಲಿ ಹುಟ್ಟುವ ವಸ್ತುಗಳನ್ನು ಅರಿವಿಗೆ ಹೋಲಿಸಿ ಹೇಳುತ್ತಾರೆ..
ಮುತ್ತು,ವಾರಿಕಲ್ಲು(ಆನೇಕಲ್ಲು) ಮತ್ತು ಮುತ್ತು,ಇವು ಮೂರು ಕೂಡ ನೀರಿನಲ್ಲೇ ರೂಪುಗೊಂಡಿದ್ದು... ಆದರೆ ವಾರಿಕಲ್ಲು ಮತ್ತು ಉಪ್ಪು ನೀರಿನಲ್ಲಿ ಕರಗಿ ಹೋಗುತ್ತದೆ.. ಆದರೆ ಮುತ್ತು ಮಾತ್ರ ಕರಗುವುದಿಲ್ಲ.. ಅಂದರೆ ಮುತ್ತು ಅರಿವಿನ ಸಂಕೇತ.. ಅದರ ಶುಭ್ರತೆ ಮತ್ತು ಗಟ್ಟಿತನವನ್ನು ಇಲ್ಲಿ ಅರಿವು ಎಂದು ಹೇಳಬಹುದು... "ಅರಿವೇ ಗುರು" ಎಂದು ಬಸವಣ್ಣನವರು ಹೇಳಿದಂತೆ...
ಉಪ್ಪು ವಾರಿಕಲ್ಲಿನಂತೆ ಈ ಸಂಸಾರಿಗಳು ಕರಗಿ ಹೋದರು... ನಾನು ನಿಮ್ಮನ್ನು ಮುಟ್ಟಿ ಕರಿಗೊಂಡೆನು ಎಂದು ಚೆನ್ನಮಲ್ಲಿಕಾರ್ಜುನನಲ್ಲಿ ಹೇಳಿಕೊಳ್ಳುತ್ತಾಳೆ... ಅಕ್ಕಮಹಾದೇವಿಯು ಮುತ್ತಿನಂತೆ ಅರಿವಿನ ಸಂಕೇತ..ಆದ್ದರಿಂದಲೇ ಅವಳು ಇಂದಿಗೂ ಅವಳ ವಚನಗಳ ಮೂಲಕ ಗಟ್ಟಿಯಾಗಿ ನೆಲೆ ನಿಂತಿರುವುದು...

Sunday 18 December 2011

ವಚನ ಸಿಂಚನ ೧೬ :ಶೃಂಗಾರ

ನೀರಿಂಗೆ ನೈದಿಲೆ ಶೃಂಗಾರ,
ಸಮುದ್ರಕ್ಕೆ ತೆರೆಯ ಶೃಂಗಾರ,
ನಾರಿಗೆ ಗುಣವೇ ಶೃಂಗಾರ,
ಗಗನಕ್ಕೆ ಚಂದ್ರಮನೆ ಶೃಂಗಾರ,
ನಮ್ಮ ಲಿಂಗದೇವನ ಶರಣರ ನೊಸಲಿಗೆ ಶ್ರೀ ವಿಭೂತಿಯೇ ಶೃಂಗಾರ
                                                     -ಬಸವಣ್ಣ

ಇಲ್ಲಿ ಬಸವಣ್ಣನವರು ಅವಶ್ಯಕತೆ,ನೈಜತೆ  ಮತ್ತು ಪ್ರಕೃತಿಯ ನಿಯಮಗಳಲ್ಲಿ ಶೃಂಗಾರವನ್ನು ಬಣ್ಣಿಸುತ್ತಾರೆ....
ನೀರಿನಲ್ಲಿ ಕೆಂದಾವರೆ ಇದ್ದರೆ ಒಂದು ಸೊಬಗು.... ಸಮುದ್ರದಲ್ಲಿ ತೆರೆ ಯಾವಾಗಲು ಏಳುತ್ತಿರುತ್ತದೆ...ತೆರೆ ನಿಂತರೆ ಸಮುದ್ರಕ್ಕೆ ಕಲೆಯೇ ಇರುವುದಿಲ್ಲ... ಹಾಗೆ ಒಂದು ಹೆಣ್ಣು ಅವಳು ನೋಡಲು ಎಷ್ಟೇ ಚೆನ್ನಾಗಿದ್ದರೂ ಅವಳಲ್ಲಿ ಒಳ್ಳೆಯ ಗುಣ ,ಸಂಸ್ಕೃತಿ ಇಲ್ಲದಿದ್ದರೆ ಅದು ಶೋಭೆ ತರುವುದಿಲ್ಲ...ಅದೇ ರೀತಿ ಆಕಾಶದಲ್ಲಿ ಚಂದ್ರ ಮಿನುಗುತ್ತಿದ್ದರೆ ನೋಡಲು ಚೆನ್ನ...ಹುಣ್ಣಿಮೆಯಲ್ಲಿ ಗಗನವು ಸೊಗಸಾಗಿರುತ್ತದೆ..ಅದೇ ಅಮವಾಸ್ಯೆಯಲ್ಲಿ ಕಟ್ಟಲು ಕವಿದಿರುತ್ತದೆ... ಇದೆ ರೀತಿ ಕೂಡಲ ಸಂಗನ  ಶರಣರ ಹಣೆಯಲ್ಲಿ ವಿಭೂತಿ ಕಂಗೊಳಿಸುತ್ತಿದ್ದರೆ ಅದರಲ್ಲಿ ಶಿವ ಕಳೆಯನ್ನು ಕಾಣಬಹುದು ಎಂದು ಅಭಿಪ್ರಾಯಪಡುತ್ತಾರೆ.. ಅಡ್ಡ ವಿಭೂತಿ ಇಲ್ಲದವರ ಮುಖ ನೋಡಲಾಗದು ಎಂದು ಇನ್ನೊಂದು ವಚನದಲ್ಲಿ ಹೇಳಿದ್ದಾರೆ..

Monday 12 December 2011

ವಚನ ಸಿಂಚನ ೧೫:ನಡತೆ

ಅಡ್ಡ ವಿಭೂತಿಯಿಲ್ಲದವರ ಮುಖ ಹೊಲ್ಲ, ನೋಡಲಾಗದು
ಲಿಂಗ ದೇವರಿಲ್ಲದ ಠಾವು ನರವಿಂಧ್ಯ, ಹೋಗಲಾಗದು
ದೇವಭಕ್ತರಿಲ್ಲದೂರುಸಿನೆ, ಹಾಳು ಕೂಡಲ ಸಂಗಮದೇವಾ.
                                                            -ಬಸವಣ್ಣ  

ಇಲ್ಲಿ ಬಸವಣ್ಣನವರು ಮನುಷ್ಯನ ನಡತೆ ಮತ್ತು ಅವನ ಕಾರ್ಯಗಳ ಬಗ್ಗೆ ಹೇಳುತ್ತಾರೆ... ಹಣೆಯಲ್ಲಿ ವಿಭೂತಿ ಇಲ್ಲದವರ ಮುಖದಲ್ಲಿ ಶಿವ ಕಳೆ ಇರುವುದಿಲ್ಲ ,ಅಂಥವರ ಮುಖ ನೋಡಲು ಆಗುವುದಿಲ್ಲ... "ಕೂಡಲ ಸಂಗನ ಶರಣರ  ನೊಸಲಿಗೆ ಶ್ರೀ ವಿಭೂತಿಯೇ ಶೃಂಗಾರ " ಎಂದು ಇನ್ನೊಂದು ವಚನದಲ್ಲಿ ಹೇಳಿದ್ದಾರೆ..
ಅದೇ ರೀತಿ ಲಿಂಗ ದೇವರಿಲ್ಲದ ,ಲಿಂಗ ದೇವರನ್ನು ಪೂಜಿಸದ ಉರು ಅಥವಾ ಅಂತ ಜಾಗಕ್ಕೆ ಹೋಗಲು ಮನಸ್ಸು ಒಪ್ಪುವುದಿಲ್ಲ ಎಂದು ಹೇಳುತ್ತಾ ದೇವ ಭಕ್ತರಿಲ್ಲದ ಉರು ಮತ್ತು ಆ ಸೀಮೆ ಹಾಳು ಬೀಳುತ್ತದೆ...ದೇವ ಭಕ್ತರಿಲ್ಲದಿದ್ದರೆ  ಅಲ್ಲಿ ಸಂಸ್ಕಾರ ಆಗಲಿ ಸನ್ನಡತೆ ಯಾಗಲಿ ಇರುವುದಿಲ್ಲ ಎಂದು ಭಾವಿಸುತ್ತಾರೆ..

Saturday 3 December 2011

ವಚನ ಸಿಂಚನ ೧೪:ಮೈಲಿಗೆ

ಮಂಡೆ ಮಾಸಿದಡೆ ಮಹಾ ಮಜ್ಜನವ ಮಾಡುವುದು,
ವಸ್ತ್ರ ಮಸಿಡದೆ ಮಡಿವಾಳರಿಗಿಕ್ಕುವುದು,
ಮನದ ಮೈಲಿಗೆ ತೊಳೆಯಬೇಕಾದರೆ 
ಕೂಡಲ ಚೆನ್ನ ಸಂಗಯ್ಯನ ಶರಣ ಅನುಭಾವವ ಮಾಡುವುದು...
                                                -ಚೆನ್ನ ಬಸವಣ್ಣ 
ಇಲ್ಲಿ ಚೆನ್ನ ಬಸವಣ್ಣನವರು ಮನಸ್ಸಿನ ಚಂಚಲತೆ,ಆಲೋಚನೆಗಳು ಮತ್ತು ನಿಯಂತ್ರಣದ ಬಗ್ಗೆ ಹೇಳುತ್ತಾರೆ  ...
ತಲೆ ಮಾಸಿದರೆ ಸ್ನಾನ ಮಾಡಿದರೆ ಧೂಳು ಎಲ್ಲಾ ಹೋಗಿ ಮತ್ತೆ ಶುಚಿ ಆಗುತ್ತದೆ..ಅದೇ ರೀತಿ ಬಟ್ಟೆ ಮಾಸಿದರೆ ಮಡಿವಾಳ ರಿಗೆ ಕೊಟ್ಟರೆ ಅವರು ಚೆನ್ನಾಗಿ ತೊಳೆದು ಕೊಡುತ್ತಾರೆ...ಆದರೆ 
ನಮ ಮನಸ್ಸಿನಲ್ಲಿರುವ ಕೊಳೆಯನ್ನು ಅಂದರೆ ಚಂಚಲವಾದ ನಮ್ಮ ಮನಸ್ಸಿನ ಕೆಟ್ಟ ಆಲೋಚನೆಗಳು,ತೊಳೆಯಬೇಕಾದರೆ  ನಾವು ಕೂಡಲ ಚೆನ್ನಸಂಗಯ್ಯನ ಶರಣ ಸಂಗವ ಮಾಡಬೇಕು.. ಅಂದರೆ ಶರಣರು ಅಷ್ಟು  ಸಾತ್ವಿಕರು,ಪರಿಶುದ್ದರು ಎಂದು ಚೆನ್ನ ಬಸವಣ್ಣನವರು ಅಭಿಪ್ರಾಯಪಡುತ್ತಾರೆ...ಶರಣರು ತಮ್ಮ ಕಾಯಕದಿಂದ ಮತ್ತು ಅವರ ಸಾಧನೆಗಳಿಂದ ಅನುಭಾವವನ್ನು ಪಡೆದಿರುವ ಜ್ಞಾನಿಗಳು  ಎಂದು ತಿಳಿಯಬಹುದು...


Sunday 27 November 2011

ವಚನ ಸಿಂಚನ ೧೩:ಭಕ್ತಿ ಮತ್ತು ಪ್ರೀತಿ

ಗಂಡನ ಮೇಲೆ ಸ್ನೇಹವಿಲ್ಲದ ಹೆಂಡತಿ,
ಲಿಂಗದ ಮೇಲೆ ನಿಷ್ಠೆ ಇಲ್ಲದ ಭಕ್ತ,
ಇದ್ದಡೆನೋ ಶಿವ ಶಿವಾ ಹೋದಡೆನೋ
ಕೂಡಲಸಂಗಮದೇವಾ ಹಡೆದ ಆವಿಂಗೆ ಉಣ್ಣದ ಕರುವ  ಬಿಟ್ಟಂತೆ..
                                                           -ಬಸವಣ್ಣ


ಇಲ್ಲಿ ಬಸವಣ್ಣನವರು ಪ್ರೀತಿ,ಭಕ್ತಿ,ಮಮತೆ ಮತ್ತು ಅವಶ್ಯಕತೆಗಳ ಬಗ್ಗೆ ಇರುವ ಸಾಮ್ಯತೆಯನ್ನು ವಿವರಿಸುತ್ತಾರೆ...
ಹೆಂಡತಿಗೆ ತನ್ನ ಗಂಡನ ಮೇಲೆ ಪ್ರೀತಿ ಸ್ನೇಹ ಇಲ್ಲದಿದ್ದರೆ ಅಂತ ಬದುಕಿದೆ ಅರ್ಥ ಇರುವುದಿಲ್ಲ...ಸಂಸಾರ ನಿಭಾಯಿಸುವುಸು ಕಷ್ಟ...ಅದೇ ರೀತಿ ಎದೆ ಮೇಲೆ  ಲಿಂಗವನ್ನು  ಕಟ್ಟಿಕೊಂದು ಅದನ್ನು ಪೂಜಿಸದೇ ಇದ್ದರೆ,ಅದನ್ನು ಆರಾಧಿಸದೆ ಇದ್ದರೆ ಸುಮ್ಮನೆ ಕಾಟಾಚಾರಕ್ಕೆ ಕಟ್ಟಿಕೊಂಡ ಹಾಗೆ ಆಗುತ್ತದೆ....ಇಂಥಹ ನಿಷ್ಠೆ ಇಲ್ಲದ ಭಕ್ತಿ ನಿಷ್ಪ್ರಯೋಜಕ ಎಂದು ಭಾವಿಸುತ್ತಾರೆ...

