Sunday 25 December 2011

ವಚನ-ಸಿಂಚನ ೧೭:ಅರಿವು

ಮುತ್ತು ನೀರಲ್ಲಾಯಿತ್ತು,ವಾರಿಕಲ್ಲು ನೀರಲ್ಲಾಯಿತ್ತು,
ಉಪ್ಪು ನೀರಲ್ಲಾಯಿತ್ತು
ಉಪ್ಪು ಕರಗಿತ್ತು,ವಾರಿಕಲ್ಲು ಕರಗಿತ್ತು,
ಮುತ್ತು ಕರಗಿದುದನಾರು ಕಾಣರು...
ಈ ಸಂಸಾರಿ ಮಾನವರು ಲಿಂಗವ ಮುಟ್ಟಿ
 ಭವಭಾರಿಗಳಾದರು  !
ನಾ ನಿಮ್ಮ ಮುಟ್ಟಿ ಕರಿಗೊಂಡೆನಯ್ಯಾ!
ಚೆನ್ನಮಲ್ಲಿಕಾರ್ಜುನಯ್ಯಾ !!!
                                    -ಅಕ್ಕಮಹಾದೇವಿ

ಇಲ್ಲಿ ಅಕ್ಕಮಹಾದೇವಿ ನೀರಿನಲ್ಲಿ ಹುಟ್ಟುವ ವಸ್ತುಗಳನ್ನು ಅರಿವಿಗೆ ಹೋಲಿಸಿ ಹೇಳುತ್ತಾರೆ..
ಮುತ್ತು,ವಾರಿಕಲ್ಲು(ಆನೇಕಲ್ಲು) ಮತ್ತು ಮುತ್ತು,ಇವು ಮೂರು ಕೂಡ ನೀರಿನಲ್ಲೇ ರೂಪುಗೊಂಡಿದ್ದು... ಆದರೆ ವಾರಿಕಲ್ಲು ಮತ್ತು ಉಪ್ಪು ನೀರಿನಲ್ಲಿ ಕರಗಿ ಹೋಗುತ್ತದೆ.. ಆದರೆ ಮುತ್ತು ಮಾತ್ರ ಕರಗುವುದಿಲ್ಲ.. ಅಂದರೆ ಮುತ್ತು ಅರಿವಿನ ಸಂಕೇತ.. ಅದರ ಶುಭ್ರತೆ ಮತ್ತು ಗಟ್ಟಿತನವನ್ನು ಇಲ್ಲಿ ಅರಿವು ಎಂದು ಹೇಳಬಹುದು... "ಅರಿವೇ ಗುರು" ಎಂದು ಬಸವಣ್ಣನವರು ಹೇಳಿದಂತೆ...
ಉಪ್ಪು ವಾರಿಕಲ್ಲಿನಂತೆ ಈ ಸಂಸಾರಿಗಳು ಕರಗಿ ಹೋದರು... ನಾನು ನಿಮ್ಮನ್ನು ಮುಟ್ಟಿ ಕರಿಗೊಂಡೆನು ಎಂದು ಚೆನ್ನಮಲ್ಲಿಕಾರ್ಜುನನಲ್ಲಿ ಹೇಳಿಕೊಳ್ಳುತ್ತಾಳೆ... ಅಕ್ಕಮಹಾದೇವಿಯು ಮುತ್ತಿನಂತೆ ಅರಿವಿನ ಸಂಕೇತ..ಆದ್ದರಿಂದಲೇ ಅವಳು ಇಂದಿಗೂ ಅವಳ ವಚನಗಳ ಮೂಲಕ ಗಟ್ಟಿಯಾಗಿ ನೆಲೆ ನಿಂತಿರುವುದು...

Sunday 18 December 2011

ವಚನ ಸಿಂಚನ ೧೬ :ಶೃಂಗಾರ

ನೀರಿಂಗೆ ನೈದಿಲೆ ಶೃಂಗಾರ,
ಸಮುದ್ರಕ್ಕೆ ತೆರೆಯ ಶೃಂಗಾರ,
ನಾರಿಗೆ ಗುಣವೇ ಶೃಂಗಾರ,
ಗಗನಕ್ಕೆ ಚಂದ್ರಮನೆ ಶೃಂಗಾರ,
ನಮ್ಮ ಲಿಂಗದೇವನ ಶರಣರ ನೊಸಲಿಗೆ ಶ್ರೀ ವಿಭೂತಿಯೇ ಶೃಂಗಾರ
                                                     -ಬಸವಣ್ಣ

