Monday 24 December 2012

ವಚನ ಸಿಂಚನ ೫೮:ದೇವರೊಡನೆ ಸಂಭಂದ

ಅಯ್ಯಾ ನೀನು ನಿರಾಕಾರವಾಗಿರ್ದಲ್ಲಿ
ನಾನು ಜ್ಝಾನವೆ೦ಬ ವಾಹನವಾಗಿರ್ದೆ ಕಾಣಾ,
ಅಯ್ಯಾ ನೀನು ನಾಟ್ಯಕ್ಕೆ ನಿ೦ದಲ್ಲಿ
ನಾನು ಚೈತನ್ಯವೆ೦ಬ ವಾಹನವಾಗಿರ್ದೆ ಕಾಣಾ,
ಅಯ್ಯಾ ನೀನು ಆಕಾರವಾಗಿರ್ದಲ್ಲಿ
ನಾನು ವೃಷಭನೆ೦ಬ ವಾಹನವಾಗಿರ್ದೆ ಕಾಣಾ,
ಅಯ್ಯಾ ನೀನೆನ್ನ ಭವವ ಕೊ೦ದಿಹೆನೆ೦ದು
ಜ೦ಗಮ-ಲಾ೦ಛನನಾಗಿ ಬ೦ದಲ್ಲಿ
ನಾನು ಭಕ್ತನೆ೦ಬ ವಾಹನನಾಗಿರ್ದೆ
ಕಾಣಾ ಕೂಡಲಸ೦ಗಮದೇವಾ!!
                                   -ಬಸವಣ್ಣ

ಈ ವಚನದಲ್ಲಿ ಬಸವಣ್ಣ,ಶಿವ ಸ್ವರೂಪಿಯೂ ಪ್ರಣವ ಸ್ವರೂಪಿಯೂ ಆದ ಕೂಡಲಸಂಗಮನಿಗೂ ಇರುವ ಅವಿನಾಭಾವ ಸಂಭಂದ ಎಷ್ಟು ಭಕ್ತಿಯಿಂದ ಕೂಡಿದೆ ಎಂದು ವಿವರಿಸುತ್ತಾನೆ.

ದೇವರು ನಿರಾಕಾರ ಅನ್ನುತ್ತಾರೆ.ಶಿವನು ಅಂತ ನಿರಾಕಾರ ಸ್ಥಿತಿಯಲ್ಲಿದ್ದಾಗ ತಾನು ಜ್ಞಾನದ ಮೂಲಕ ದೇವರನ್ನು ಕೊಂಡೊಯ್ದು ಎಲ್ಲರನ್ನು ಬೆಸೆಯುವಂತೆ ಮಾಡುತ್ತೇನೆ ಎಂದು ಬಸವಣ್ಣ ಹೇಳುತ್ತಾ,ನಾಟ್ಯ ಪ್ರಿಯನೂ ಆದ ನಟರಾಜನಾದ ಶಿವನು ನಾಟ್ಯಕ್ಕೆ ನಿಂತಾಗ ತಾನು ಆ ನೃತ್ಯಕ್ಕೆ ಚೈತನ್ಯವನ್ನು ತುಂಬುತ್ತೇನೆ ಎಂದು ಹೇಳುತ್ತಾನೆ.ದೇವನು ಆಕರದಲ್ಲಿದ್ದಾಗ ತಾನು ನಂದಿಯಾಗಿ ತಮ್ಮನ್ನು ಕರೆದೊಯ್ಯುತ್ತೇನೆ ಎಂದು ಕೂಡಲಸಂಗಮನಲ್ಲಿ ಹೇಳಿಕೊಳ್ಳುತ್ತಾರೆ.
ಮುಂದುವರೆಯುತ್ತಾ,ನೀನೆನ್ನ ಭವವ ಕೊ೦ದಿಹೆನೆ೦ದು ಜ೦ಗಮ-ಲಾ೦ಛನನಾಗಿ ಬ೦ದಲ್ಲಿ,ಇಲ್ಲಿ ಎನ್ನ ಭವ ಅಂದರೆ ಎನ್ನ ಹುಟ್ಟು,ಎನ್ನ ಆಶಯ,ಎನ್ನ ಸೃಷ್ಟಿ ಎಂದೆಲ್ಲ ಅರ್ಥೈಸಬಹುದು.ಇವುಗಳನ್ನೆಲ್ಲ ನಾಶಪಡಿಸಿದ ಜಂಗಮ ರೂಪಿಯಾಗಿ ಬಂದರೆನನ್ನು ನಿನ್ನ ಭಕ್ತನಾಗಿ ನಿನ್ನನ್ನು ಮುನ್ನಡೆಸುತ್ತೇನೆ ಎಂದು ಕೂಡಲಸಂಗಮನಲ್ಲಿ ಹೇಳಿಕೊಳ್ಳುತ್ತಾನೆ.

ಇವೆಲ್ಲ ನಿದರ್ಶನಗಳಿಂದ ಬಸವಣ್ಣ ಭಗವಂತನೊಡನೆ ಸದಾ ಅವಿನಾಭಾವ ಸಂಭಂದವನ್ನು ನಾನ ರೀತಿಯಲ್ಲಿ ಹೊಂದಿರುವೆ ಎಂದು ಹೇಳುತ್ತಾರೆ.ಇದರಿಂದ ನಮಗೆ ಬಸವಣ್ಣನ ಭಕ್ತಿ ಎಂತಹುದು ಎಂದು ತಿಳಿಯುತ್ತದೆ


Monday 10 December 2012

ವಚನ-ಸಿಂಚನ ೫೭:ಪುಣ್ಯ ಪಾಪಗಳ ಎಂಜಲು

ವೇದಂಗಳೆಲ್ಲ ಬ್ರಹ್ಮನೆಂಜಲು ,ಶಾಸ್ತ್ರಂಗಳೆಲ್ಲ ಸರಸ್ವತಿಯೆಂಜಲು,
ಆಗಮಗಳೆಲ್ಲ ರುದ್ರನೆಂಜಲು,ಪುರಾಣಂಗಳೆಲ್ಲ ವಿಷ್ಣುವಿನೆಂಜಲು ,
ನಾದಬಿಂದುಕಳೆಗಳೆಂಬವು ಅಕ್ಷರತ್ರಯದೆಂಜಲು ,
ಅಕ್ಷರತ್ರಯಂಗಳು ಪ್ರಕೃತಿಯ ಎಂಜಲು.
ಇಂತಿವೆಲ್ಲವ  ಹೇಳುವರು ಕೇಳುವರು 
ಪುಣ್ಯ ಪಾಪಂಗಳ ಎಂಜಲೆಂದಾತ ಅಂಬಿಗರ ಚೌಡಯ್ಯ..
                                       -ಅಂಬಿಗರ ಚೌಡಯ್ಯ
                             

 ಈ ವಚನದಲ್ಲಿ ಅಂಬಿಗರ ಚೌಡಯ್ಯ ವೇದ. ಶಾಸ್ತ್ರ ಆಗಮ ಪುರಾಣ  ನಾದಬಿಂದು  ಅಕ್ಷರ  ತ್ರಯ ಇವುಗಳನ್ನೆಲ್ಲ  ಹೇಳುವವರು  ಮತ್ತು ಕೇಳುವವರು ಪಾಪ ಪುಣ್ಯಗಳ ಎಂಜಲು ಎಂದು ಛೇಡಿಸುತ್ತಾರೆ. ಹೀಗೆ  ಹೇಳುವ ಮೂಲಕ  ದೇಹವೇ ದೇವಾಲಯ  ಎಂದು  ಅಂತರಾತ್ಮದ ಪ್ರತಿರೂಪವೇ ,ಕುರುಹು ಆದ ಇಷ್ಟಲಿಂಗವೆಂದು  ಹೇಳುತ್ತಾರೆ.. ರೀತಿ ಇಷ್ಟಲಿಂಗದ ಪೂಜೆಯ   ಮಹತ್ವವನ್ನು ಇಲ್ಲಿ ವಿವರಿಸುತ್ತಾರೆ.ಅಸ್ಪ್ರುಶ್ಯರು ಮತ್ತು ಕೀಳು ಜಾತಿಯವರು ಎಂದು ಭಾವಿಸಲ್ಪಟ್ಟವರನ್ನು  ದೇವಾಲಯಕ್ಕೆ ಪ್ರವೇಶ ನಿಷಿದ್ಧ ಇದ್ದ ಸನ್ನಿವೇಶದಲ್ಲಿ ಅಂಥವರಿಗೆ ದೇಹವನ್ನೇ  ಅವರ  ಅಂತರಂಗದಲ್ಲಿ ದೇವಸ್ವರೂಪವನ್ನು ಕಂಡುಕೊಳ್ಳುವ ಮತ್ತು ಅದರ ಕುರುಹು ಆಗಿ ಇಷ್ಟಲಿಂಗದ ಮೂಲಕ ತಮ್ಮ ಅಂಗೈ ಯಲ್ಲಿ ದೇವರನ್ನು ಕಂಡುಕೊಂಡು ತಾವು  ಹೋಗದೆ ದೇವರನ್ನೇ ತಮ್ಮತ್ತ  ಕರೆಸಿ ಕೊಂಡವರು  ಎಂದು ಹೇಳುತ್ತಾರೆ.ಈ ವಚನದಲ್ಲಿ ಚೌಡಯ್ಯ ಕೂಡ ಹೊರಗಿನವರ ಹಾಗೆ ಕಂಡು ಬಂದು ಹೊರಗಿನವರಿಗೆ  ನಿಂತು ಅವರ ಅಭಿವ್ಯಕ್ತಿಯನ್ನು ಕೊಂಡಾಡುತ್ತಾರೆ .

Sunday 2 December 2012

ವಚನ ಸಿಂಚನ ೫೬:ಸೂತಕ

ಹೊಲೆಯುಂಟೆ ಲಿಂಗವಿದ್ದೆಡೆಯಲ್ಲಿ ?
ಕುಲವುಂಟೆ ಜಂಗಮವಿದ್ದೆಡೆಯಲ್ಲಿ ?
ಎಂಜಲುಂಟೆ  ಪ್ರಸಾದವಿದ್ದೆಡೆಯಲ್ಲಿ ?
ಅಪವಿತ್ರದ ನುಡಿಯ ನುಡಿವ ಸೂತಕವೇ ಪಾತಕ !
ನಿಷ್ಕಳಂಕ ನಿಜೈಕ್ಯ ತ್ರಿವಿಧ ನಿರ್ಣಯ 
ಕೂಡಲಸಂಗಮದೇವಾ,ನಿಮ್ಮ ಶರಣರಿಗಲ್ಲದಿಲ್ಲ 
                                 -ಬಸವಣ್ಣ, 


ಈ ವಚನದಲ್ಲಿ ಬಸವಣ್ಣ ಸೂತಕ ಮಲೀನಗಳ ಬಗ್ಗೆ ವಿಚಾರ ಮಾಡುತ್ತಾರೆ.ಮೊದಲಿಗೆ ಲಿಂಗ ಇರುವ ಕಡೆ ಹೊಲೆ ಅಂದರೆ ಮಲೀನ ಇರಲು ಸಾಧ್ಯವೇ ಎಂದು ಪ್ರಶ್ನಿಸುತ್ತಾರೆ.ಯಾಕಂದರೆ,ಲಿಂಗ ಎಲ್ಲ ಅಸ್ಪ್ರುಶ್ಯತೆಯನ್ನು ತೊಲಗಿಸುವ ವಸ್ತು.ಇಲ್ಲಿ ಬಸವಣ್ಣ ಜನನ,ಮರಣ ಮತ್ತು ಮುಟ್ಟು  ಇವುಗಳೆಲ್ಲ ಸೂತಕವಲ್ಲ ಎಂದು ಹೇಳುತ್ತಾರೆ.ಈ ಎಲ್ಲ ಮಲೀನಗಳನ್ನು ಹೋಗಲಾಡಿಸುವ ಶಕ್ತಿ ಲಿಂಗಕ್ಕೆ ಇದೆ ಎಂದು ಹೇಳುತ್ತಾ,ಜಂಗಮ ಇರುವ ಕಡೆ ಜಾತಿ ವಿಷಯ ಇರಲು ಸಾಧ್ಯವೇ ಎಂದು ಮತ್ತೊಮ್ಮೆ ಪ್ರಶ್ನಿಸುತ್ತಾರೆ.ಜಂಗಮ ಅಂದರೆ ಎಲ್ಲ ಜಾತಿಯ ಸೊಗಡನ್ನು ಬಿಟ್ಟು ಸಂಚರಿಸುವವನು ಎಂದು.ಅಂತ ಜಂಗಮರ ನಡುವೆ ಜಾತಿ ವಿಷಯ ಇರಲು ಸಾಧ್ಯವಿಲ್ಲ.ಪ್ರಸಾದ ಇದ್ದ ಕಡೆ ಎಂಜಲು ಇರಲು ಸಾಧ್ಯವಿಲ್ಲ ಅಂದರೆ ಪ್ರಸಾದ ಎಂದಿಗೂ ಅಪವಿತ್ರ ಅಲ್ಲ ಎಂದು ಬಸವಣ್ಣ ಸ್ಪಷ್ಟ ಪಡಿಸುತ್ತಾರೆ.ತನ್ನ ಬಾಯಿಯ ಒಳಗಡೆ ಏನು ಹೋಗುತ್ತದೆ ಅನ್ನುವುದು ಮುಖ್ಯವಲ್ಲ,ಬಾಯಿಯಿಂದ ಎಂಥ ಮಾತು ಹೊರಡುತ್ತದೆ ಅನ್ನುವುದು ಮನುಷ್ಯನ ನಡತೆಯನ್ನು ತೋರಿಸುತ್ತದೆ.

ಇಲ್ಲಿ ಬಸವಣ್ಣ ಹೇಳುತ್ತಾನೆ,ಅಪವಿತ್ರದ ನುಡಿಯನ್ನು ನುಡಿಯುವುದೇ ಸೂತಕ ಎಂದು.ಮನುಷ್ಯ ಅಂತ ಕೆಟ್ಟ ನುಡಿಗಳಿಗೆ ಪಶ್ತಾತಾಪ ಪಡಬೇಕೆ ಹೊರತು ಅನ್ಯ ವಿಷಯಕ್ಕಲ್ಲ.ತನ್ನ ಒಳ್ಳೆಯ ನಡತೆಯೇ ದೇವರಲ್ಲಿ ಲೀನವಾಗುವುದಕ್ಕೆ ಸಾಧ್ಯ ಎಂದು ಕೂಡ ಹೇಳುತ್ತಾನೆ.ಈ ವಚನದಲ್ಲಿ ಅಷ್ತಾವರಣದ ಮೂರು ವಸ್ತುಗಳನ್ನು ಉಲ್ಲೇಖಿಸಲಾಗಿದೆ-ಲಿಂಗ,ಜಂಗಮ ಮತ್ತು ಪ್ರಸಾದ.

ಕೊನೆಯದಾಗಿ ಈ ವಚನದಲ್ಲಿ ಬಸವಣ್ಣ ಸ್ಪಷ್ಟ ಪಡಿಸುವುದು,ಮನುಷ್ಯನ ನಡತೆ ತನ್ನ ಕಾಯ ಮತ್ತು ಗುಣಗಳಿಂದ ಅಳೆಯಬಹುದು,ಬದಲಾಗಿ ತನ್ನ ಮೂಢ ನಂಬಿಕೆಗಳು ಕೆಲವು ಆಚರಣೆಗಳಿಂದಲ್ಲ  ಎಂದು ಹೇಳುತ್ತಾರೆ.