Tuesday 20 September 2011

ವಚನ ಸಿಂಚನ ೧: ಜ್ಞಾನದ ಬಲ

ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯ,
ಜ್ಯೋತಿಯ ಬಲದಿಂದ ತಮಂಧದ ಕೇಡು ನೋಡಯ್ಯ,
ಸತ್ಯದ ಬಲದಿಂದ ಅಸತ್ಯದ ಕೇಡು ನೋಡಯ್ಯ,
ಪರುಷದ ಬಲದಿಂದ ಅವಲೋಹದ ಕೇಡು ನೋಡಯ್ಯ,
ಕೂಡಲ ಸಂಗನ ಶರಣರ ಅನುಭಾವದ ಬಲದಿಂದ
 ಎನ್ನ ಭವದ ಕೇಡು ನೋಡಯ್ಯ !!!!
                                                                         -ಬಸವಣ್ಣನವರು

ಬೆಳಕು ಜ್ಞಾನದ ಸಂಕೇತ,ಕತ್ತಲೆ ಅಜ್ಞಾನದ ಕುರುಹು.ಈ ಜ್ಞಾನವೆಂಬ ಬೆಳಕಿನ ಬಲದಿಂದ ಅಜ್ಞಾನವೆಂಬ ಕತ್ತಲು ಹರಿಯುತ್ತದೆ.ಜ್ಞಾನದ ಬೆಳಕಿನಲ್ಲಿ ವಿವೇಕ ಅರಳುತ್ತದೆ.ಸತ್ಯದ ಬಲದಿಂದ ಅಸತ್ಯ ಅಳಿಯುತ್ತದೆ.ಅಮೂಲ್ಯವಾದ ಸ್ಪರ್ಶ ಮಣಿಯ ಸೋಂಕಿನ ಬಲದಿಂದ ಕಬ್ಬಿಣ ಮುಂತಾದ ಅವಲೋಹಗಳು ರೂಪಾಂತರ ಪಡೆಯುತ್ತವೆ.ನೀರಿನಲ್ಲಿ ತೋಯ್ದು ಕಬ್ಬಿಣವು ಬಲು ಬೇಗ ತುಕ್ಕು ಹಿಡಿದು ಪ್ರಯೋಜನಕ್ಕೆ ಬಾರದ ವಸ್ತುವಾಗಿರುತ್ತದೆ.ಅದಕ್ಕೆ..ಪರುಷ ಮಣಿಯ ಸ್ಪರ್ಶದಿಂದ  ಕಬ್ಬಿಣವು ಭಿನ್ನರೂಪ ತಾಳುತ್ತದೆ.ಅಂತೆಯೇ ಶರಣರ ಒಡನಾಟ ಅವರ ಅನುಭಾವದ ನುಡಿಗಳ ಸತ್ಸಂಗ ದಿಂದ ಅಜ್ಞಾನ ಅಡಗಿ ಭವದ ಭಾವಗಳು ಇಲ್ಲದಂತಾಗುವವು.ಸಜ್ಜನರ ಸಂಗವ ಮಾಡುವುದು  ದುರ್ಜನರ ಸಂಗ ಬೇಡವಯ್ಯ ಎಂಬ ನುಡಿಮುತ್ತು  ಕೂಡ ಬಸವಣ್ಣ ನವರದೇ !!!

2 comments: