Sunday 28 October 2012

ವಚನ ಸಿಂಚನ ೫೫:ದೇಹವೆಂಬ ಬಂಡಿ

ಕಾಲುಗಳೆರಡು ಗಾಲಿ ಕಂಡಯ್ಯಾ
ದೇಹವೆಂಬುದು ತುಂಬಿದ ಬಂಡಿ ಕಂಡಯ್ಯಾ
ಬಂಡಿಯ ಹೊಡೆವವರ್ಯೆವರು ಮಾನಿಸರು
ಒಬ್ಬರಿಗೊಬ್ಬರು ಸಮನಿಲ್ಲವಯ್ಯಾ
ಅದರಿಚ್ಚೆಯನರಿದು ಹೊಡೆಯದಿರ್ದಡೆ
ಅದರಚ್ಚು ಮುರಿದಿತ್ತು ಗುಹೇಶ್ವರಾ...
                            -ಅಲ್ಲಮಪ್ರಭು

ಈ ವಚನದಲ್ಲಿ ಅಲ್ಲಮಪ್ರಭು ಮನುಷ್ಯನ ದೇಹ ಆತ್ಮ ಮತ್ತು ಮನಸ್ಸಿನ ಸಂಬಂಧಗಳು ಎಷ್ಟು ಚಂಚಲ ಮತ್ತು ಹೊಂದಾಣಿಕೆ ಇಲ್ಲದಂತಾಗಿದೆ ಎಂದು ವಿವರಿಸುತ್ತಾರೆ.ಎನ್ನ ಕಾಲೇ ಕಂಬ ಎಂದು ಬಸವಣ್ಣ ದೇಹವನ್ನು ದೇವಾಲಯಕ್ಕೆ ಹೋಲಿಸಿದ ಹಾಗೆ ಇಲ್ಲಿ ಅಲ್ಲಮಪ್ರಭು ದೇಹವನ್ನು ಬಂಡಿಗೆ ಹೋಲಿಸುತ್ತಾ ಕಾಲುಗಳನ್ನು ಬಂಡಿಯ ಗಾಲಿ ಎಂದು ಹೇಳುತ್ತಾನೆ.

ಈ ದೇಹವೆಂಬ ಬಂಡಿಗೆ ಆತ್ಮ ಯಜಮಾನನಾದರೆ ಅದನ್ನು ಹೊಡೆಯುವವರು ಐದು ಜನ ಮಾನಿಸರು,ಅಂದರೆ ಪಂಚೇಂದ್ರಿಯಗಳು..ಈ ಐದು ಇಂದ್ರಿಯಗಳಲ್ಲಿ ಒಂದಕ್ಕೆ ಒಂದು ಹೊಂದಾಣಿಕೆ ಇಲ್ಲ,ಎಲ್ಲವು ತಮ್ಮ ತಮ್ಮ ಪಥದಲ್ಲಿ ಮುನ್ನಡೆಯಲು ಪ್ರಯತ್ನಿಸುತ್ತವೆ,ತಮ್ಮ ಇಷ್ಟದ ಸುಖಗಳನ್ನು ಅನುಭವಿಸಲು ಪ್ರಯತ್ನಿಸುತ್ತವೆ. 'ಅದರಿಚ್ಚೆಯನರಿದು ಹೊಡೆಯದಿರ್ದಡೆ' ಅಂದರೆ ಆತ್ಮದ ಇಚ್ಛೆಯನ್ನು ಅರಿಯದೆ ಈ ಇಂದ್ರಿಯಗಳು ಮುನ್ನಡೆಯುತ್ತಿವೆ,ಆಗ 'ಅದರಚ್ಚು ಮುರಿದಿತ್ತು' ಅಂದರೆ ಬಂಡಿಯ ಆಧಾರವಾದ ಆಚ್ಚು ಕಳಚಿ ಬೀಳುತ್ತದೆ ಎಂದು ವಿವರಿಸುತ್ತಾನೆ.ಆಧಾರವೇ ಇಲ್ಲದಿದ್ದರೆ ಬಂಡಿಯು ಕೂಡ ಬಿದ್ದ ಹಾಗೆ.

