Sunday, 2 December 2012

ವಚನ ಸಿಂಚನ ೫೬:ಸೂತಕ

ಹೊಲೆಯುಂಟೆ ಲಿಂಗವಿದ್ದೆಡೆಯಲ್ಲಿ ?
ಕುಲವುಂಟೆ ಜಂಗಮವಿದ್ದೆಡೆಯಲ್ಲಿ ?
ಎಂಜಲುಂಟೆ  ಪ್ರಸಾದವಿದ್ದೆಡೆಯಲ್ಲಿ ?
ಅಪವಿತ್ರದ ನುಡಿಯ ನುಡಿವ ಸೂತಕವೇ ಪಾತಕ !
ನಿಷ್ಕಳಂಕ ನಿಜೈಕ್ಯ ತ್ರಿವಿಧ ನಿರ್ಣಯ 
ಕೂಡಲಸಂಗಮದೇವಾ,ನಿಮ್ಮ ಶರಣರಿಗಲ್ಲದಿಲ್ಲ 
                                 -ಬಸವಣ್ಣ, 


ಈ ವಚನದಲ್ಲಿ ಬಸವಣ್ಣ ಸೂತಕ ಮಲೀನಗಳ ಬಗ್ಗೆ ವಿಚಾರ ಮಾಡುತ್ತಾರೆ.ಮೊದಲಿಗೆ ಲಿಂಗ ಇರುವ ಕಡೆ ಹೊಲೆ ಅಂದರೆ ಮಲೀನ ಇರಲು ಸಾಧ್ಯವೇ ಎಂದು ಪ್ರಶ್ನಿಸುತ್ತಾರೆ.ಯಾಕಂದರೆ,ಲಿಂಗ ಎಲ್ಲ ಅಸ್ಪ್ರುಶ್ಯತೆಯನ್ನು ತೊಲಗಿಸುವ ವಸ್ತು.ಇಲ್ಲಿ ಬಸವಣ್ಣ ಜನನ,ಮರಣ ಮತ್ತು ಮುಟ್ಟು  ಇವುಗಳೆಲ್ಲ ಸೂತಕವಲ್ಲ ಎಂದು ಹೇಳುತ್ತಾರೆ.ಈ ಎಲ್ಲ ಮಲೀನಗಳನ್ನು ಹೋಗಲಾಡಿಸುವ ಶಕ್ತಿ ಲಿಂಗಕ್ಕೆ ಇದೆ ಎಂದು ಹೇಳುತ್ತಾ,ಜಂಗಮ ಇರುವ ಕಡೆ ಜಾತಿ ವಿಷಯ ಇರಲು ಸಾಧ್ಯವೇ ಎಂದು ಮತ್ತೊಮ್ಮೆ ಪ್ರಶ್ನಿಸುತ್ತಾರೆ.ಜಂಗಮ ಅಂದರೆ ಎಲ್ಲ ಜಾತಿಯ ಸೊಗಡನ್ನು ಬಿಟ್ಟು ಸಂಚರಿಸುವವನು ಎಂದು.ಅಂತ ಜಂಗಮರ ನಡುವೆ ಜಾತಿ ವಿಷಯ ಇರಲು ಸಾಧ್ಯವಿಲ್ಲ.ಪ್ರಸಾದ ಇದ್ದ ಕಡೆ ಎಂಜಲು ಇರಲು ಸಾಧ್ಯವಿಲ್ಲ ಅಂದರೆ ಪ್ರಸಾದ ಎಂದಿಗೂ ಅಪವಿತ್ರ ಅಲ್ಲ ಎಂದು ಬಸವಣ್ಣ ಸ್ಪಷ್ಟ ಪಡಿಸುತ್ತಾರೆ.ತನ್ನ ಬಾಯಿಯ ಒಳಗಡೆ ಏನು ಹೋಗುತ್ತದೆ ಅನ್ನುವುದು ಮುಖ್ಯವಲ್ಲ,ಬಾಯಿಯಿಂದ ಎಂಥ ಮಾತು ಹೊರಡುತ್ತದೆ ಅನ್ನುವುದು ಮನುಷ್ಯನ ನಡತೆಯನ್ನು ತೋರಿಸುತ್ತದೆ.

ಇಲ್ಲಿ ಬಸವಣ್ಣ ಹೇಳುತ್ತಾನೆ,ಅಪವಿತ್ರದ ನುಡಿಯನ್ನು ನುಡಿಯುವುದೇ ಸೂತಕ ಎಂದು.ಮನುಷ್ಯ ಅಂತ ಕೆಟ್ಟ ನುಡಿಗಳಿಗೆ ಪಶ್ತಾತಾಪ ಪಡಬೇಕೆ ಹೊರತು ಅನ್ಯ ವಿಷಯಕ್ಕಲ್ಲ.ತನ್ನ ಒಳ್ಳೆಯ ನಡತೆಯೇ ದೇವರಲ್ಲಿ ಲೀನವಾಗುವುದಕ್ಕೆ ಸಾಧ್ಯ ಎಂದು ಕೂಡ ಹೇಳುತ್ತಾನೆ.ಈ ವಚನದಲ್ಲಿ ಅಷ್ತಾವರಣದ ಮೂರು ವಸ್ತುಗಳನ್ನು ಉಲ್ಲೇಖಿಸಲಾಗಿದೆ-ಲಿಂಗ,ಜಂಗಮ ಮತ್ತು ಪ್ರಸಾದ.

ಕೊನೆಯದಾಗಿ ಈ ವಚನದಲ್ಲಿ ಬಸವಣ್ಣ ಸ್ಪಷ್ಟ ಪಡಿಸುವುದು,ಮನುಷ್ಯನ ನಡತೆ ತನ್ನ ಕಾಯ ಮತ್ತು ಗುಣಗಳಿಂದ ಅಳೆಯಬಹುದು,ಬದಲಾಗಿ ತನ್ನ ಮೂಢ ನಂಬಿಕೆಗಳು ಕೆಲವು ಆಚರಣೆಗಳಿಂದಲ್ಲ  ಎಂದು ಹೇಳುತ್ತಾರೆ.

1 comment:

  1. ಮನ ಶುದ್ಧಿ ಇರದೆ ಜಗ ಶುದ್ಧಿಯನು ಹಂಬಲಿಸಿದರೆ ಉಪಯೋಗವೇನು. ಬಸವಣ್ಣನವರ ಈ ವಚನ ಮನೋ ಶುದ್ಧಿಯ ಮಾಡುವ ಕಾಯಕ.

    ReplyDelete