ಇಂಥಹ ಹೆಂಡತಿ ಮತ್ತು ಭಕ್ತರು ಇದ್ದರೇನು ಹೋದರೇನು ಎಂದು ಕೇಳುತ್ತಾರೆ.. ಅವರಿಂದ ಯಾವುದೇ ಮಹಾತ್ಕಾರ್ಯ ಆಗುವುದಿಲ್ಲ ಎಂದು ಹೇಳುತ್ತಾ,ಇವರನ್ನು ಹಡೆದ ಆಕಳಿನ ಹತ್ತಿರ ತನ್ನ ಕರುವನ್ನು  ಹಾಲು ಉಣ್ಣಲು ಬಿಟ್ಟರೆ ಅದು ಹಾಲುಣದೆ ತನ್ನ ತಾಯಿಯ ಪ್ರೀತಿ ಮತ್ತು ಮಮತೆ ಇಂದ ವಂಚಿತವಾದಂತೆ ಹೆಂಡತಿ ಗಂಡನ ಸ್ನೇಹದಿಂದ ವಂಚಿತಳಾಗುತ್ತಾಳೆ ಎಂದು ಹೋಲಿಸುತ್ತಾರೆ.....

Tuesday 15 November 2011

ವಚನ ಸಿಂಚನ ೧೨:ನಾಯಕತ್ವ

ಓಲೆ ಹತ್ತಿಯುರಿದೊಡೆ ನಿಲಬಹುದಲ್ಲದೆ
ಧರೆ ಹತ್ತಿಯುರಿದೊಡೆ ನಿಲಬಾರದು.
ಏರಿ ನೀರುಣ್ಬೋಡೆ, ಬೇಲಿ ಕೆಯ್ಯ ಮೇವೊಡೆ  ,
ನಾರಿ ತನ್ನ ಮನೆಯಲ್ಲಿ ಕಳುವೊಡೆ
ಇನ್ನಾರಿಗೆ ದೂರುವೆ ಕೂಡಲಸಂಗಮದೇವಾ ?
                                                --ಬಸವಣ್ಣ

ಇಲ್ಲಿ ಬಸವಣ್ಣನವರು ನಾಯಕತ್ವದ ಬಗ್ಗೆ ವಿಚಾರ ಮಾಡುತ್ತಾರೆ.ಕೆಲವು ಉದಾಹರಣೆಗಳನ್ನೂ ಕೊಡುತ್ತ ಇಲ್ಲಿ ನಾಯಕ ಮತ್ತು ಅವನ ಗುಣಗಳ ಬಗ್ಗೆ ಇಲ್ಲಿ ವಿಶ್ಲೇಷಿಸುತ್ತಾರೆ.
ಒಂದು ಓಲೆ ಉರಿಯುತ್ತಿದ್ದರೆ ಅದರ ಮುಂದೆ ನಿಲ್ಲ ಬಹುದು ಅಥವಾ ಅದನ್ನು ನಿಂದಿಸಬಹುದು.ಅದೇ,ಇಡಿ ಜೀವ ರಾಷಿಗಳೇ ಅವಲಂಬಿಸಿರುವ ,ಸಕಲ ಜೀವಗಳ ನೆಲೆಗೆ ಸಾಕ್ಷಿ ಆಗಿರುವ ಭೂಮಿಯೇ ಉರಿಯುತ್ತಿದ್ದರೆ ಏನು ಮಾಡಲ ಆಗದು ಅಲ್ಲವೇ?
ಇದೆ ರೀತಿ ಕೆರೆಗೆ ಏರಿಯನ್ನು ನೆರು ಸಂಗ್ರಹಿಸಲು ಅಥವಾ ನೀರನ್ನು ತಡೆಯಲು ಕಟ್ಟಿರುತ್ತಾರೆ,ಆ ಏರಿಯೇ ನೀರನ್ನು ಕುಡಿದರೆ ಅನಾಹುತವಲ್ಲವೇ?
ಅದೇ ರೀತಿ ಹೊಲದಲ್ಲಿ ಬೇಲಿಯನ್ನು ಸಂರಕ್ಷಿಸಲು ಹಾಕಿರುತ್ತಾರೆ,ಆ ಬೇಲಿಯೇ ಎದ್ದು ಹೊಲದ ತುಂಬಿ ಬೆಳೆದರೆ ಬೇರೆ ಬೆಳೆಯನ್ನು ಬೆಳೆಯಲು ಅಸಾಧ್ಯ...ಬೇಲಿಯೇ ಎದ್ದು ಹೊಲ ಮೇಯ್ದರೆ ಏನು ಮಾಡಲು ಆಗುವುದಿಲ್ಲ...
ಹಾಗೆ ಒಂದು ಸಂಸಾರದಲ್ಲಿ ಮನೆಯ ಯಜಮಾನಿ ಅನ್ನಿಸಿಕೊಂಡ ಮತ್ತು ಸಂಸಾರ ನಿಭಾಯಿಸಬೇಕಾದ  ಒಂದು ಹೆಣ್ಣು ತನ್ನ ಮನೆಯಲ್ಲಿ ಕಳ್ಳತನ ಮಾಡಿದರೆ ಆ ಮನೆ ಇನ್ನೆಷ್ಟರ ಮಟ್ಟಿಗೆ ಸುಧಾರಿಸುತ್ತದೆ ಅಲ್ಲವೇ?
ಈ ರೀತಿ ನಾಯಕ ಎನ್ನಿಸಿ ಕೊಂಡವರೆ ತಪ್ಪು ಮಾಡಿದರೆ ನಾನು ಇನ್ನು ಯಾರಿಗೆ ದೂರಲಿ ಎಂದು ಕೂಡಲ ಸಂಗಮ ದೇವನಲ್ಲಿ ಕೇಳಿಕೊಳ್ಳುತ್ತಾರೆ... 

Sunday 13 November 2011

ವಚನ ಸಿಂಚನ ೧೧ :ಸ್ವರ್ಗ ನರಕ

ದೇವಲೋಕ ಮರ್ತ್ಯಲೋಕವೆಂಬುದು
ಬೇರಿಲ್ಲ ಕಾಣಿರೋ !
ಸತ್ಯವ ನುಡಿವುದೇ ದೇವಲೋಕ..
ಮಿಥ್ಯವ ನುಡಿವುದೇ ಮರ್ತ್ಯಲೋಕ..
ಆಚಾರವೇ ಸ್ವರ್ಗ,ಅನಾಚಾರವೇ ನರಕ..
ಕೂಡಲಸಂಗಮದೇವಾ,ನೀವೇ ಪ್ರಮಾಣು
                                                 -ಬಸವಣ್ಣ