ಅಂದರೆ ಇಲ್ಲಿ ಮನುಷ್ಯ ತನ್ನ ಆತ್ಮ ಸುಖವ ಮರೆತು ಇಂದ್ರಿಯ ಸುಖಕ್ಕೆ ಬಲಿಯಾಗಿ,ಜೀವನವೆಂಬ ಪಯಣದಲ್ಲಿ ಬಂಡಿಯೆಂಬ ದೇಹವನ್ನು ಹಾಳು ಮಾಡಿಕೊಳ್ಳುತ್ತಿದ್ದಾನೆ ಎಂದು ಅರ್ಥೈಸಿಕೊಳ್ಳಬಹುದು.

Monday 22 October 2012

ವಚನ ಸಿಂಚನ ೫೪:ಗುರು ಶಿಷ್ಯ ಸಂಭಂದ

ಗುರು-ಶಿಷ್ಯ ಸಂಬಂಧವೆನೆಂದುಪಮಿಸುವೆ?
ಜ್ಯೋತಿಯಲೊದಗಿದ ಜ್ಯೋತಿಯಂತಿರಬೇಕು
ದರ್ಪಣದೊಳಡಗಿದ ಪ್ರತಿಬಿಂಬದಂತಿರಬೇಕು
ಸ್ಫಟಿಕದೊಳಗಿರಿಸಿದ ರತ್ನದಂತಿರಬೇಕು
ರೂಪಿನ ನೆಳಲಿನ ಅಂತರಂಗದಂತಿರಬೇಕು
ಕೂಡಲ ಚನ್ನಸಂಗಯ್ಯಾ ಇದು ಕಾರಣ
ದರ್ಪಣವು ದರ್ಪಣಕೆ ತೋರಿದಂತಿರಬೇಕು..
                               -ಚೆನ್ನ ಬಸವಣ್ಣ


ಈ ವಚನದಲ್ಲಿ ಚೆನ್ನ ಬಸವಣ್ಣ ಗುರು ಶಿಷ್ಯ ಸಂಭಂದ ಹೇಗಿರಬೇಕು ಎಂಬುದನ್ನು ವಿವರಿಸುತ್ತಾರೆ.ಗುರು ಶಿಷ್ಯ ಸಂಭಂದ ಎಲ್ಲ ಧರ್ಮಗಳನ್ನು,ಜನಾಂಗಗಳನ್ನು,ಲಿಂಗ ಭೇಧವನ್ನು ಮೀರಿ ನಿಂತಿರುವಂತದ್ದು.

