Sunday, 30 October 2011

ವಚನ ಸಿಂಚನ ೯:ಎನ್ನ ಕರ ಸ್ಥಳಕ್ಕೆ ಬಾರಯ್ಯಾ


ಜಗದಗಲ ಮುಗಿಲಗಲ  ಮಿಗೆಯಗಲ  ನಿಮ್ಮಗಲ 
ಪಾತಾಳದಿಂದತ್ತತ್ತ  ನಿಮ್ಮ ಶ್ರೀ ಚರಣ
ಬ್ರಹ್ಮಾಂಡದಿಂದತ್ತತ್ತ ನಿಮ್ಮ ಶ್ರೀ ಮುಕುಟ
ಅಗಮ್ಯ ಅಗೋಚರ ಅಪ್ರತಿಮ ಲಿಂಗವೇ 
ಕೂಡಲ ಸಂಗಮ ದೇವಯ್ಯ
ಎನ್ನ ಕರ ಸ್ಥಳಕ್ಕೆ ಬಂದು ಚುಳುಕಾದಿರಯ್ಯ
                                   -ಬಸವಣ್ಣ
 
ಶಿವನು ಇಡೀ ವಿಶ್ವವನ್ನೇ ಆವರಿಸಿದ್ದಾನೆ..ಅವನಿಗೆ ಆದಿ ಅಂತ್ಯವಿಲ್ಲ...ಆತ  ವಿಶ್ವರೂಪಿ..ಇಡೀ ಭೂ ಮಂಡಲವನ್ನೇ ಆವರಿಸಿದ್ದಾನೆ...ಶಿವನ ಪಾದಗಳು ಪಾತಾಳದಿಂದ ಆಚೆಗೆ ಇದೆ..ಹಾಗೆ ಆತನ ಶಿರಸ್ಸು,ಮುಕುಟ ಬ್ರಹ್ಮಾಂಡದ ಆಚೆಗೆ ಇದೆ...ಯಾರ ಗಮನಕ್ಕೂ ಬಾರದೆ,ಯಾರ ಕಣ್ಣಿಗೂ ಗೋಚರಿಸದೆ ಇರುವ ಅಪ್ರತಿಮವಾದ ಸ್ವರ್ರೋಪ ಎಂದು ಶಿವನನ್ನು ಹಾಡಿ ಹೊಗಳುವ ಬಸವಣ್ಣ ಈ ವಚನದಲ್ಲಿ ವಿಶ್ವರೂಪಿಯಾದ ಕೂಡಲಸಂಗಮದೇವನು ಇಷ್ಟಲಿಂಗದ ರೂಪದಲ್ಲಿ ತನ್ನ ಅಂಗೈ ಮೇಲೆ ಬಂದು ಇಡೀ ವಿಶ್ವದ ದರ್ಶನವನ್ನು ನೀಡಿದ್ದಕ್ಕೆ ಧನ್ಯಾತ ಭಾವದಿಂದ ಕೂಡಲಸಂಗಮನನ್ನು ನೆನೆಯುತ್ತಾರೆ..

ಇಷ್ಟಲಿಂಗದ ಆಕಾರ ವಿಶ್ವದ ರೂಪದಲ್ಲಿ ಇದೆ ಮತ್ತು ಇಷ್ಟಲಿಂಗವು ಸಾಂಸ್ಕೃತಿಕ, ಸಾಮಾಜಿಕ, ಆರ್ಥಿಕ, ಧಾರ್ಮಿಕ, ಸ್ತ್ರೀ ಮತ್ತು ಪುರುಷ ಸಮಾನತೆಯನ್ನು ಮನದಲ್ಲಿ ತುಂಬುವ ಅರಿವಿನ ಬೆಳಕಾಗಿದೆ.. ಇಷ್ಟಲಿಂಗವು ಸಮಗ್ರ ಕ್ರಾಂತಿಯ ಮಾರ್ಗದರ್ಶಿ. ಸರ್ವರನ್ನು, ಅವರೊಳಗಿನ ಪರಮಾತ್ಮನೊಡನೆ ಒಂದುಗೂಡಿಸುವ ಸಾಧನ.
 