ಇಲ್ಲಿ ಬಸವಣ್ಣನವರು ಜನರಲ್ಲಿರುವ ಸ್ವರ್ಗ,ನರಕ ಎಂಬ ಮೂಢನಂಬಿಕೆಗಳನ್ನು ಸ್ವಲ್ಪ ಖಾರವಾಗಿ ವಿರೋಧಿಸುತ್ತಾರೆ....ಇವೇ ಅಲ್ಲದೆ ಪಾಪ,ಪುಣ್ಯ,ದೇವಲೋಕ,ಪಾತಾಳ ಲೋಕ ಎಂಬ ಮೂಢ(ಅಪ)ನಂಬಿಕೆಗಳು ಜನರಲ್ಲಿ ಭೇರು ಬಿಟ್ಟಿವೆ...ಅದಕ್ಕೆ ಬಸವಣ್ಣನವರು ಹೇಳುತ್ತಾರೆ,ದೇವಲೋಕ ಮರ್ತ್ಯಲೋಕ ಎಂದು ಬೇರೆ ಬೇರೆ ಇಲ್ಲ,,ಎಲ್ಲಿ ಸತ್ಯ ನುಡಿಯುತ್ತಾರೋ ,ಎಲ್ಲಿ ಸತ್ಯಕ್ಕೆ ಬೆಲೆ ಇದೆಯೋ ಅದೇ ದೇವಲೋಕ,ಎಲ್ಲಿ ಸುಳ್ಳುಗಳನ್ನೇ ಹೇಳುತ್ತಾರೋ ಅದೇ ಮರ್ತ್ಯಲೋಕ...

ಎಲ್ಲಿ ಆಚಾರ ವಿಚಾರಗಳು ನಡೆಯುತ್ತವೋ ,ಎಲ್ಲಿ ಆಚಾರವಂತರು ಇದ್ದಾರೋ,ಎಲ್ಲಿ ವಿನಯವಂತರು ಇದ್ದಾರೋ ಅದಕ್ಕಿಂತ ಸ್ವರ್ಗ ಬೇರೆ ಇಲ್ಲ... ಇಂಥ ಪರಿಸರವೇ ಸ್ವರ್ಗ ಲೋಕ ಎಂದು ಭಾವಿಸುತ್ತಾರೆ...
ಈಲಿ ಆದರ,ಅನಾಚಾರ,ಮೋಸ,ಲಂಚ ಇವೆಲ್ಲಾ ಇರುತ್ತದೋ ಅದೇ ನರಕ..ಅದಕ್ಕಿಂತ ಕೆಟ್ಟ ನರಕ ಬೇರೆ ಇಲ್ಲ  ಎಂದು ಹೇಳುತ್ತಾ
ಆಚಾರವಂತರಾಗಿ ಬಾಳಿ ಸ್ವರ್ಗದಂಥ ಪರಿಸರವನ್ನು ಬೆಳೆಸಿ ಎಂದು ಸೂಚಿಸುತ್ತಾ ಜನರ ಎಲ್ಲ ನಡವಳಿಕೆಗಳಿಗೆ ನೀವೇ ಸಾಕ್ಷಿ ಎಂದು ಕೂಡಲಸಂಗಮದೇವನಲ್ಲಿ ಬೇಡಿಕೊಳ್ಳುತ್ತಾರೆ...

Monday 7 November 2011

ವಚನ ಸಿಂಚನ ೧೦: ಶಿವ ಭಕ್ತರು

ಬೇವಿನ ಬೀಜವ ಬಿತ್ತಿ,
ಬೆಲ್ಲದ ಕಟ್ಟೆಯ ಕಟ್ಟಿ,
ಆಕಳ ಹಾಲನೆರೆದು,
ಜೇನು ತುಪ್ಪವ ಹೊಯ್ದಡೆ,
ಸಿಹಿಯಾಗಬಲ್ಲುದೆ,ಕಹಿಯವುದಲ್ಲದೆ
ಶಿವಭಕ್ತರಲ್ಲದವರ ಕೂಡೆ ನುಡಿಯಲಾಗದು
ಕೂಡಲಸಂಗಮದೇವಾ...
                          -ಬಸವಣ್ಣ

ಬೇವಿನ ಹಣ್ಣು ಮತ್ತು ಎಲೆ ಎರಡು ಕಹಿಯಾಗಿರುತ್ತದೆ... ಬೇವು ಎಂದರೆ ಕಹಿ.. ,ಇಂಥ ಬೇವಿನ ಬೀಜವನ್ನು ಬಿತ್ತಿ,ಅದನ್ನು ಸಿಹಿಯಾಗಿಸಲು ಪ್ರಯತ್ನಿಸುವುದು ಮೂರ್ಖತನ.. ಬೀಜವನ್ನು ಬಿತ್ತಿ ಸುತ್ತ ಸಿಹಿಯಾದ ಬೆಲ್ಲದಿಂದ ಕಟ್ಟೆಯನ್ನು ಕಟ್ಟಿ,ನೀರಿನ ಬದಲು ಹಾಲನ್ನು ಸುರಿದು,ಅದರ ಸುತ್ತ ಜೇನು ತುಪ್ಪವನ್ನು ಸುರಿದು,ಇನ್ನೂ ಅನೇಕ ಸಿಹಿ ಪದಾರ್ಥಗಳನ್ನು ಅದರ ಸುತ್ತ ಹಾಕಿದರೂ ಕೂಡ,ಆ ಓದು ಬೀಜ ಮೊಳಕೆ ಒಡೆದು ಗಿಡವಾದಾಗ ಅದರ ಎಲೆಗಳಾಗಲಿ ಹೂವಾಗಲಿ ಕಹಿಯಾಗಿಯೇ ಇರುತ್ತದೆ.. ಅದು ತನ್ನ ನೈಜ ಸತ್ವವಾದ ಕಹಿ ಅಂಶವನ್ನು ಬಿಡುವುದಿಲ್ಲ...ನಿಂಬೆ ಹಣ್ಣಿನ ಗಿಡ ತನ್ನ ಹುಳಿ ಅಂಶವನ್ನು ಹೇಗೆ ಬಿದುವುದಿಲ್ಲವೋ ಅದೇ ರೀತಿ ಬೇವಿನ ಗಿಡ...ಬೇವಿಗೆ ಕಹಿ ಮತ್ತು ನಿಂಬೆ ಹಣ್ಣಿಗೆ ಹುಳಿ ನೈಸರ್ಗಿಕವಾದ ಸತ್ವ,ಅದನ್ನು ಬೇರೆ ಮಾಡಲು ಸಾಧ್ಯವಿಲ್ಲ...

ಇದೆ ರೀತಿ ಶಿವಭಕ್ತರಲ್ಲದವರನ್ನು ಮಾತಾಡಿಸುವುದು,ಅವರ ಜೊತೆಗೆ ವ್ಯವಹಾರ ಮಾಡುವುದು ತುಂಬ ಕಷ್ಟ...ಶಿವ ಭಕ್ತರು ಅಂದರೆ ಸಾತ್ವಿಕರೂ ಸಜ್ಜನರೂ ಎಂದು ಬಸವಣ್ಣನವರು ಅಭಿಪ್ರಾಯ ಪಡುತ್ತಾರೆ .. ಅಂಥವರ ಜೊತೆ ವ್ಯವಹರಿಸುವುದು ಬೆವಿನಷ್ಟೇ ಕಹಿ ಆದ ಅನುಭವ ಎಂದು ಹೇಳುತ್ತಾರೆ.....

