Sunday 24 June 2012

ವಚನ ಸಿಂಚನ ೪೨:ಆತ್ಮ ಸಂಗಾತ

ಹಸಿವಾದರೆ ಊರೊಳಗೆ ಭಿಕ್ಷಾನ್ನಂಗಳುಂಟು,
ತೃಷೆಯಾದರೆ ಕೆರೆ ಬಾವಿ ಹಳ್ಳಂಗಳುಂಟು,
ಶಯನಕ್ಕೆ ಹಾಳುದೇಗುಲವುಂಟು,
ಚೆನ್ನಮಲ್ಲಿಕಾರ್ಜುನಯ್ಯ ಆತ್ಮಸಂಗಾತಕ್ಕೆ ನೀನೆನಗುಂಟು.
                                  -ಅಕ್ಕಮಹಾದೇವಿ

ಚನ್ನಮಲ್ಲಿಕಾರ್ಜುನನೇ ತನ್ನ ಗಂಡನೆಂದು ಭಾವಿಸಿ,ಆತನಿಗೆ ತನ್ನ ಭಕ್ತಿಯನ್ನು ಧಾರೆ ಎರೆದಿದ್ದ ಅಕ್ಕಮಹಾದೇವಿ ಈ ವಚನದಲ್ಲಿ ಕೂಡ ಚನ್ನಮಲ್ಲಿಕಾರ್ಜುನನ್ನು ತನ್ನ ಆತ್ಮ ಸಂಗಾತಕ್ಕೆ ಇದ್ದಾನೆ ಎಂದು ಹೇಳುತ್ತಾಳೆ.ಕೆಲವು ನಿದರ್ಶನಗಳ ಮೂಲಕ ತನಗೆ ಚನ್ನಮಲ್ಲಿಕಾರ್ಜುನ ಎಷ್ಟು ಅವಶ್ಯ ಮತ್ತು ಆತನಲ್ಲಿ ತಾನು ಭಕ್ತಿಯಲ್ಲಿ ಲೀನವಾಗಿರುವ ಬಗ್ಗೆ ವಿವರಿಸುತ್ತಾಳೆ.ಹಸಿವಾದರೆ ಊರಿನೊಳಗೆ ಹೋಗಿ ಯಾರ ಮನೆಯಲ್ಲಿ ಬೇಕಾದರೂ ಭಿಕ್ಷೆ ಬೇಡಿ ಹಸಿವು ನೀಗಿಸಿ ಕೊಳ್ಳಬಹುದು.ಅದೇ ರೀತಿ ಬಾಯಾರಿಕೆ ಆದರೆ ಬಾವಿ ಹಳ್ಳಗಳಲ್ಲಿ ನೀರು ತಂದು ನೀರಡಿಕೆ ನಿವಾರಿಸಬಹುದು.ನಿದ್ರಿಸಲು ಯಾವುದಾದರು ಹಾಲು ದೇವಾಲಯ ಕೂಡ ಸಾಕಾಗುತ್ತದೆ,ಆದರೆ ಆತ್ಮ ಸಂಗಾತಕ್ಕೆ ಚನ್ನಮಲ್ಲಿಕಾರ್ಜುನನೇ ಬೇಕು ಎಂದು ಹೇಳುವ ಮೂಲಕ ಆತನೇ ತನ್ನ ಗಂಡ ಎಂದು ಹೇಳಿಕೊಳ್ಳುತ್ತಾಳೆ ಅಕ್ಕ.

Monday 11 June 2012

ವಚನ ಸಿಂಚನ ೪೧ :ಸಂಬಂಧ

ಶಿಲೆಯೊಳಗಣ ಪಾವಕನಂತೆ
ಉದಕದೊಳಗಣ ಪ್ರತಿಬಿಂಬದಂತೆ
ಬೀಜದೊಳಗಣ ವೃಕ್ಷದಂತೆ
ಶಬ್ದದೊಳಗಣ ನಿಶ್ಯಬ್ದದಂತೆ
ಗುಹೇಶ್ವರ, ನಿಮ್ಮ ಶರಣಸಂಬಂಧ.
                            -ಅಲ್ಲಮಪ್ರಭು

ಈ ವಚನದಲ್ಲಿ ಶರಣ ಮತ್ತು ಲಿಂಗದ ನಡುವಿನ ಒಂದು ಅಗೋಚರವಾದ ಸಂಭಂದವನ್ನು ಕೆಲವು ನಿದರ್ಶನಗಳ ಮೂಲಕ ಅಲ್ಲಮಪ್ರಭು ಅವರು ವಿವರಿಸುತ್ತಾರೆ.ಕಲ್ಲಿನೊಳರಳಿದ ಶಿಲೆಯೊಳಗೆ ಬೆಂಕಿ ಅಡಗಿರುವಂತೆ,ಆ ಶಿಲೆಗಳು ಒಂದಕ್ಕೊಂದು ತಾಗಿದಾಗ ಬೆಂಕಿಯ ಕಿಡಿ ಬರುತ್ತದೆ,ಅದೇ ರೀತಿ ನಿಶ್ಚಲ ನೀರಿನೊಳಗೆ ಪ್ರತಿಬಿಂಬ ಗೋಚರಿಸಿದಂತೆ ಅಡಗಿರುವಂತೆ,ಒಂದು ಬೀಜವನ್ನು ಊಳಿದರೆ ಅದು ಬೆಳೆದು ಮರವಾಗುತ್ತದೆ, ಆ ಸಣ್ಣದೊಂದು ಬೀಜದೊಳಗಿನ ದಷ್ಟ ಶಕ್ತಿಯಂತೆ,ಶಬ್ದದೊಳಗೆ ಅಡಕವಾಗಿರುವ ನಿಶ್ಯಬ್ಧದಂತೆ ಲಿಂಗ ಮತ್ತು ಶಿವಶರಣನ ಸಂಭಂದವು ಗೋಚರಿಸದಂತೆ ಅಪ್ರಮಾನ್ಯವಾಗಿದೆ ಎಂದು ಹೇಳುತ್ತಾರೆ...