 


Monday, 24 October 2011

ವಚನ ಸಿಂಚನ ೮:ಎಲ್ಲೆಲ್ಲೂ ನೀನೇ ತುಂಬಿ

ವಚನದಲ್ಲಿ ನಾಮಾಮೃತ ತುಂಬಿ
ನಯನದಲ್ಲಿ ನಿಮ್ಮ ಮೂರುತಿ ತುಂಬಿ,
ಕಿವಿಯಲ್ಲಿ ನಿಮ್ಮ ಕೀರುತಿ ತುಂಬಿ,
ಮನದಲ್ಲಿ ನಿಮ್ಮ ನೆನಹು ತುಂಬಿ
ಕೂಡಲ ಸಂಗಮ ದೇವಾ !
ನಿಮ್ಮ ಚರಣ ಕಮಲದಲ್ಲಾನು ತುಂಬಿ.
                                    -ಬಸವಣ್ಣ

ನನ್ನ ಪ್ರತಿಯೊಂದು ಮಾತಿನಲ್ಲೂ ಅಮೃತವಾಣಿಯಂಥ ನಿನ್ನ ನಾಮವು ತುಂಬಿರಲಿ..ನನ್ನ ಕಣ್ಣುಗಳ ತುಂಬಾ ನಿನ್ನ ರೂಪವಂತವಾದ ಮೂರ್ತಿ ತುಂಬಿರಲಿ...ನನ್ನ ಕಿವಿಯಲ್ಲಿ ಸದ್ದ ನಿನ್ನ ಘನವಾದ ಕೀರ್ತಿ ತುಂಬಿರಲಿ...ನನ್ನ ಮನದಲ್ಲಿ ಸದಾ ನಿನ್ನ ನೆನಪುಗಳೇ ತುಂಬಿರಲಿ ಎಂದು ಕೂಡಲಸಂಗಮ ದೇವನಲ್ಲಿ ಭಿನ್ನಹಿಸುತ್ತಾ ಬಸವಣ್ಣ ಅರಿವಿನ ಸಂಕೇತವಾದ ನಿನ್ನ ಪಾದದಲ್ಲಿ ನಾನು ತುಂಬಿರುವಂತೆ ಮಾಡು ಎಂದು ಕೇಳುತ್ತಾ ಸದಾ ನಿಮ್ಮ ಸೇವೆ ಮಾಡುತ್ತೇನೆ ಎಂದು ಹೇಳುತ್ತಾರೆ...

Tuesday, 18 October 2011

ವಚನ ಸಿಂಚನ ೭:ದಯೆ

ದಯವಿಲ್ಲದ ಧರ್ಮವೆದೇವುದಯ್ಯಾ ?
ದಯವೇ ಬೇಕು ಸಕಲ ಪ್ರಾಣಿಗಳೆಲ್ಲರಲ್ಲಿಯೂ,
ದಯವೇ ಧರ್ಮದ ಮೂಲವಯ್ಯ,
ಕೂಡಲ ಸಂಗಯ್ಯನಂತಲ್ಲ ದೊಲ್ಲನಯ್ಯಾ.
                                                     -ಬಸವಣ್ಣ

ಮನುಷ್ಯನ ಸುಖ ಜೀವನಕ್ಕೆ ದಯೆ,ಕರುಣೆ ,ಅನುಕಂಪ ಇವೆಲ್ಲ ಅವಶ್ಯ..ವಿಶ್ವದ ಎಲ್ಲ ಧರ್ಮವೂ ಸಾರುವುದು ಶಾಂತಿ ಮತ್ತು ದಯೆಯನ್ನು..ಎಲ್ಲ ಧರ್ಮದ ತಳಹದಿ ದಯೆ..ಮಾನವೀಯತೆಯ ಹುಟ್ಟು ದಯಾಮಯವಾದ ಮನಸ್ಸಿನಿಂದ ಮಾತ್ರ ಸಾಧ್ಯ..ಜಗತ್ತಿನ ಎಲ್ಲ ಜೀವನಾಡಿಗಳಲ್ಲೂ ದಯೆ ಎಂಬ ಅಂತಃ ಕರಣ ಇರಬೇಕು ಎಂದು ಬಸವಣ್ಣನ ಆದಿಯಾಗಿ ಎಲ್ಲ ಶರಣರೂ  ಹೇಳುತ್ತಾರೆ...ದಯೆಯೇ ಧರ್ಮದ ಮೂಲ ಎಂದು ಹೇಳುವ ಬಸವಣ್ಣ ದಯೆ ಇಲ್ಲದ ಧರ್ಮ ವಿನಾಶಕಾರಿಯಾದದ್ದು ಎಂದು ಅಭಿಪ್ರಾಯ ಪಡುತ್ತಾರೆ...ಸಮಾನತೆಯ ಸಾರವನ್ನು ಸಾರಿದ ಬಸವಣ್ಣನ ಕೃತಿಯ ಮೂಲ ಕೂಡ ದಯೆ ಎಂದರೆ ತಪ್ಪಾಗಲಾರದು...

