Tuesday 27 September 2011

ವಚನ ಸಿಂಚನ ೪: ಅಪರಾಧ

ಮನದೊಡೆಯ ಮಹಾದೇವ ಮಾನವ ನೋಡಿಹನೆಂದು
ಮನುಜರ ಕೈಯಿಂದ ಒಂದೊಂದು ನುಡಿಸುವನು
ಇದಕೆ ಕಳವಳಿಸದಿರು ಮನವೇ,ಕಾತರಿಸದಿರು ತನುವೆ,
ನಿಜವ ಮರೆಯದಿರು ಕಂಡ್ಯಾ ನಿಶ್ಚಿಂತವಾಗಿರು ಮನವೇ,
ಬಸವಣ್ಣ ಪ್ರಿಯ ಚೆನ್ನ ಸಂಗಯ್ಯನು
ಬೆಟ್ಟದನಿತಪರಾಧವನು  ಒಂದು ಬೊಟ್ಟಿನಲ್ಲಿ ತಾತೊಡುವೆನು....
                                                      ----------------ಅಕ್ಕ ನಾಗಮ್ಮ...


ಮಾಹಮನೆಯ ಮಾಹತಾಯಿ,ಕ್ರಾಂತಿಮಾತೆ,ಬಸವಣ್ಣನವರ ಸೋದರಿ ಅಕ್ಕ ನಾಗಮ್ಮ  ಮನಕ್ಕೆ ಮನವೇ ಸಾಕ್ಷಿಯಾಗಿ ನಡೆದವಳು,ಚನ್ನ ಬಸವಣ್ಣನ ಮಹಾಮಾತೆಯಾದ ಈಕೆಯು ಬಸವಣ್ಣನ ಸಾಧನೆಗೆ ಕಾರಣಳು.ತನಗೆ ದೊರೆತಿದ್ದ ಸಾಮಾಜಿಕ ಅಪರಾಧಗಳನ್ನು ಒಮ್ಮನಸ್ಸಿನಿಂದ ಚನ್ನ ಸಂಗಯ್ಯನಿಗೆ ಅರ್ಪಿಸಿದಳು.ಆತನು ಬೆಟ್ಟದಂತಹ ಅಪರಾಧವನ್ನು ಒಂದು ಬೊಟ್ಟಿನಲ್ಲಿ ತಾ ಕಳೆಯುವನು ಎಂಬ ಧೃಢ ನಂಬಿಕೆ  ಇವಳದು...

Friday 23 September 2011

ವಚನ ಸಿಂಚನ ೩ : ಭಕ್ತಿಯ ಪರಾಕಾಷ್ಟೆ


ಅರಸಬ ಭಕ್ತಿ ಅಹಂಕಾರದಲ್ಲಿ ಹೋಯಿತು,
ಬ್ರಾಹ್ಮಣನ ಭಕ್ತಿ ಮುಟ್ಟು ತಟ್ಟಿನಲ್ಲಿ ಹೋಯಿತು,
ಶೀಲವಂತನ ಭಕ್ತಿ ಪ್ರಪಂಚಿನಲ್ಲಿ ಹೋಯಿತು,
ಸೆಟ್ಟಿಯ ಭಕ್ತಿ ವ್ಯಾಪಾರದಲ್ಲಿ ಹೋಯಿತು,
ನೀವು ಕೇಳಿರೋ ಇಂಥವರ ಭಕ್ತಿಗೆ ಊರಿಂದ 
ಹೊರಗಣ ಡೊ೦ಬನೇ ಸಾಕ್ಷಿ ಕಾಣಾ ಕಲಿ ದೇವರ ದೇವಾ !!!
                                              -ಮಡಿವಾಳ ಮಾಚಿದೇವ