Sunday 30 October 2011

ವಚನ ಸಿಂಚನ ೯:ಎನ್ನ ಕರ ಸ್ಥಳಕ್ಕೆ ಬಾರಯ್ಯಾ


ಜಗದಗಲ ಮುಗಿಲಗಲ  ಮಿಗೆಯಗಲ  ನಿಮ್ಮಗಲ 
ಪಾತಾಳದಿಂದತ್ತತ್ತ  ನಿಮ್ಮ ಶ್ರೀ ಚರಣ
ಬ್ರಹ್ಮಾಂಡದಿಂದತ್ತತ್ತ ನಿಮ್ಮ ಶ್ರೀ ಮುಕುಟ
ಅಗಮ್ಯ ಅಗೋಚರ ಅಪ್ರತಿಮ ಲಿಂಗವೇ 
ಕೂಡಲ ಸಂಗಮ ದೇವಯ್ಯ
ಎನ್ನ ಕರ ಸ್ಥಳಕ್ಕೆ ಬಂದು ಚುಳುಕಾದಿರಯ್ಯ
                                   -ಬಸವಣ್ಣ
 
ಶಿವನು ಇಡೀ ವಿಶ್ವವನ್ನೇ ಆವರಿಸಿದ್ದಾನೆ..ಅವನಿಗೆ ಆದಿ ಅಂತ್ಯವಿಲ್ಲ...ಆತ  ವಿಶ್ವರೂಪಿ..ಇಡೀ ಭೂ ಮಂಡಲವನ್ನೇ ಆವರಿಸಿದ್ದಾನೆ...ಶಿವನ ಪಾದಗಳು ಪಾತಾಳದಿಂದ ಆಚೆಗೆ ಇದೆ..ಹಾಗೆ ಆತನ ಶಿರಸ್ಸು,ಮುಕುಟ ಬ್ರಹ್ಮಾಂಡದ ಆಚೆಗೆ ಇದೆ...ಯಾರ ಗಮನಕ್ಕೂ ಬಾರದೆ,ಯಾರ ಕಣ್ಣಿಗೂ ಗೋಚರಿಸದೆ ಇರುವ ಅಪ್ರತಿಮವಾದ ಸ್ವರ್ರೋಪ ಎಂದು ಶಿವನನ್ನು ಹಾಡಿ ಹೊಗಳುವ ಬಸವಣ್ಣ ಈ ವಚನದಲ್ಲಿ ವಿಶ್ವರೂಪಿಯಾದ ಕೂಡಲಸಂಗಮದೇವನು ಇಷ್ಟಲಿಂಗದ ರೂಪದಲ್ಲಿ ತನ್ನ ಅಂಗೈ ಮೇಲೆ ಬಂದು ಇಡೀ ವಿಶ್ವದ ದರ್ಶನವನ್ನು ನೀಡಿದ್ದಕ್ಕೆ ಧನ್ಯಾತ ಭಾವದಿಂದ ಕೂಡಲಸಂಗಮನನ್ನು ನೆನೆಯುತ್ತಾರೆ..

ಇಷ್ಟಲಿಂಗದ ಆಕಾರ ವಿಶ್ವದ ರೂಪದಲ್ಲಿ ಇದೆ ಮತ್ತು ಇಷ್ಟಲಿಂಗವು ಸಾಂಸ್ಕೃತಿಕ, ಸಾಮಾಜಿಕ, ಆರ್ಥಿಕ, ಧಾರ್ಮಿಕ, ಸ್ತ್ರೀ ಮತ್ತು ಪುರುಷ ಸಮಾನತೆಯನ್ನು ಮನದಲ್ಲಿ ತುಂಬುವ ಅರಿವಿನ ಬೆಳಕಾಗಿದೆ.. ಇಷ್ಟಲಿಂಗವು ಸಮಗ್ರ ಕ್ರಾಂತಿಯ ಮಾರ್ಗದರ್ಶಿ. ಸರ್ವರನ್ನು, ಅವರೊಳಗಿನ ಪರಮಾತ್ಮನೊಡನೆ ಒಂದುಗೂಡಿಸುವ ಸಾಧನ.
 
 


Monday 24 October 2011

ವಚನ ಸಿಂಚನ ೮:ಎಲ್ಲೆಲ್ಲೂ ನೀನೇ ತುಂಬಿ

ವಚನದಲ್ಲಿ ನಾಮಾಮೃತ ತುಂಬಿ
ನಯನದಲ್ಲಿ ನಿಮ್ಮ ಮೂರುತಿ ತುಂಬಿ,
ಕಿವಿಯಲ್ಲಿ ನಿಮ್ಮ ಕೀರುತಿ ತುಂಬಿ,
ಮನದಲ್ಲಿ ನಿಮ್ಮ ನೆನಹು ತುಂಬಿ
ಕೂಡಲ ಸಂಗಮ ದೇವಾ !
ನಿಮ್ಮ ಚರಣ ಕಮಲದಲ್ಲಾನು ತುಂಬಿ.
                                    -ಬಸವಣ್ಣ

ನನ್ನ ಪ್ರತಿಯೊಂದು ಮಾತಿನಲ್ಲೂ ಅಮೃತವಾಣಿಯಂಥ ನಿನ್ನ ನಾಮವು ತುಂಬಿರಲಿ..ನನ್ನ ಕಣ್ಣುಗಳ ತುಂಬಾ ನಿನ್ನ ರೂಪವಂತವಾದ ಮೂರ್ತಿ ತುಂಬಿರಲಿ...ನನ್ನ ಕಿವಿಯಲ್ಲಿ ಸದ್ದ ನಿನ್ನ ಘನವಾದ ಕೀರ್ತಿ ತುಂಬಿರಲಿ...ನನ್ನ ಮನದಲ್ಲಿ ಸದಾ ನಿನ್ನ ನೆನಪುಗಳೇ ತುಂಬಿರಲಿ ಎಂದು ಕೂಡಲಸಂಗಮ ದೇವನಲ್ಲಿ ಭಿನ್ನಹಿಸುತ್ತಾ ಬಸವಣ್ಣ ಅರಿವಿನ ಸಂಕೇತವಾದ ನಿನ್ನ ಪಾದದಲ್ಲಿ ನಾನು ತುಂಬಿರುವಂತೆ ಮಾಡು ಎಂದು ಕೇಳುತ್ತಾ ಸದಾ ನಿಮ್ಮ ಸೇವೆ ಮಾಡುತ್ತೇನೆ ಎಂದು ಹೇಳುತ್ತಾರೆ...

Tuesday 18 October 2011

ವಚನ ಸಿಂಚನ ೭:ದಯೆ

ದಯವಿಲ್ಲದ ಧರ್ಮವೆದೇವುದಯ್ಯಾ ?
ದಯವೇ ಬೇಕು ಸಕಲ ಪ್ರಾಣಿಗಳೆಲ್ಲರಲ್ಲಿಯೂ,
ದಯವೇ ಧರ್ಮದ ಮೂಲವಯ್ಯ,
ಕೂಡಲ ಸಂಗಯ್ಯನಂತಲ್ಲ ದೊಲ್ಲನಯ್ಯಾ.
                                                     -ಬಸವಣ್ಣ

ಮನುಷ್ಯನ ಸುಖ ಜೀವನಕ್ಕೆ ದಯೆ,ಕರುಣೆ ,ಅನುಕಂಪ ಇವೆಲ್ಲ ಅವಶ್ಯ..ವಿಶ್ವದ ಎಲ್ಲ ಧರ್ಮವೂ ಸಾರುವುದು ಶಾಂತಿ ಮತ್ತು ದಯೆಯನ್ನು..ಎಲ್ಲ ಧರ್ಮದ ತಳಹದಿ ದಯೆ..ಮಾನವೀಯತೆಯ ಹುಟ್ಟು ದಯಾಮಯವಾದ ಮನಸ್ಸಿನಿಂದ ಮಾತ್ರ ಸಾಧ್ಯ..ಜಗತ್ತಿನ ಎಲ್ಲ ಜೀವನಾಡಿಗಳಲ್ಲೂ ದಯೆ ಎಂಬ ಅಂತಃ ಕರಣ ಇರಬೇಕು ಎಂದು ಬಸವಣ್ಣನ ಆದಿಯಾಗಿ ಎಲ್ಲ ಶರಣರೂ  ಹೇಳುತ್ತಾರೆ...ದಯೆಯೇ ಧರ್ಮದ ಮೂಲ ಎಂದು ಹೇಳುವ ಬಸವಣ್ಣ ದಯೆ ಇಲ್ಲದ ಧರ್ಮ ವಿನಾಶಕಾರಿಯಾದದ್ದು ಎಂದು ಅಭಿಪ್ರಾಯ ಪಡುತ್ತಾರೆ...ಸಮಾನತೆಯ ಸಾರವನ್ನು ಸಾರಿದ ಬಸವಣ್ಣನ ಕೃತಿಯ ಮೂಲ ಕೂಡ ದಯೆ ಎಂದರೆ ತಪ್ಪಾಗಲಾರದು...

Tuesday 11 October 2011

ವಚನ ಸಿಂಚನ ೬:ದೇವಾಲಯ

ಉಳ್ಳವರು ಶಿವಾಲಯ ಮಾಡುವರು,
ನಾನೇನ ಮಾಡುವೆ ಬಡವನಯ್ಯ,
ಎನ್ನ ಕಾಲೇ ಕಂಭ ದೇಹವೇ ದೇಗುಲ
ಶಿರವೇ ಹೊನ್ನ  ಕಳಶವಯ್ಯಾ,
ಕೂಡಲ ಸಂಗಮದೆವಯ್ಯ ಕೇಳಯ್ಯಾ,
ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ.
                                              -ಬಸವಣ್ಣ

ದೇಹವನ್ನು ದೇವಾಲಯಕ್ಕೆ ಹೋಲಿಸಿ ಪ್ರತಿಯೊಂದು ದೇಹವನ್ನು ಸಾಕ್ಷಾತ್ಕಾರಗೊಳಿಸಿದ ವಚನ ಇದು..ಎಲ್ಲ ಜಾತಿ ಧರ್ಮವನ್ನು ಮೀರಿ ಪ್ರತಿಯೊಬ್ಬರೂ ಪ್ರವೇಶ ನೀಡಿ ಅಧ್ಯಾತ್ಮ ಸುಖವನ್ನು ಅನುಭವಿಸಬಹುದಾದ ದೇವಾಲಯ ಇದು..ಇದು ಬಸವಣ್ಣನ ಮಹಾ ಕಲ್ಪನೆ...ತನ್ನ ಕಾಲೇ ದೇವಾಲಯದ ಕಂಭವಿದ್ದ  ಹಾಗೆ,ತನ್ನ ಶಿರಸ್ಸು ಕಳಸದ ಪ್ರತಿರೂಪ ಎಂದು ಹೇಳುವ ಬಸವಣ್ಣನ  ಪ್ರಕಾರ ದೇವರು ಅಂದರೆ ಸತ್ಯ,ಧರ್ಮದಿಂದ ಕೂಡಿದ ನಮ್ಮ ಜೀವ..ಇಂಥ ದೇವಾಲಯವು ಜಂಗಮ ಸ್ವರೂಪವೂ ಹೌದಾದ್ದರಿಂದ ಇದಕ್ಕೆ ಅಳಿವಿಲ್ಲ ಎಂದು ಹೇಳುತ್ತಾರೆ.....

ಅಲ್ಲದೆ ಈ ವಚನದಲ್ಲಿ ದೇವಾಲಯಗಳನ್ನು  ನಿರ್ಮಿಸುವ ಶ್ರೀಮಂತರು ಆಢಂಭರದ ಪ್ರತಿರೂಪ,ಅದು ಶಿವನಿಗೆ ಅರ್ಪಿತವಲ್ಲ..ಅದು ತೋರ್ಪಡಿಕೆಗೆ ಮಾಡುವ ಕೆಲಸ ಎಂದು ಹೇಳುತ್ತಾ ಅಂಥ ಸ್ಥಾವರಕ್ಕೆ ಅಳಿವಿದೆ ಎಂದು ಹೇಳುತ್ತಾರೆ...ದೇವಾಲಯಗಳ ನಿರ್ಮಾಣಕ್ಕೆ ಶರಣರ ವಿರೋಧ ಈ ವಚನದಲ್ಲಿ ಎದ್ದು ಕಾಣುತ್ತದೆ."ದೇಹವೇ ದೇವಾಲಯ" ಎಂದು ಸಾರಿದ ಬಸವಣ್ಣನ ಅನುಭವ ಚಿಂತನೆ ಇಲ್ಲಿ ಕಾಣಬಹುದು...