Tuesday, 11 October 2011

ವಚನ ಸಿಂಚನ ೬:ದೇವಾಲಯ

ಉಳ್ಳವರು ಶಿವಾಲಯ ಮಾಡುವರು,
ನಾನೇನ ಮಾಡುವೆ ಬಡವನಯ್ಯ,
ಎನ್ನ ಕಾಲೇ ಕಂಭ ದೇಹವೇ ದೇಗುಲ
ಶಿರವೇ ಹೊನ್ನ  ಕಳಶವಯ್ಯಾ,
ಕೂಡಲ ಸಂಗಮದೆವಯ್ಯ ಕೇಳಯ್ಯಾ,
ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ.
                                              -ಬಸವಣ್ಣ

ದೇಹವನ್ನು ದೇವಾಲಯಕ್ಕೆ ಹೋಲಿಸಿ ಪ್ರತಿಯೊಂದು ದೇಹವನ್ನು ಸಾಕ್ಷಾತ್ಕಾರಗೊಳಿಸಿದ ವಚನ ಇದು..ಎಲ್ಲ ಜಾತಿ ಧರ್ಮವನ್ನು ಮೀರಿ ಪ್ರತಿಯೊಬ್ಬರೂ ಪ್ರವೇಶ ನೀಡಿ ಅಧ್ಯಾತ್ಮ ಸುಖವನ್ನು ಅನುಭವಿಸಬಹುದಾದ ದೇವಾಲಯ ಇದು..ಇದು ಬಸವಣ್ಣನ ಮಹಾ ಕಲ್ಪನೆ...ತನ್ನ ಕಾಲೇ ದೇವಾಲಯದ ಕಂಭವಿದ್ದ  ಹಾಗೆ,ತನ್ನ ಶಿರಸ್ಸು ಕಳಸದ ಪ್ರತಿರೂಪ ಎಂದು ಹೇಳುವ ಬಸವಣ್ಣನ  ಪ್ರಕಾರ ದೇವರು ಅಂದರೆ ಸತ್ಯ,ಧರ್ಮದಿಂದ ಕೂಡಿದ ನಮ್ಮ ಜೀವ..ಇಂಥ ದೇವಾಲಯವು ಜಂಗಮ ಸ್ವರೂಪವೂ ಹೌದಾದ್ದರಿಂದ ಇದಕ್ಕೆ ಅಳಿವಿಲ್ಲ ಎಂದು ಹೇಳುತ್ತಾರೆ.....

ಅಲ್ಲದೆ ಈ ವಚನದಲ್ಲಿ ದೇವಾಲಯಗಳನ್ನು  ನಿರ್ಮಿಸುವ ಶ್ರೀಮಂತರು ಆಢಂಭರದ ಪ್ರತಿರೂಪ,ಅದು ಶಿವನಿಗೆ ಅರ್ಪಿತವಲ್ಲ..ಅದು ತೋರ್ಪಡಿಕೆಗೆ ಮಾಡುವ ಕೆಲಸ ಎಂದು ಹೇಳುತ್ತಾ ಅಂಥ ಸ್ಥಾವರಕ್ಕೆ ಅಳಿವಿದೆ ಎಂದು ಹೇಳುತ್ತಾರೆ...ದೇವಾಲಯಗಳ ನಿರ್ಮಾಣಕ್ಕೆ ಶರಣರ ವಿರೋಧ ಈ ವಚನದಲ್ಲಿ ಎದ್ದು ಕಾಣುತ್ತದೆ."ದೇಹವೇ ದೇವಾಲಯ" ಎಂದು ಸಾರಿದ ಬಸವಣ್ಣನ ಅನುಭವ ಚಿಂತನೆ ಇಲ್ಲಿ ಕಾಣಬಹುದು...