ಪ್ರಾಪಂಚಿಕ ವಿಷಯಾಭಿಲಾಷೆಯನ್ನು ಹೊಂದಿ,ತೋರುವ ಭಕ್ತಿಯನ್ನು ಇಲ್ಲಿ ವಿಡ೦ಭಿಸಿದ್ದಾರೆ.ಸರ್ವ ಸಂಪತ್ತಿಗೆ ಒಡೆಯನಾದ ರಾಜನ ಭಕ್ತಿ ಗರ್ವದಲ್ಲಿ ಹಾಳಾಯಿತು.ಬ್ರಾಹ್ಮಣನ ಭಕ್ತಿ ಮಾಡಿ ಮೈಲಿಗೆಗಳ ಅವಾಂತರದಲ್ಲಿ ನಷ್ಟವಾಯಿತು.ಶೀಲವಂತನ ಭಕ್ತಿ ಲೌಕಿಕ ಸುಖದಲ್ಲೇ ಲೀನವಾದ ಸಂಸಾರದಲ್ಲಿ ಸೇರಿ ಹೋಯಿತು.ಶೆಟ್ಟಿಯ ಭಕ್ತಿಯು ಲೋಭ ಬುದ್ದಿಯಂದ ಕೂಡಿದ ವಂಚಕತನದ ವ್ಯಾಪಾರದಲ್ಲಿ ಕೂಡಿ ಹೋಗಿತ್ತು.ನೀವು ಕೇಳಿರೋ ಇಂಥವರ ಡಾಂಭಿಕ ಭಕ್ತಿಗೆ ಗಣೆಯ ಮೇಲೆ ನಿಂತು ದೊಂಬರಾಟ ಆಡುವ ಡೊ೦ಬನೇ ಸಾಕ್ಷಿ ಕಾಣಾ ಕಲಿ ದೇವರ ದೇವಾ.
ದೈವ ಭಕ್ತಿಗೆ ಅಹಂಕಾರ ಸಲ್ಲದ ವಿಚಾರ,ಮಾಡಿ ಮೈಲಿಗೆಗಳ ಭಾವ,ಭಕ್ತನಿಗೆ ಸಲ್ಲದ್ದು,ದೇವನಿಗೂ ಒಲ್ಲದ ವಿಚಾರ ಅದು ಎಂಬ ಅರ್ಥವನ್ನು  ಈ ವಚನದಲಿ ಕಾಣಬಹುದು...

Thursday 22 September 2011

ವಚನ ಸಿಂಚನ ೨: ಆಸೆ

ಅಂಗಕ್ಕೆ ಬಡತನವಲ್ಲದೆ  ಮನಕ್ಕೆ ಬಡತನವುಂಟೇ?
 ಬೆಟ್ಟ ಬಲ್ಲಿತ್ತೆ೦ದಡೆ,ಉಳಿಯ ಮೊನೆಯಲ್ಲಿ ಬಡತನವಿದ್ದಡೆ  ಒಡೆಯದೆ?
 ಘನ ಶಿವಭಕ್ತರಿಗೆ ಬಡತನವಿಲ್ಲ ,ಸತ್ಯರಿಗೆ ದುಷ್ಕರ್ಮವಿಲ್ಲ,
 ಎನಗೆ ಮಾರಯ್ಯ ಪ್ರಿಯ ಅಮಲೇಶ್ವರ ಲಿಂಗವುಳ್ಳನ್ನಕ್ಕ
 ಆರ ಹಂಗಿಲ್ಲ ಮಾರಯ್ಯ !!!
                               -ಆಯ್ದಕ್ಕಿ ಲಕ್ಕಮ್ಮ