 
 

Wednesday 5 October 2011

ವಚನ ಸಿಂಚನ ೫:ಮನದ ಮೊನೆ

ಸಮುದ್ರ ಘನವೆ೦ಬೆನೆ ? ಧರೆಯ ಮೇಲಡಗಿತ್ತು,
ಧರೆ ಘನವೆ೦ಬೆನೆ ? ನಾಗೇಂದ್ರನ ಫಣಾಫಣಿಯ ಮೇಲಡಗಿತ್ತು,
ನಾಗೇಂದ್ರ ಘನವೆ೦ಬೆನೆ ? ಪಾರ್ವತಿಯ ಕಿರು ಬೆರಳ ಕುಣಿಕೆಯ ಮುದ್ರಿಕೆಯಾಗಿತ್ತು,
ಅಂತಹ ಪಾರ್ವತಿ ಘನವೆ೦ಬೆನೆ ? ಪರಮೇಶ್ವರನ ಅರ್ಧಾಂಗಿಯಾದಳು,
ಅಂತಹ ಪರಮೇಶ್ವರ ಘನವೆ೦ಬೆನೆ ? ನಮ್ಮ ಕೂಡಲ ಸಂಗನ ಶರಣರ
ಮನದ ಮೊನೆಯ ಮೇಲಡಗಿದನು !!!
                                               -ಬಸವಣ್ಣ
 
ಈ ವಚನದಲ್ಲಿ ಶರಣ ಶ್ರೇಷ್ಠತೆಯ ಹೊಳಹಿದೆ.ದೇವನಿಗಿಂತ ಜಂಗಮ ಶ್ರೇಷ್ಠ ದೊಡ್ಡದು,ಸಮುದ್ರ ಬಹು ಘನವಾದುದು ಎನ್ನಲು ಅದು ಹೂಮಿಯನ್ನೇ ಅವಲಂಬಿಸಿದೆ.
ಈ ಭೂಮಿಯೇ ದೊಡ್ಡದು ಎನ್ನಲು ಆದಿಶೇಷನು ಅದನ್ನು ಹೊತ್ತಿದ್ದಾನೆ,ಆ ಆದಿಶೇಷನೆ ಘನಮಹಿಮ ಎನ್ನಲು ಅದು ಪಾರ್ವತಿಯ ಕಿರು ನೆರಳಿನ ಉಂಗುರಕ್ಕೆ ಮುದ್ರಿಕೆಯಾಗಿದೆ,ಪಾರ್ವತಿಯೇ ಘನವೆನ್ನಲು ಅವಳು ಪರಮೇಶ್ವರನ ಅರ್ಧಾಂಗಿಯಾದಳು.ಪರಮೇಶ್ವರನೆ ಘನವೆನ್ನಲು ಅವನು ಶರಣರ ಮನದ ಮೊನೆಯಲ್ಲಿ ಹುದುಗಿದನು, ಶರಣರ ಹೃದಯದಲ್ಲಿ ಆಶ್ರಯ ಬೇಡಿದನು,ಇಂತಹ ಭಾವನ ಮೊಳೆತ್ತದ್ದರಿಂದಲೇ "ಎನಗಿಂತ ಕಿರಿಯರಿಲ್ಲ,ಶಿವ ಭಕ್ತರಿಗಿಂತ ಹಿರಿಯರಿಲ್ಲ" ಎಂದು ನುಡಿದು ವಿನಯಶೀಳರಾದರು,ಜಂಗಮ ನಿಷ್ಟರಾದರು ಬಸವಣ್ಣನವರು.

Tuesday 27 September 2011

ವಚನ ಸಿಂಚನ ೪: ಅಪರಾಧ

ಮನದೊಡೆಯ ಮಹಾದೇವ ಮಾನವ ನೋಡಿಹನೆಂದು
ಮನುಜರ ಕೈಯಿಂದ ಒಂದೊಂದು ನುಡಿಸುವನು
ಇದಕೆ ಕಳವಳಿಸದಿರು ಮನವೇ,ಕಾತರಿಸದಿರು ತನುವೆ,
ನಿಜವ ಮರೆಯದಿರು ಕಂಡ್ಯಾ ನಿಶ್ಚಿಂತವಾಗಿರು ಮನವೇ,
ಬಸವಣ್ಣ ಪ್ರಿಯ ಚೆನ್ನ ಸಂಗಯ್ಯನು
ಬೆಟ್ಟದನಿತಪರಾಧವನು  ಒಂದು ಬೊಟ್ಟಿನಲ್ಲಿ ತಾತೊಡುವೆನು....
                                                      ----------------ಅಕ್ಕ ನಾಗಮ್ಮ...


ಮಾಹಮನೆಯ ಮಾಹತಾಯಿ,ಕ್ರಾಂತಿಮಾತೆ,ಬಸವಣ್ಣನವರ ಸೋದರಿ ಅಕ್ಕ ನಾಗಮ್ಮ  ಮನಕ್ಕೆ ಮನವೇ ಸಾಕ್ಷಿಯಾಗಿ ನಡೆದವಳು,ಚನ್ನ ಬಸವಣ್ಣನ ಮಹಾಮಾತೆಯಾದ ಈಕೆಯು ಬಸವಣ್ಣನ ಸಾಧನೆಗೆ ಕಾರಣಳು.ತನಗೆ ದೊರೆತಿದ್ದ ಸಾಮಾಜಿಕ ಅಪರಾಧಗಳನ್ನು ಒಮ್ಮನಸ್ಸಿನಿಂದ ಚನ್ನ ಸಂಗಯ್ಯನಿಗೆ ಅರ್ಪಿಸಿದಳು.ಆತನು ಬೆಟ್ಟದಂತಹ ಅಪರಾಧವನ್ನು ಒಂದು ಬೊಟ್ಟಿನಲ್ಲಿ ತಾ ಕಳೆಯುವನು ಎಂಬ ಧೃಢ ನಂಬಿಕೆ  ಇವಳದು...

Friday 23 September 2011

ವಚನ ಸಿಂಚನ ೩ : ಭಕ್ತಿಯ ಪರಾಕಾಷ್ಟೆ


ಅರಸಬ ಭಕ್ತಿ ಅಹಂಕಾರದಲ್ಲಿ ಹೋಯಿತು,
ಬ್ರಾಹ್ಮಣನ ಭಕ್ತಿ ಮುಟ್ಟು ತಟ್ಟಿನಲ್ಲಿ ಹೋಯಿತು,
ಶೀಲವಂತನ ಭಕ್ತಿ ಪ್ರಪಂಚಿನಲ್ಲಿ ಹೋಯಿತು,
ಸೆಟ್ಟಿಯ ಭಕ್ತಿ ವ್ಯಾಪಾರದಲ್ಲಿ ಹೋಯಿತು,
ನೀವು ಕೇಳಿರೋ ಇಂಥವರ ಭಕ್ತಿಗೆ ಊರಿಂದ 
ಹೊರಗಣ ಡೊ೦ಬನೇ ಸಾಕ್ಷಿ ಕಾಣಾ ಕಲಿ ದೇವರ ದೇವಾ !!!
                                              -ಮಡಿವಾಳ ಮಾಚಿದೇವ

