Monday, 28 May 2012

ವಚನ-ಸಿಂಚನ ೩೯:ಲಿಂಗದಂತೆ ದೇಹವು

ತನುವಿನಲ್ಲಿ ನಿರ್ಮೋಹ,ಮನದಲ್ಲಿ ನಿರಹಂಕಾರ,
ಪ್ರಾಣದಲ್ಲಿ ನಿರ್ಭಯ,ಚಿತ್ತದಲ್ಲಿ ನಿರಪೇಕ್ಷೆ ,
ವಿಷಯಂಗಳಲ್ಲಿ ಉದಾಸೀನ,ಭಾವದಲ್ಲಿ ದಿಗಂಬರ ,
ಜ್ಞಾನದಲ್ಲಿ ಪರಮಾನಂದವೆಡೆಗೊಂಡ  ಬಳಿಕ 
 ಸೌರಾಷ್ಟ್ರ ಸೋಮೇಶ್ವರ ನೆಂಬ ಲಿಂಗವು ಬೇರಿಲ್ಲ ಕಾಣಿರೆ.
                                        -ಶರಣ ಆದಯ್ಯ

ಈ ವಚನದಲ್ಲಿ ಆದಯ್ಯನವರು ನಮ್ಮಲ್ಲೇ ಲಿಂಗವನ್ನು ಮತ್ತು ಲಿಂಗತ್ವವನ್ನು ಕಂಡುಕೊಳ್ಳುವ ಬಗೆಯನ್ನು ಹೇಳುತ್ತಾರೆ.ಅಲ್ಲದೆ ಹರಿಷಡ್ವರ್ಗಗಳನ್ನು ಗೆಲ್ಲುವ ಅನುಭವವನ್ನು ಹೇಳುತ್ತಾರೆ.
ದೇಹದ ಬಗ್ಗೆ ಮೋಹ ಬಿಟ್ಟು ಬಿಡು , ಮನಸ್ಸಿನಲ್ಲಿ ಆಹಂಕಾರ ತೊಲಗಿಸು ,ಪ್ರಾಣದ ಬಗ್ಗೆ ಭಯ ಬಿಟ್ಟು ಜೀವಿಸು,ಮನಸ್ಸಿನಲ್ಲಿ ಯಾವುದೇ ಭೋಗ ವಸ್ತುಗಳ ಬಗ್ಗೆ ಅಪೇಕ್ಷೆಯನ್ನು ಬಿಡು,
ಅನ್ಯ ವಿಷಯಗಳ ಬಗ್ಗೆ ಆಸಕ್ತಿ ಬೇಡ,ಅದೇ ತರಹ ಭಾವದಲ್ಲಿ ದಿಗಂಬರ ಅಂದರೆ ಭಾವನೆಗಳು ಮುಕ್ತವಾಗಿರಲಿ ಎಂದು ಹೇಳುತ್ತಾ ಈ ರೀತಿ ಇದ್ದರೆ ಜ್ಞಾನವನ್ನು ಸಂಪಾದಿಸಿಕೊಂಡು ಆನಂದವನ್ನು ಅನುಭವಿಸಬಹುದು.
ಅರಿವನ್ನು ಪಡೆಯಬಹುದು ಎಂದು ಸಾರುತ್ತಾ ಇಂಥ ಜ್ಞಾನಿಯು ಸೌರಾಷ್ಟ್ರ ಸೋಮೆಶ್ವರನೆಂಬ ಶಿವನ ಸ್ವರೂಪವಿದ್ದಂತೆ,ಅಂಥವರಲ್ಲಿ ಶಿವನನ್ನು ಕಾಣ ಬಹುದು ಎಂದು ಹೇಳುತ್ತಾರೆ.

(ಶರಣ ಆದಯ್ಯ:೧೨ನೆ ಶತಮಾನದ ಶಿವ ಶರಣರ ಸಮಕಾಲೀನ.ಸೌರಾಷ್ಟ್ರದವನಾದ ಈತ ವ್ಯಾಪಾರ ನಿಮಿತ್ತ ಕರ್ನಾಟಕದ ಲಕ್ಷ್ಮೇಶ್ವರಕ್ಕೆ ಬಂದು ಅಲ್ಲಿನ ಜೈನ ಮಹಿಳೆಯನ್ನು ಮೋಹಿಸಿ ಮದುವೆ ಆಗುತ್ತಾನೆ.ಜೈನರೊಡನೆ ಹೋರಾಡಿ ಸೌರಾಷ್ಟ್ರದ ಸೋಮೆಶ್ವರನನ್ನು ಪುಲಿಗೆರೆಯ ಸುರಹೊನ್ನೆ ಬಸದಿಯಲ್ಲಿ ಸ್ಥಾಪಿಸುವೆನೆಂದು ಆಣೆ ