Monday 30 April 2012

ವಚನ ಸಿಂಚನ ೩೫:ಪೂಜೆ ಮತ್ತು ಕಾಯಕ

ನೆರೆ ಕೆನ್ನೆಗೆ,ತೆರೆ ಗಲ್ಲಕೆ,
ಶರೀರ ಗೂಡುವೋಗದ ಮುನ್ನ,
ಹಲ್ಲು ಹೋಗಿ,ಬೆನ್ನು ಬಾಗಿ
ಅನ್ಯರಿಗೆ ಹಂಗಾದ ಮುನ್ನ,
ಕಾಲ ಮೇಲೆ ಕೈಯನೂರಿ,
ಕೋಲ ಹಿಡಿಯದ ಮುನ್ನ,
ಮುಪ್ಪಿಂದೊಪ್ಪವಳಿಯದ ಮುನ್ನ,
ಮೃತ್ಯು ಮುಟ್ಟದ ಮುನ್ನ
ಪೂಜಿಸು ಕೂಡಲಸಂಗಮದೇವ !!!
                                 -ಬಸವಣ್ಣ

ಇಲ್ಲಿ ಬಸವಣ್ಣನವರು ಮನುಷ್ಯನ ಮುಪ್ಪಿನ ಲಕ್ಷಣಗಳನ್ನು ಹೇಳುತ್ತಾ,ಮುಪ್ಪು ಬಂದು ಮೃತ್ಯುವನ್ನು ತಲುಪುವ ಮುಂಚೆ ಕೂಡಲಸಂಗಮದೇವನನ್ನು  ಪೂಜಿಸು ಎಂದು ಹೇಳುತ್ತಾರೆ.ಮುಖದ ಮೇಲೆ ಕೆನ್ನೆ ಮತ್ತು ಗಲ್ಲ ಸುಕ್ಕು ಗಟ್ಟಿದಂತಾಗಿ ಮುಖದ ಛಾಯೆ ಬಾಡುವ ಮುನ್ನ,ಹಲ್ಲುಗಳೆಲ್ಲ ಹೋಗಿ,ಬೆನ್ನು ಗೂನಾಗಿ ಬೇರೆಯವರನ್ನು ಅವಲಂಭಿಸುವ ಮುನ್ನ,ನಡೆಯಲು ಕೋಲು ಹಿಡಿಯುವಂತಾಗುವ ಮುನ್ನ ಲಿಂಗದೆವನನ್ನು ಪೂಜಿಸಬೇಕು ಎಂದು ಹೇಳುತ್ತಾರೆ.
ಇಲ್ಲಿ ಪೂಜೆ ಅಂದರೆ ಕೇವಲ ದೇವರನ್ನು ಪೂಜಿಸುವುದು ಮಾತ್ರವಲ್ಲ,ಅಲ್ಲದೆ ತನ್ನ ಕಾಯಕವನ್ನು ಕೂಡ ಸರಿಯಾದ ಸಮಯದಲ್ಲಿ ಮಾಡಬೇಕು ಎಂದು ಇದರ ಅರ್ಥ.'ಕಾಯಕವೇ ಕೈಲಾಸ' ಎಂದು ಸಾರಿ ಕಲ್ಯಾಣದಲ್ಲಿ 'ಕಾಯಕ ಕ್ರಾಂತಿ'ಯನ್ನೇ ಉಂಟು ಮಾಡಿದ ಬಸವಣ್ಣ,ಭಕ್ತಿಗೆ ಕೊಟ್ಟಷ್ಟೇ ಪ್ರಾಮುಖ್ಯತೆಯನ್ನು ಕಾಯಕಕ್ಕೂ ಕೊಟ್ಟಿದ್ದರು.ಆದ್ದರಿಂದಲೇ ನಾನಾ ಕಾಯಕ ವರ್ಗದವರು ಭಕ್ತಿ ಪ್ರದಾನವಾದ ಮತ್ತು ಸಾಮಾಜಿಕ ಸಮಾನತೆ ಸಾರುತ್ತಿದ್ದ ಅನುಭವ ಮಂಟಪದಲ್ಲಿ ಭಾಗಿಯಾಗಿದ್ದು.
'ಹೊತ್ತು ಹೋಗುವ ಮುನ್ನ ಲಿಂಗವ ಪೂಜಿಸಬೇಕು' ಎಂದು ಇನ್ನೊಂದು ವಚನದಲ್ಲಿ ಹೇಳುವಂತೆ ಇಲ್ಲಿ ಕೂಡ ಪೂಜೆ ಮತ್ತು ಕಾಯಕವನ್ನು ಹೊತ್ತು ಇರುವಾಗಲೇ ಮಾಡಬೇಕು ಎಂದು ಹೇಳುತ್ತಾರೆ.