ಪ್ರಾಪಂಚಿಕ ವಿಷಯಾಭಿಲಾಷೆಯನ್ನು ಹೊಂದಿ,ತೋರುವ ಭಕ್ತಿಯನ್ನು ಇಲ್ಲಿ ವಿಡ೦ಭಿಸಿದ್ದಾರೆ.ಸರ್ವ ಸಂಪತ್ತಿಗೆ ಒಡೆಯನಾದ ರಾಜನ ಭಕ್ತಿ ಗರ್ವದಲ್ಲಿ ಹಾಳಾಯಿತು.ಬ್ರಾಹ್ಮಣನ ಭಕ್ತಿ ಮಾಡಿ ಮೈಲಿಗೆಗಳ ಅವಾಂತರದಲ್ಲಿ ನಷ್ಟವಾಯಿತು.ಶೀಲವಂತನ ಭಕ್ತಿ ಲೌಕಿಕ ಸುಖದಲ್ಲೇ ಲೀನವಾದ ಸಂಸಾರದಲ್ಲಿ ಸೇರಿ ಹೋಯಿತು.ಶೆಟ್ಟಿಯ ಭಕ್ತಿಯು ಲೋಭ ಬುದ್ದಿಯಂದ ಕೂಡಿದ ವಂಚಕತನದ ವ್ಯಾಪಾರದಲ್ಲಿ ಕೂಡಿ ಹೋಗಿತ್ತು.ನೀವು ಕೇಳಿರೋ ಇಂಥವರ ಡಾಂಭಿಕ ಭಕ್ತಿಗೆ ಗಣೆಯ ಮೇಲೆ ನಿಂತು ದೊಂಬರಾಟ ಆಡುವ ಡೊ೦ಬನೇ ಸಾಕ್ಷಿ ಕಾಣಾ ಕಲಿ ದೇವರ ದೇವಾ.
ದೈವ ಭಕ್ತಿಗೆ ಅಹಂಕಾರ ಸಲ್ಲದ ವಿಚಾರ,ಮಾಡಿ ಮೈಲಿಗೆಗಳ ಭಾವ,ಭಕ್ತನಿಗೆ ಸಲ್ಲದ್ದು,ದೇವನಿಗೂ ಒಲ್ಲದ ವಿಚಾರ ಅದು ಎಂಬ ಅರ್ಥವನ್ನು  ಈ ವಚನದಲಿ ಕಾಣಬಹುದು...

Thursday 22 September 2011

ವಚನ ಸಿಂಚನ ೨: ಆಸೆ

ಅಂಗಕ್ಕೆ ಬಡತನವಲ್ಲದೆ  ಮನಕ್ಕೆ ಬಡತನವುಂಟೇ?
 ಬೆಟ್ಟ ಬಲ್ಲಿತ್ತೆ೦ದಡೆ,ಉಳಿಯ ಮೊನೆಯಲ್ಲಿ ಬಡತನವಿದ್ದಡೆ  ಒಡೆಯದೆ?
 ಘನ ಶಿವಭಕ್ತರಿಗೆ ಬಡತನವಿಲ್ಲ ,ಸತ್ಯರಿಗೆ ದುಷ್ಕರ್ಮವಿಲ್ಲ,
 ಎನಗೆ ಮಾರಯ್ಯ ಪ್ರಿಯ ಅಮಲೇಶ್ವರ ಲಿಂಗವುಳ್ಳನ್ನಕ್ಕ
 ಆರ ಹಂಗಿಲ್ಲ ಮಾರಯ್ಯ !!!
                               -ಆಯ್ದಕ್ಕಿ ಲಕ್ಕಮ್ಮ


ಅತಿಯಾಸೆ ಇಲ್ಲದಿದ್ದರೆ ಮನಸ್ಸು ಯಾವಾಗಲು ಶ್ರೀಮಂತಿಕೆಯನ್ನು ಅನುಭವಿಸುತ್ತದೆ.ಬೆಟ್ಟ ಬೃಹತ್ತಾಗಿರಬಹುದು.ಉಳಿಯ ಮೊನೆಗೆ ಬಡತನವಿದ್ದೀತೆ?
 ಸತ್ಪಾತ್ರನನ್ನು ದುಷ್ಕರ್ಮಿಗಳು ಕಾಡುವುದಿಲ್ಲ.ಘನ ಭಕ್ತರಿಗೆ ಬಡತನವಿಲ್ಲ.ಮಾರಯ್ಯ ಪ್ರಿಯ ಅಮಲೇಶ್ವರ ಲಿಂಗವನ್ನು ನಂಬಿರುವಾಗ ಅನ್ಯರ ಹಂಗು ನಮಗಿಲ್ಲ....

Tuesday 20 September 2011

ವಚನ ಸಿಂಚನ ೧: ಜ್ಞಾನದ ಬಲ

ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯ,
ಜ್ಯೋತಿಯ ಬಲದಿಂದ ತಮಂಧದ ಕೇಡು ನೋಡಯ್ಯ,
ಸತ್ಯದ ಬಲದಿಂದ ಅಸತ್ಯದ ಕೇಡು ನೋಡಯ್ಯ,
ಪರುಷದ ಬಲದಿಂದ ಅವಲೋಹದ ಕೇಡು ನೋಡಯ್ಯ,
ಕೂಡಲ ಸಂಗನ ಶರಣರ ಅನುಭಾವದ ಬಲದಿಂದ
 ಎನ್ನ ಭವದ ಕೇಡು ನೋಡಯ್ಯ !!!!
                                                                         -ಬಸವಣ್ಣನವರು

ಬೆಳಕು ಜ್ಞಾನದ ಸಂಕೇತ,ಕತ್ತಲೆ ಅಜ್ಞಾನದ ಕುರುಹು.ಈ ಜ್ಞಾನವೆಂಬ ಬೆಳಕಿನ ಬಲದಿಂದ ಅಜ್ಞಾನವೆಂಬ ಕತ್ತಲು ಹರಿಯುತ್ತದೆ.ಜ್ಞಾನದ ಬೆಳಕಿನಲ್ಲಿ ವಿವೇಕ ಅರಳುತ್ತದೆ.ಸತ್ಯದ ಬಲದಿಂದ ಅಸತ್ಯ ಅಳಿಯುತ್ತದೆ.ಅಮೂಲ್ಯವಾದ ಸ್ಪರ್ಶ ಮಣಿಯ ಸೋಂಕಿನ ಬಲದಿಂದ ಕಬ್ಬಿಣ ಮುಂತಾದ ಅವಲೋಹಗಳು ರೂಪಾಂತರ ಪಡೆಯುತ್ತವೆ.ನೀರಿನಲ್ಲಿ ತೋಯ್ದು ಕಬ್ಬಿಣವು ಬಲು ಬೇಗ ತುಕ್ಕು ಹಿಡಿದು ಪ್ರಯೋಜನಕ್ಕೆ ಬಾರದ ವಸ್ತುವಾಗಿರುತ್ತದೆ.ಅದಕ್ಕೆ..ಪರುಷ ಮಣಿಯ ಸ್ಪರ್ಶದಿಂದ  ಕಬ್ಬಿಣವು ಭಿನ್ನರೂಪ ತಾಳುತ್ತದೆ.ಅಂತೆಯೇ ಶರಣರ ಒಡನಾಟ ಅವರ ಅನುಭಾವದ ನುಡಿಗಳ ಸತ್ಸಂಗ ದಿಂದ ಅಜ್ಞಾನ ಅಡಗಿ ಭವದ ಭಾವಗಳು ಇಲ್ಲದಂತಾಗುವವು.ಸಜ್ಜನರ ಸಂಗವ ಮಾಡುವುದು  ದುರ್ಜನರ ಸಂಗ ಬೇಡವಯ್ಯ ಎಂಬ ನುಡಿಮುತ್ತು  ಕೂಡ ಬಸವಣ್ಣ ನವರದೇ !!!