ಇಲ್ಲಿ ಬಸವಣ್ಣನವರು ಅವಶ್ಯಕತೆ,ನೈಜತೆ  ಮತ್ತು ಪ್ರಕೃತಿಯ ನಿಯಮಗಳಲ್ಲಿ ಶೃಂಗಾರವನ್ನು ಬಣ್ಣಿಸುತ್ತಾರೆ....
ನೀರಿನಲ್ಲಿ ಕೆಂದಾವರೆ ಇದ್ದರೆ ಒಂದು ಸೊಬಗು.... ಸಮುದ್ರದಲ್ಲಿ ತೆರೆ ಯಾವಾಗಲು ಏಳುತ್ತಿರುತ್ತದೆ...ತೆರೆ ನಿಂತರೆ ಸಮುದ್ರಕ್ಕೆ ಕಲೆಯೇ ಇರುವುದಿಲ್ಲ... ಹಾಗೆ ಒಂದು ಹೆಣ್ಣು ಅವಳು ನೋಡಲು ಎಷ್ಟೇ ಚೆನ್ನಾಗಿದ್ದರೂ ಅವಳಲ್ಲಿ ಒಳ್ಳೆಯ ಗುಣ ,ಸಂಸ್ಕೃತಿ ಇಲ್ಲದಿದ್ದರೆ ಅದು ಶೋಭೆ ತರುವುದಿಲ್ಲ...ಅದೇ ರೀತಿ ಆಕಾಶದಲ್ಲಿ ಚಂದ್ರ ಮಿನುಗುತ್ತಿದ್ದರೆ ನೋಡಲು ಚೆನ್ನ...ಹುಣ್ಣಿಮೆಯಲ್ಲಿ ಗಗನವು ಸೊಗಸಾಗಿರುತ್ತದೆ..ಅದೇ ಅಮವಾಸ್ಯೆಯಲ್ಲಿ ಕಟ್ಟಲು ಕವಿದಿರುತ್ತದೆ... ಇದೆ ರೀತಿ ಕೂಡಲ ಸಂಗನ  ಶರಣರ ಹಣೆಯಲ್ಲಿ ವಿಭೂತಿ ಕಂಗೊಳಿಸುತ್ತಿದ್ದರೆ ಅದರಲ್ಲಿ ಶಿವ ಕಳೆಯನ್ನು ಕಾಣಬಹುದು ಎಂದು ಅಭಿಪ್ರಾಯಪಡುತ್ತಾರೆ.. ಅಡ್ಡ ವಿಭೂತಿ ಇಲ್ಲದವರ ಮುಖ ನೋಡಲಾಗದು ಎಂದು ಇನ್ನೊಂದು ವಚನದಲ್ಲಿ ಹೇಳಿದ್ದಾರೆ..

Monday 12 December 2011

ವಚನ ಸಿಂಚನ ೧೫:ನಡತೆ

ಅಡ್ಡ ವಿಭೂತಿಯಿಲ್ಲದವರ ಮುಖ ಹೊಲ್ಲ, ನೋಡಲಾಗದು
ಲಿಂಗ ದೇವರಿಲ್ಲದ ಠಾವು ನರವಿಂಧ್ಯ, ಹೋಗಲಾಗದು
ದೇವಭಕ್ತರಿಲ್ಲದೂರುಸಿನೆ, ಹಾಳು ಕೂಡಲ ಸಂಗಮದೇವಾ.
                                                            -ಬಸವಣ್ಣ  