Monday 23 April 2012

ವಚನ ಸಿಂಚನ ೩೪:ಭಕ್ತಿ ಪಕ್ಷ

ಕಾಗೆ ಒಂದಗುಳ ಕಂಡಡೆ ಕರೆಯದೆ ತನ್ನ ಬಳಗವನು
ಕೋಳಿ ಒಂದಗುಳ ಕಂಡಡೆ ಕೂಗಿ ಕರೆಯದೆ
ತನ್ನ ಕುಲವನೆಲ್ಲವ,
ಶಿವಭಕ್ತನಾಗಿ ಭಕ್ತಿಪಕ್ಷ ವಿಲ್ಲದಿದ್ದಡೆ
ಕಾಗೆ ಕೋಳಿಗಿಂತ ಕರ ಕಷ್ಟ ಕೂಡಲಸಂಗಮದೇವಾ |
                                              -ಬಸವಣ್ಣ

ಈ ವಚನದಲ್ಲಿ ಬಸವಣ್ಣನವರು ಮನುಷ್ಯನ ಸ್ವಾರ್ಥ ಬುದ್ಧಿಯ ಬಗ್ಗೆ ಹೇಳುತ್ತಾ ಕಾಗೆ ಮತ್ತು ಕೋಳಿಯ ನಿದರ್ಶನವನ್ನು ಕೊಟ್ಟು ಅವುಗಳಿಗೆ ಹೋಲಿಸಿ ತೀಕ್ಷ್ಣವಾಗಿ ಭೋದಿಸುತ್ತಾರೆ. ಕಾಗೆ ಒಂದಗುಳ ಕಂಡಾಗ ಇಡಿ ತನ್ನ ಬಳಗವನ್ನು ಕರೆದು ಇದ್ದದ್ದರಲ್ಲೇ ಸಾಧ್ಯವಾದಷ್ಟು ಹಂಚಿ ತಿನ್ನುತ್ತದೆ,ಅದೇ ರೀತಿ ಕೋಳಿ ಕೂಡ ತನ್ನ ಸಂಸಾರವನೆಲ್ಲ ಕರೆದುಕೊಂಡು ಬಂದು ತಿನ್ನುತ್ತದೆ.ಆದರೆ ಶಿವ ಭಕ್ತನಾದ ಮನುಷ್ಯ ತನ್ನ ಕುಲ ಭಾಂದವರ ಜೊತೆ ಹಂಚಿ ತಿನ್ನಲಿಲ್ಲ ಅಂದರೆ ಕಾಗೆ ಕೋಳಿಗಳೇ ಮನುಷ್ಯನಿಗಿಂತ ಲೇಸು ಎಂದು ಹೇಳುತ್ತಾರೆ.

ಮಾನವ ಧರ್ಮದಲ್ಲಿ ಸ್ವಾರ್ಥ ಎಂಬ ದುರ್ಗುಣ ಅಂಟಿಕೊಂಡರೆ ಪ್ರಾಣಿಗಳಿಗಿಂತ ಅವನ ಜೀವನ ಕಷ್ಟವಾಗುತ್ತದೆ ಎಂದು ಹೇಳುತ್ತಾರೆ.

ಇಲ್ಲಿ ಭಕ್ತಿ ಪಕ್ಷ ಅಂದರೆ ಕೇವಲ ಅನ್ನವನ್ನು ಹಂಚಿ ತಿನ್ನುವುದಲ್ಲ,ಅಲ್ಲದೆ ತನ್ನ ಜ್ಞಾನವನ್ನು ಇನ್ನಿತರರ ಜೊತೆ ವಿಚಾರ ವಿನಿಮಯ ಮಾಡುವುದಾಗಿರಬಹುದು.

೧೨ನೆ ಶತಮಾನದಲ್ಲಿ ಅನುಭವ ಮಂಟಪ ಅನ್ನುವ ಸಭೆ ಇದ್ದದ್ದೇ ಈ ರೀತಿ ತಮ್ಮ ಜ್ಞಾನ(ಸಾಮಾಜಿಕ,ಆರ್ಥಿಕ,ಆಧ್ಯಾತ್ಮಿಕ ಎಲ್ಲವೂ)ವನ್ನು ಹಂಚಿಕೊಳ್ಳುವುದಕ್ಕೆ.

Sunday 15 April 2012

ವಚನ ಸಿಂಚನ ೩೩:ಬೆಳೆಯ ಭೂಮಿ

ಬೆಳೆಯ ಭೂಮಿಯಲೊಂದು ಪ್ರಳಯದ ಕಸ ಹುಟ್ಟಿ
ತಿಳಿಯಲೀಯದು,ಎಚ್ಚರಲೀಯದು ಎನ್ನವ ಗುಣವೆಂಬ
ಕಸವ ಕಿತ್ತು ಸಲಹಯ್ಯಾ ಲಿಂಗತಂದೆ ಸುಳಿದೆಗೆದು
ಬೆಳೆವೆನು ಕೂಡಲಸಂಗಮದೇವಾ..
                                 -ಬಸವಣ್ಣ

ಈ ವಚನದಲ್ಲಿ ಬೆಳೆಯ ಭೂಮಿ ಅಂದರೆ ಮನುಷ್ಯನ ದೇಹ ಆಗಿರಬಹುದು ಅಥವಾ ಅವನ ಆವ ಭಾವ ಆಗಿರಬಹುದು.ಪ್ರಳಯದ ಕಸ ಹುಟ್ಟಿ ಅಂದರೆ ಕೆಟ್ಟ ಗುಣಗಳು ಅಥವಾ ದುರ್ಗುಣಗಳು ಎಂದು ಭಾವಿಸಬಹುದು.ಹುಟ್ಟಿನಿಂದ ಸ್ವಚ್ಚವಾಗಿದ್ದ ತನ್ನ ದೇಹ ಮತ್ತು ಮನಸ್ಸು ಎರಡೂ ತನಗೆ ತಿಳಿಯದಂತೆ ಕೆಟ್ಟ ಭಾವಗಳಿಂದ ತುಂಬಿ ಹೋಗಿದೆ ಎಂದು ತನ್ನ ತಪ್ಪನ್ನು ಒಪ್ಪಿಕೊಳ್ಳುತ್ತಾ ಆಧ್ಯಾತ್ಮಿಕ ನೆಲೆಯಲ್ಲಿರುವ ಈ ವಚನದಲ್ಲಿ ಬಸವಣ್ಣನವರು,ತನ್ನಲ್ಲಿರುವ ಅವಗುಣಗಳನ್ನು ಕಿತ್ತೊಗೆದರೆ ಹುಲುಸಾದ ಬೆಲೆಯನ್ನು ಬೆಳೆಯುವೆ ಎಂದು ಕೂಡಲಸಂಗಮದೇವನಲ್ಲಿ ಪ್ರಾರ್ಥಿಸಿಕೊಳ್ಳುತ್ತಾರೆ.