ಒಂದು ದೀಪದಿಂದ ಇನ್ನೊಂದು ದೀಪವನ್ನು ಹಚ್ಚಿದರೆ ಇನ್ನಷ್ಟು ಬೆಳಕನ್ನು ನೀಡಿದ ಹಾಗೆ,ಅದೇ ರೀತಿ ಗುರು ತನ್ನ ಶಿಷ್ಯನಿಗೆ ತನ್ನ ಜ್ಞಾನವನ್ನು ಧಾರೆ ಎರೆದರೆ ಅದು ಕೂಡ ಆತನ ಬದುಕಿನ ದೀಪ ಹಚ್ಚಿದಂತೆ.ಅದೇ ರೀತಿ ಕನ್ನಡಿ ಒಳಗಿನ ಪ್ರತಿಬಿಂಬ ಹೇಗೆ ಸ್ಪಷ್ಟವಾಗಿರುತ್ತದೋ ಅದೇ ರೀತಿ ಗುರು ಶಿಷ್ಯರ ನಡುವಿನ ಸಂಭಂದ ಇರಬೇಕು,ಅಂತ ಗೆಳೆತನ ಬೆಸೆದಿರಬೇಕು,ಅಂದರೆ ಗುರು ಆದವನು ಕೂಡ ಶಿಷ್ಯನಿಂದ ಕಲಿಯಬೇಕಾದ್ದು ಬಹಳ ಇದೆ ಎಂಬುದನ್ನು ಇಲ್ಲಿ ವಿವರಿಸಬಹುದು.ಸ್ಫಟಿಕದೊಳಗೆ ರತ್ನವು ಅಡಗಿರುವುದು ಹೇಗೆ ಪಾರದರ್ಶಕತೆ ಇಂದ ಕೂಡಿದೆಯೋ ಅದೇ ರೀತಿ ಗುರುವು ತನ್ನ ಶಿಷ್ಯನಿಗೆ ಅಷ್ಟೇ ಪಾರದರ್ಶಕತೆ ಮತ್ತು ಪ್ರಾಮಾಣಿಕವಾಗಿ ಭೋಧಿಸಬೇಕು.ತನ್ನ ನೆರಳಿನ ಅಂತರಂಗದಲ್ಲಿ ತಾನೇ ಇರುವ ಹಾಗೆ ಗುರುವಿನ ಅಂತರಂಗದಲ್ಲಿ ಶಿಷ್ಯ ಮತ್ತು ಶಿಷ್ಯನ ಅಂತರಂಗದಲ್ಲಿ ಗುರುವು ಇರಬೇಕು ಎಂದು ಹೇಳುತ್ತಾ ದರ್ಪಣಕೆ ದರ್ಪಣ ತೋರಿದಂತೆ ಅಂದರೆ ಕನ್ನಡಿಯಲ್ಲಿ ನಮ್ಮದೇ ಪ್ರತಿಬಿಂಬ ಕಾಣುವ ಹಾಗೆ ಗುರು ಆದವನು ಶಿಷ್ಯನಿಂದ ಶಿಷ್ಯ ಗುರುವಿನಿಂದ ಕಲಿಯಬೇಕು ಎಂದು ಅರ್ಥೈಸಿಕೊಳ್ಳಬಹುದು.ಅಲ್ಲದೆ ತಪ್ಪಿದರೆ ಒಬ್ಬರಿಗೊಬ್ಬರು ತಿದ್ದಿ ತೀಡುವಂತಿರಬೇಕು ಎಂಬುದನ್ನು ಅರಿಯಬೇಕು ಎಂದು ಚೆನ್ನ ಬಸವಣ್ಣ ಹೇಳುತ್ತಾನೆ.
 

Sunday 7 October 2012

ವಚನ ಸಿಂಚನ ೫೩:ಪುನರ್ಜನ್ಮದಿಂದ ಮುಕ್ತಿ

ಪತ್ರೆಯ ತಿಂದಾಡು ಮುಕ್ತವಾದುದೆಂಬುದ
ಬಲ್ಲಡೆ ಹೇಳಿರಯ್ಯಾ ,
ಲಿಂಗವ ಪೂಜಿಸಿದ ಬಳಿಕ ವರ್ಣಿಕ ಲಿಂಗವಾದನೆಂಬುದ
ಬಲ್ಲಡೆ ಹೇಳಿರಯ್ಯಾ ,
ಜಂಗಮವ ಸಂತೃಪ್ತಿ ಪಡಿಸಿದ ಭಕ್ತ ಭವವಿರಹಿತನಾದುದ 
ಬಲ್ಲಡೆ ಹೇಳಿರಯ್ಯಾ ,
ಇವೆಲ್ಲ ಚತುರ್ವಿದ ಪದಕ್ಕೆ ಒಳಗು;
ತನ್ನ ತಾ  ತಿಳಿದ ವೀರಶೈವ ಭಾವಕ್ಕೆ ಬಂದನೆಂಬ ದ್ವಿರುಕ್ತಿಯನು 
ಬಲ್ಲಡೆ ಹೇಳಿರಯ್ಯಾ ,
ಕಪಿಲಸಿದ್ಧಮಲ್ಲಿಕಾರ್ಜುನ ಸಾಕ್ಷಿಯಾಗಿ....
                            -ಸಿದ್ಧರಾಮೇಶ್ವರ