ಇಲ್ಲಿ ಬಸವಣ್ಣನವರು ಮನುಷ್ಯನ ನಡತೆ ಮತ್ತು ಅವನ ಕಾರ್ಯಗಳ ಬಗ್ಗೆ ಹೇಳುತ್ತಾರೆ... ಹಣೆಯಲ್ಲಿ ವಿಭೂತಿ ಇಲ್ಲದವರ ಮುಖದಲ್ಲಿ ಶಿವ ಕಳೆ ಇರುವುದಿಲ್ಲ ,ಅಂಥವರ ಮುಖ ನೋಡಲು ಆಗುವುದಿಲ್ಲ... "ಕೂಡಲ ಸಂಗನ ಶರಣರ  ನೊಸಲಿಗೆ ಶ್ರೀ ವಿಭೂತಿಯೇ ಶೃಂಗಾರ " ಎಂದು ಇನ್ನೊಂದು ವಚನದಲ್ಲಿ ಹೇಳಿದ್ದಾರೆ..
ಅದೇ ರೀತಿ ಲಿಂಗ ದೇವರಿಲ್ಲದ ,ಲಿಂಗ ದೇವರನ್ನು ಪೂಜಿಸದ ಉರು ಅಥವಾ ಅಂತ ಜಾಗಕ್ಕೆ ಹೋಗಲು ಮನಸ್ಸು ಒಪ್ಪುವುದಿಲ್ಲ ಎಂದು ಹೇಳುತ್ತಾ ದೇವ ಭಕ್ತರಿಲ್ಲದ ಉರು ಮತ್ತು ಆ ಸೀಮೆ ಹಾಳು ಬೀಳುತ್ತದೆ...ದೇವ ಭಕ್ತರಿಲ್ಲದಿದ್ದರೆ  ಅಲ್ಲಿ ಸಂಸ್ಕಾರ ಆಗಲಿ ಸನ್ನಡತೆ ಯಾಗಲಿ ಇರುವುದಿಲ್ಲ ಎಂದು ಭಾವಿಸುತ್ತಾರೆ..

Saturday 3 December 2011

ವಚನ ಸಿಂಚನ ೧೪:ಮೈಲಿಗೆ

ಮಂಡೆ ಮಾಸಿದಡೆ ಮಹಾ ಮಜ್ಜನವ ಮಾಡುವುದು,
ವಸ್ತ್ರ ಮಸಿಡದೆ ಮಡಿವಾಳರಿಗಿಕ್ಕುವುದು,
ಮನದ ಮೈಲಿಗೆ ತೊಳೆಯಬೇಕಾದರೆ 
ಕೂಡಲ ಚೆನ್ನ ಸಂಗಯ್ಯನ ಶರಣ ಅನುಭಾವವ ಮಾಡುವುದು...
                                                -ಚೆನ್ನ ಬಸವಣ್ಣ 
ಇಲ್ಲಿ ಚೆನ್ನ ಬಸವಣ್ಣನವರು ಮನಸ್ಸಿನ ಚಂಚಲತೆ,ಆಲೋಚನೆಗಳು ಮತ್ತು ನಿಯಂತ್ರಣದ ಬಗ್ಗೆ ಹೇಳುತ್ತಾರೆ  ...
ತಲೆ ಮಾಸಿದರೆ ಸ್ನಾನ ಮಾಡಿದರೆ ಧೂಳು ಎಲ್ಲಾ ಹೋಗಿ ಮತ್ತೆ ಶುಚಿ ಆಗುತ್ತದೆ..ಅದೇ ರೀತಿ ಬಟ್ಟೆ ಮಾಸಿದರೆ ಮಡಿವಾಳ ರಿಗೆ ಕೊಟ್ಟರೆ ಅವರು ಚೆನ್ನಾಗಿ ತೊಳೆದು ಕೊಡುತ್ತಾರೆ...ಆದರೆ 
ನಮ ಮನಸ್ಸಿನಲ್ಲಿರುವ ಕೊಳೆಯನ್ನು ಅಂದರೆ ಚಂಚಲವಾದ ನಮ್ಮ ಮನಸ್ಸಿನ ಕೆಟ್ಟ ಆಲೋಚನೆಗಳು,ತೊಳೆಯಬೇಕಾದರೆ  ನಾವು ಕೂಡಲ ಚೆನ್ನಸಂಗಯ್ಯನ ಶರಣ ಸಂಗವ ಮಾಡಬೇಕು.. ಅಂದರೆ ಶರಣರು ಅಷ್ಟು  ಸಾತ್ವಿಕರು,ಪರಿಶುದ್ದರು ಎಂದು ಚೆನ್ನ ಬಸವಣ್ಣನವರು ಅಭಿಪ್ರಾಯಪಡುತ್ತಾರೆ...ಶರಣರು ತಮ್ಮ ಕಾಯಕದಿಂದ ಮತ್ತು ಅವರ ಸಾಧನೆಗಳಿಂದ ಅನುಭಾವವನ್ನು ಪಡೆದಿರುವ ಜ್ಞಾನಿಗಳು  ಎಂದು ತಿಳಿಯಬಹುದು...