ಇದೆ ತರಹ ಗುಹೇಶ್ವರ ಲಿಂಗಕ್ಕೆಯು ಎನಗೆಯು ಎತ್ತಣಿಂದೆತ್ತ ಸಂಭಂದವಯ್ಯಾ ಎಂದು ಇನ್ನೊಂದು ವಚನದಲ್ಲಿ ಕೇಳಿಕೊಳ್ಳುವ ಪ್ರಶ್ನೆಗೆ ಈ ರೀತಿಯ ಅಗಮ್ಯ ಸಂಭಂದವೇ ಉತ್ತರ ಇರಬಹುದು...

Monday 4 June 2012

ವಚನ ಸಿಂಚನ ೪೦:ಇವನಮ್ಮವ

ಇವನಾರವ ಇವನಾರವ ಇವನಾರವನೆಂದೆನಿಸದಿರಯ್ಯಾ,
ಇವನಮ್ಮವ ಇವನಮ್ಮವ ಇವನಮ್ಮವನೆಂದೆನಿಸಯ್ಯಾ,
ಕೂಡಲಸಂಗಮದೇವಾ,ನಿಮ್ಮ ಮನೆಯ ಮಗನೆಂದೆನಿಸಯ್ಯಾ...
                                               -ಬಸವಣ್ಣ
ಈ ವಚನವನ್ನು,೧೨ನೆ ಶತಮಾನದಲ್ಲಿದ್ದ ಅಸ್ಪ್ರುಶ್ಯತೆಯನ್ನು ಹೋಗಲಾಡಿಸಲು ಶಿವ ಶರಣರು ಹೋರಾಡಿದ ಸಾಕ್ಷಿ ಅಥವಾ ಕುರುಹು ಎನ್ನಬಹುದು.ಅನ್ಯ ಜಾತಿಯವರನ್ನು ಮತ್ತು ಹೊರಗಿನವರನ್ನು ಕೂಡ ಅವರ ಜಾತಿಯನ್ನು ತಿಳಿದುಕೊಂಡು ಅದರ ಆಧಾರದ ಮೇಲೆ ಅವರಿಗೆ ಆತಿಥ್ಯ ನೀಡಲಾಗುತ್ತಿದ್ದಂತಹ ಒಂದು ಕೆಟ್ಟ ಆಚರಣೆಯನ್ನು ಇಲ್ಲಿ ಬಸವಣ್ಣನವರು ವಿರೋಧಿಸುತ್ತಾರೆ.ಆದ್ದರಿಂದ ಹೇಳುತ್ತಾರೆ,ಯಾರೊಬ್ಬರನ್ನು ಕೂಡ ಅವರ ಜಾತಿ ಮತವನ್ನು ತಿಳಿದು ದೂರ ತಳ್ಳುವುದು ತರವಲ್ಲ,ಎಲ್ಲಾ ಶಿವ ಶರಣರನ್ನು ನಮ್ಮವನು ಎಂದು ಭಾವಿಸಿ ಸತ್ಕಾರ ಮಾಡಬೇಕು ಎಂದು..ಈ ಜಗತ್ತು ಒಂದು ಮನೆ ಇದ್ದ ಹಾಗೆ,ಶಿವನ ಸ್ವರೂಪವಾದ ಕೂಡಲಸಂಗಮದೇವನೇ ಇದರ ಒಡೆಯ..ಆದ್ದರಿಂದ ಸಂಗಮನಾಥನಲ್ಲಿ ಪ್ರತಿಯೊಬ್ಬರನ್ನು ತಮ್ಮ ಮನೆಯ ಮಗನೆಂದೆನಿಸಿ ಎಲ್ಲರನ್ನು ಸಮಾನವಾಗಿ ಸ್ವೀಕರಿಸಿ ಸಂತೈಸಿ ಎಂದು ಬೇಡಿಕೊಳ್ಳುತ್ತಾರೆ.

ಎಲ್ಲಾ ವರ್ಗದವರನ್ನು ಸಮಾನವಾಗಿ ಕಂಡು ಎಲ್ಲರಿಗೂ ಮುಕ್ತ ಅವಕಾಶ ನೀಡಿ ಅನುಭವ ಮಂಟಪದಲ್ಲಿ ಭಾಗಿಯಾಗಿವಂತೆ ಮಾಡಿ ಕಲ್ಯಾಣದಲ್ಲಿ ಕಾಯಕ ಕ್ರಾಂತಿ ಮಾಡಿ ೧೨ನೆ ಶತಮಾನದ ಸಾಮಾಜಿಕ ಕ್ರೌರ್ಯಗಳ ವಿರುದ್ಧ ಹೋರಾಡಿದ ಬಸವಣ್ಣನವರ ಸಾಮಾಜಿಕ ಕಳವಳಿಯ ಒಂದು ಅದ್ಭುತ ವಚನ.ಇಡೀ ವಿಶ್ವವನ್ನೇ ಒಂದು ಎಂದು ಭಾವಿಸಿದ್ದರು ಎಂಬುದಕ್ಕೆ ಈ ವಚನ ಸಾಕ್ಷಿ..