ಇಲ್ಲಿ ಸುಳಿದೆಗೆದು ಅಂದರೆ ಭಕ್ತಿಯ ಮಾರ್ಗದಲ್ಲಿ ಎಂದು ತಿಳಿಯಬಹುದು ಮತ್ತು ಬೆಳೆ ಅಂದರೆ ಆಧ್ಯಾತ್ಮಿಕ ಮತ್ತು ಸಾಮಾಜಿಕ ಚಿಂತನೆಗಳು.

Monday 9 April 2012

ವಚನ ಸಿಂಚನ ೩೨:ಏಕದೆವೋಪಾಸನೆ

ಭಕ್ತರ ಕಂಡರೆ ಬೋಳರಪ್ಪಿರಯ್ಯಾ,
ಸವಣರ ಕಂಡರೆ ಬತ್ತಲೆಯಪ್ಪಿರಯ್ಯಾ.
ಹಾರುವರ ಕಂಡರೆ ಹರಿನಾಮವೆಂಬಿರಯ್ಯಾ,
ಅವರವರ  ಕಂಡಡೆ ಅವರವರಂತೆ ಸೂಳೆಗೆ ಹುಟ್ಟಿದವರ
ತೋರದಿರಯ್ಯಾ
ಕೂಡಲಸಂಗಮದೇವನ ಪೂಜಿಸಿ ಅನ್ಯದೈವಂಗಳಿಗೆರಗಿ
ಭಕ್ತರೆನಿಸಿಕೊಂಬ ಅಜ್ಞಾನಿಗಳ ನಾನೇನೆಂಬೆನಯ್ಯಾ...
                                                        -ಬಸವಣ್ಣ

ಇಲ್ಲಿ ಬಸವಣ್ಣನವರು ಬಹುದೆವೋಪಾಸನೆಯ ಕುರಿತು ಕಟುವಾಗಿ ನುಡಿಯುತ್ತಾರೆ.ಕೆಲವರು ಭಕ್ತರನ್ನು ಕಂಡಾಗ ಅವರಂತೆ ಬೋಳರಾಗುವುದು,ಶ್ರವಣರನ್ನು ಕಂಡರೆ ಅವರಂತೆ ಬೆತ್ತಲಾಗಿ ಅವರ ಅನುಯಾಯಿಗಳಂತೆ ವರ್ತಿಸುವುದು,ಹಾರುವರನ್ನು ಕಂಡಾಗ ಅವರನ್ನು ಓಲೈಸಲು ಹರಿನಾಮ ಭಜನೆ ಮಾಡುವುದು,ಹೀಗೆ ಒಂದೊಂದು ಪಂಗಡದವರು ಕಂಡಾಗ ಅವರನ್ನು ಹಿಂಬಾಲಿಸುವಂತೆ ತೋರಿಕೆ ಪಡಿಸುವುದು ತರವಲ್ಲ ಎಂದು ಹೇಳುತ್ತಾರೆ.ಜಗತ್ತಿನ ಆಗು ಹೋಗುಗಳಿಗೆ ಕಾರಣೀಭೂತನಾದ ಶಿವನ ಸ್ವರೂಪವಾದ ಕೂಡಲಸಂಗಮ ದೇವನನ್ನು ಪೂಜಿಸಿ ಬೇರೆ ದೇವರುಗಳಿಗೆ ಬಾಗುವವರು ಅಜ್ಞಾನಿಗಳು ಎಂದು ಹೇಳುತ್ತಾರೆ.
"ಛಲ ಬೇಕು ಶರಣಂಗೆ ಪರದೈವವನೊಲ್ಲೆನೆಂಬ" ಎಂದು ಇನ್ನೊಂದು ವಚನದಲ್ಲಿ ಹೇಳುವಂತೆ ಮತ್ತು "ದೇವನೊಬ್ಬ ನಾಮ ಹಲವು" ಎಂಬಂತೆ ಈ ವಚನದಲ್ಲಿ ಕೂಡ ಅನ್ಯ ದೇವಗಳ ಪೂಜೆಯ ಬಗ್ಗೆ ತಾತ್ಸಾರ ಮಾಡುತ್ತಾರೆ.