 
 

Wednesday, 5 October 2011

ವಚನ ಸಿಂಚನ ೫:ಮನದ ಮೊನೆ

ಸಮುದ್ರ ಘನವೆ೦ಬೆನೆ ? ಧರೆಯ ಮೇಲಡಗಿತ್ತು,
ಧರೆ ಘನವೆ೦ಬೆನೆ ? ನಾಗೇಂದ್ರನ ಫಣಾಫಣಿಯ ಮೇಲಡಗಿತ್ತು,
ನಾಗೇಂದ್ರ ಘನವೆ೦ಬೆನೆ ? ಪಾರ್ವತಿಯ ಕಿರು ಬೆರಳ ಕುಣಿಕೆಯ ಮುದ್ರಿಕೆಯಾಗಿತ್ತು,
ಅಂತಹ ಪಾರ್ವತಿ ಘನವೆ೦ಬೆನೆ ? ಪರಮೇಶ್ವರನ ಅರ್ಧಾಂಗಿಯಾದಳು,
ಅಂತಹ ಪರಮೇಶ್ವರ ಘನವೆ೦ಬೆನೆ ? ನಮ್ಮ ಕೂಡಲ ಸಂಗನ ಶರಣರ
ಮನದ ಮೊನೆಯ ಮೇಲಡಗಿದನು !!!
                                               -ಬಸವಣ್ಣ
 
ಈ ವಚನದಲ್ಲಿ ಶರಣ ಶ್ರೇಷ್ಠತೆಯ ಹೊಳಹಿದೆ.ದೇವನಿಗಿಂತ ಜಂಗಮ ಶ್ರೇಷ್ಠ ದೊಡ್ಡದು,ಸಮುದ್ರ ಬಹು ಘನವಾದುದು ಎನ್ನಲು ಅದು ಹೂಮಿಯನ್ನೇ ಅವಲಂಬಿಸಿದೆ.
ಈ ಭೂಮಿಯೇ ದೊಡ್ಡದು ಎನ್ನಲು ಆದಿಶೇಷನು ಅದನ್ನು ಹೊತ್ತಿದ್ದಾನೆ,ಆ ಆದಿಶೇಷನೆ ಘನಮಹಿಮ ಎನ್ನಲು ಅದು ಪಾರ್ವತಿಯ ಕಿರು ನೆರಳಿನ ಉಂಗುರಕ್ಕೆ ಮುದ್ರಿಕೆಯಾಗಿದೆ,ಪಾರ್ವತಿಯೇ ಘನವೆನ್ನಲು ಅವಳು ಪರಮೇಶ್ವರನ ಅರ್ಧಾಂಗಿಯಾದಳು.ಪರಮೇಶ್ವರನೆ ಘನವೆನ್ನಲು ಅವನು ಶರಣರ ಮನದ ಮೊನೆಯಲ್ಲಿ ಹುದುಗಿದನು, ಶರಣರ ಹೃದಯದಲ್ಲಿ ಆಶ್ರಯ ಬೇಡಿದನು,ಇಂತಹ ಭಾವನ ಮೊಳೆತ್ತದ್ದರಿಂದಲೇ "ಎನಗಿಂತ ಕಿರಿಯರಿಲ್ಲ,ಶಿವ ಭಕ್ತರಿಗಿಂತ ಹಿರಿಯರಿಲ್ಲ" ಎಂದು ನುಡಿದು ವಿನಯಶೀಳರಾದರು,ಜಂಗಮ ನಿಷ್ಟರಾದರು ಬಸವಣ್ಣನವರು.