ಈ ವಚನದಲ್ಲಿ ಸಿದ್ಧರಾಮ ಭಕ್ತಿಯ ಮೂಲಕ ಪುನರ್ಜನ್ಮದಿಂದ ಹೇಗೆ ಮುಕ್ತಿ ಪಡೆಯಬಹುದು ಎಂಬುದರ ಬಗ್ಗೆ ಬೆಳಕು ಚೆಲ್ಲುತ್ತಾನೆ.ಇಲ್ಲಿ ಕೆಲವು ನಿದರ್ಶನಗಳನ್ನು ಕೊಟ್ಟು ಸಿದ್ಧರಾಮ ವಿವರಿಸುತ್ತಾನೆ.ಶಿವ ಪೂಜೆಗೆ ಬಳಸುವ ಬಿಲ್ವ ಪತ್ರೆಯನ್ನು ತಿಂದ ಆಡು ಮುಕ್ತಿಯನ್ನು ಪಡೆಯಿತು,ಉಚ್ಚ ಜಾತಿಯಲ್ಲಿ ಹುಟ್ಟಿದಾತ ಲಿಂಗವ ಪೂಜಿಸಿದ ಬಳಿಕ ದೈವತ್ವವನ್ನು ಪಡೆದ,ಅದೇ ರೀತಿ ಜಂಗಮನನ್ನು ತೃಪ್ತಿ ಪಡಿಸಿದ ಬಳಿಕ ಭವಿಯು ಬಂಧಮುಕ್ತನಾಗುತ್ತಾನೆ,ಅನ್ದೆರ್ ಲೋಕದ ಮೇಲಿನ ತನ್ನ ಭವವನ್ನು ಕಳೆದುಕೊಳ್ಳುತ್ತಾನೆ.ಸಿದ್ಧರಾಮ ಹೇಳುತ್ತಾನೆ,ಸಂಪ್ರದಾಯಸ್ಥ ಉಚ್ಚ ಜಾತಿಯವರು ಆಧ್ಯಾತ್ಮಿಕವಾಗಿ ಇಷ್ಟು ಎತ್ತರಕ್ಕೆ ಏರಲು ಸಾಧ್ಯವಿಲ್ಲ ಎಂದು.

ಇವೆಲ್ಲ ಚತುರ್ವಿದ ಪದಕ್ಕೆ ಒಳಗು ಅಂದರೆ ಇಲ್ಲಿ ಉಚ್ಚ ಜಾತಿಯವರನ್ನು ಸಮಾಜದ ವರ್ಣ ಭೇದ ನೀತಿಯ ನಾಲ್ಕು ಜಾತಿಯ ವರ್ಗಗಳನ್ನು ಉಲ್ಲೇಖಿಸುತ್ತಾರೆ.(ಬ್ರಾಹ್ಮಣ,ಕ್ಷತ್ರಿಯ,ವೈಶ್ಯ,ಶೂದ್ರ).
ಈ ವಚನದ ಎರಡನೇ ನಿದರ್ಶನದಲ್ಲಿ ಕೂಡ ಭಕ್ತನೊಬ್ಬ ಜಾತಿ ವ್ಯವಸ್ಥೆಗೆ ಅಂಟಿ ಕೊಂಡಿರುವುದನ್ನು ತೋರಿಸುತ್ತದೆ.ಆತನಿಗೆ ತನ್ನ ಹುಟ್ಟಿನಿಂದ  ಬಂದಿರುವ  ಉಚ್ಚ ಜಾತಿಯೆಂಬ ಹೆಮ್ಮೆ ಇರಬಹುದು,ಆದರೆ ಆತ ವಚನಕಾರರಿಗೆ ಬೇರೆ ಭಕ್ತರಂತೆ ಸಮನಾಗಿಯೇ ಕಾಣುತ್ತಾನೆ ಹೊರಟು,ಈ ವ್ಯವಸ್ಥೆಯಲ್ಲಿ ಯಾರೂ ಉಚ್ಚರಲ್ಲ,ಯಾರೂ ನೀಚರಲ್ಲ ಎಂದು ವಚನಕಾರ ಹೇಳುತ್ತಾನೆ.ಆದ್ದರಿಂದ ಆತ ಕೂಡ ಅನುಭವದಿಂದ ಉಚ್ಚ ಸಾಧನೆಯನ್ನು ಮಾಡಬಹುದು.

ಇಂಥ ಒಂದು ಭಕ್ತಿಯ ನಡಿಗೆ ತನ್ನ ಆತ್ಮವನ್ನು ಇನ್ನೊಂದು ದೈವ ಪ್ರಪಂಚಕ್ಕೆ ಒಪ್ಪಿಸುವುದಾದರೆ,ಆತ ಪುನರ್ಜನ್ಮದಿಂದ ಮುಕ್ತಿ ಪಡೆದ ಹಾಗೆ ಎಂದು ಸಿದ್ಧರಾಮ ಹೇಳುತ್ತಾನೆ.ಲಿಂಗ ಪೂಜೆಯಿಂದಾಗಿ ಎಲ್ಲರೂ ಸಮನಾಗುತ್ತಾರೆ.
ಆದ್ದರಿಂದ ಜಾತಿ ವ್ಯವಸ್ಥೆ ದೂರ ಆಗುತ್ತದೆ ಎನ್ನುವ ಮಾತನ್ನು ಕೂಡ ಈ ವಚನ ವಿವರಿಸುತ್ತದೆ.

Monday 1 October 2012

ವಚನ ಸಿಂಚನ ೫೨:ಕಾಯಕ ಮತ್ತು ದೈವ

ಮಾಡುವ ಭಕ್ತಂಗೆಯೂ ಕೊಡುವ ದೇವಂಗೆಯೂ ಎಂದೆಂದಿಗೂ ಕೇಡಿಲ್ಲ,
ಮಾಡಿ ಭೋ ಮಾಡಿ ಭೋ
ಎನಗೆ ಲೆಸಾಯಿತ್ತು,ಹೋಯಿತ್ತೆಂಬ ಚಿಂತೆ ಬೇಡ
ಇದಿತ್ತೆಂಬ ಸಂತೋಷ ಬೇಡ
ಸಕಳೇಶ್ವರ ದೇವನವರನಂದು ಸಲಹುವನಾಗಿ.
                         -ಸಕಲೇಶ ಮಾದರಸ

ಈ ವಚನದಲ್ಲಿ ಸಕಲೇಶ ಮಾದರಸ ಕಾಯಕದಲ್ಲಿರಬೇಕಾದ ಸಹಜ ಗಣಗಳನ್ನು ವಿವರಿಸುತ್ತಾ ಅದು ಅಧ್ಯಾತ್ಮ ಸಾಧನೆ ಕೂಡ ಎಂದು ಹೇಳುತ್ತಾನೆ.ಸದಾ ಒಳ್ಳೆಯ ಕೆಲಸವನ್ನು ಮಾಡುವ ಭಕ್ತನಿಗೂ,ಅಂತ ಭಕ್ತನಿಗೆ ಸಕಲವನ್ನೂ ನೀಡುವ ದೇವರಿಗೂ ಎಂದಿಗೂ ಕೇಡು ಎಂಬುದಿಲ್ಲ.ತನಗೆ ಲೆಸಾಯಿತ್ತು,ತನಗೆ ಸಿಗಲಿಲ್ಲ ಎಂಬ ಚಿಂತೆ ಬೇಡ,ಎಂದು ಹೇಳುತ್ತಾ ಹೆಚ್ಚು ಇದೆ ಎಂಬ ಸಂತೋಷ ಪಡದೆ ತನ್ನ ಕಾಯಕವನ್ನು ಮಾಡಬೇಕು.ಆ ಕಾಯಕದಲ್ಲಿ ದೇವರನ್ನು ಅರಿಯಬೇಕು,ಆಗ ಶಿವನು ತಮ್ಮನ್ನು ಸಲಹುವವನು ಎಂದು ಹೇಳುತ್ತಾನೆ ವಚನಕಾರ.

(ಸಕಳೇಶ ಮಾದರಸ-೧೧೩೦. ಬಸವಣ್ಣನ ಹಿರಿಯ ಸಮಕಾಲೀನ. ಕಲ್ಲುಕುರಿಕೆ ಎಂಬ ಊರಿನ ಅರಸ. ತಂದೆಯ ಹೆಸರು ಮಲ್ಲಿಕಾರ್ಜುನ. ನಂತರದ ಕಾಲದಲ್ಲಿ ಬಂದ ಕೆರೆಯ ಪದ್ಮರಸ, ಕುಮಾರ ಪದ್ಮರಸ, ಪದ್ಮಣಾಂಕ ಎಂಬ ಕವಿಗಳು ಇವನ ವಂಶದವರು. ಮಾದರಸನ ೧೩೩ ವಚನಗಳು ದೊರೆತಿವೆ)