Monday 2 April 2012

ವಚನ ಸಿಂಚನ ೩೧:ಮರ್ಕಟ ಮನಸು

ಕೊಂಬೆಯ ಮೇಲಿನ ಮರ್ಕಟನಂತೆ ಲಂಘಿಸೂದೆನ್ನ ಮನವು,
ನಿಂದಲ್ಲಿ ನಿಲಲೀಯದೆನ್ನ ಮನವು,
ಹೊಂದಿದಲ್ಲಿ ಹೊಂದಲೀಯದೆನ್ನ ಮನವು,
ಕೂಡಲಸಂಗಮದೇವಾ ನಿಮ್ಮ ಚರಣ ಕಮಲದಲ್ಲಿ ಭ್ರಮರನಾಗಿರಿಸು
ನಿಮ್ಮ ಧರ್ಮ..
                                    -ಬಸವಣ್ಣ

ಈ ವಚನದಲ್ಲಿ ಬಸವಣ್ಣನವರು ಗುರಿ ಇಲ್ಲದ ಮನುಷ್ಯನ ಚಂಚಲ ಮನಸ್ಸಿನ ಬಗ್ಗೆ ಹೇಳುತ್ತಾರೆ.ಮಂಗವೊಂದು ಒಂದು ಮರದಿಂದ ಇನ್ನೊಂದು ಮರಕ್ಕೆ ಹಾರುವ ಹಾಗೆ ತನ್ನ ಮನಸ್ಸು ಕೂಡ ಒಂದು ವಿಷಯದಿಂದ ಇನ್ನೊಂದು ವಿಷಯಕ್ಕೆ ಜಾರುತ್ತಿದೆ.ಆಸೆಗಳು ಕೂಡ ಒಂದರ ನಂತರ ಇನ್ನೊಂದು ಅನ್ನುವ ಹಾಗೆ ಸುಳಿಯುತ್ತಿವೆ.ಯಾವುದಾದರು ಒಂದೇ ವಿಷಯಕ್ಕೆ ಅಥವಾ ಒಂದೇ ಗುರಿಯೆಡೆಗೆ ಮನಸ್ಸನ್ನು ಕ್ರೂಡಿಕರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ,ಒಂದೇ ಕಡೆ ಮನವು ನಿಲ್ಲುತ್ತಿಲ್ಲ, ಆದ್ದರಿಂದ ನನ್ನನ್ನು ಭಕ್ತಿ ಆಧ್ಯಾತ್ಮದಿಂದ ತುಂಬಿರುವ ನಿಮ್ಮ ಚರಣ ಕಮಲದ ಸುತ್ತ ಸುತ್ತುವಂತೆ ನನ್ನನ್ನು ದುಂಬಿಯನ್ನಾಗಿ ಮಾಡು ಎಂದು ಬೇಡುತ್ತಾ ನಿಮ್ಮ ಧರ್ಮವನ್ನು ಎಲ್ಲೆಲ್ಲೂ ಪಸರಿಸುತ್ತೇನೆ ಎಂದು ಹೇಳುತ್ತಾರೆ.

ಪ್ರಪಂಚದ ಬೇರೆ ವಿಷಯಗಳಿಗೆ ಬೇಸತ್ತು ಹೋಗಿರುವ ಮನಸ್ಸು ಕೇವಲ ಭಕ್ತಿಯೆಡೆಗೆ ಸಾಗುವಂತೆ ತೋರಿಸುತ್ತದೆ ಈ ವಚನ.

"ಅತ್ತಲಿತ್ತ ಹೋಗದಂತೆ ಹೆಳವನ ಮಾಡಯ್ಯ ತಂದೆ" ಎಂದು ಇನ್ನೊಂದು ವಚನದಲ್ಲಿ ಹೇಳುವಂತೆ ಇಲ್ಲಿ ಕೂಡ ಮನೋನಿಗ್ರಹದ ಬಗ್ಗೆ ಹೇಳುತ್ತಾರೆ.