ಅತಿಯಾಸೆ ಇಲ್ಲದಿದ್ದರೆ ಮನಸ್ಸು ಯಾವಾಗಲು ಶ್ರೀಮಂತಿಕೆಯನ್ನು ಅನುಭವಿಸುತ್ತದೆ.ಬೆಟ್ಟ ಬೃಹತ್ತಾಗಿರಬಹುದು.ಉಳಿಯ ಮೊನೆಗೆ ಬಡತನವಿದ್ದೀತೆ?
 ಸತ್ಪಾತ್ರನನ್ನು ದುಷ್ಕರ್ಮಿಗಳು ಕಾಡುವುದಿಲ್ಲ.ಘನ ಭಕ್ತರಿಗೆ ಬಡತನವಿಲ್ಲ.ಮಾರಯ್ಯ ಪ್ರಿಯ ಅಮಲೇಶ್ವರ ಲಿಂಗವನ್ನು ನಂಬಿರುವಾಗ ಅನ್ಯರ ಹಂಗು ನಮಗಿಲ್ಲ....

Tuesday 20 September 2011

ವಚನ ಸಿಂಚನ ೧: ಜ್ಞಾನದ ಬಲ

ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯ,
ಜ್ಯೋತಿಯ ಬಲದಿಂದ ತಮಂಧದ ಕೇಡು ನೋಡಯ್ಯ,
ಸತ್ಯದ ಬಲದಿಂದ ಅಸತ್ಯದ ಕೇಡು ನೋಡಯ್ಯ,
ಪರುಷದ ಬಲದಿಂದ ಅವಲೋಹದ ಕೇಡು ನೋಡಯ್ಯ,
ಕೂಡಲ ಸಂಗನ ಶರಣರ ಅನುಭಾವದ ಬಲದಿಂದ
 ಎನ್ನ ಭವದ ಕೇಡು ನೋಡಯ್ಯ !!!!
                                                                         -ಬಸವಣ್ಣನವರು

ಬೆಳಕು ಜ್ಞಾನದ ಸಂಕೇತ,ಕತ್ತಲೆ ಅಜ್ಞಾನದ ಕುರುಹು.ಈ ಜ್ಞಾನವೆಂಬ ಬೆಳಕಿನ ಬಲದಿಂದ ಅಜ್ಞಾನವೆಂಬ ಕತ್ತಲು ಹರಿಯುತ್ತದೆ.ಜ್ಞಾನದ ಬೆಳಕಿನಲ್ಲಿ ವಿವೇಕ ಅರಳುತ್ತದೆ.ಸತ್ಯದ ಬಲದಿಂದ ಅಸತ್ಯ ಅಳಿಯುತ್ತದೆ.ಅಮೂಲ್ಯವಾದ ಸ್ಪರ್ಶ ಮಣಿಯ ಸೋಂಕಿನ ಬಲದಿಂದ ಕಬ್ಬಿಣ ಮುಂತಾದ ಅವಲೋಹಗಳು ರೂಪಾಂತರ ಪಡೆಯುತ್ತವೆ.ನೀರಿನಲ್ಲಿ ತೋಯ್ದು ಕಬ್ಬಿಣವು ಬಲು ಬೇಗ ತುಕ್ಕು ಹಿಡಿದು ಪ್ರಯೋಜನಕ್ಕೆ ಬಾರದ ವಸ್ತುವಾಗಿರುತ್ತದೆ.ಅದಕ್ಕೆ..ಪರುಷ ಮಣಿಯ ಸ್ಪರ್ಶದಿಂದ  ಕಬ್ಬಿಣವು ಭಿನ್ನರೂಪ ತಾಳುತ್ತದೆ.ಅಂತೆಯೇ ಶರಣರ ಒಡನಾಟ ಅವರ ಅನುಭಾವದ ನುಡಿಗಳ ಸತ್ಸಂಗ ದಿಂದ ಅಜ್ಞಾನ ಅಡಗಿ ಭವದ ಭಾವಗಳು ಇಲ್ಲದಂತಾಗುವವು.ಸಜ್ಜನರ ಸಂಗವ ಮಾಡುವುದು  ದುರ್ಜನರ ಸಂಗ ಬೇಡವಯ್ಯ ಎಂಬ ನುಡಿಮುತ್ತು  ಕೂಡ ಬಸವಣ್ಣ ನವರದೇ !!!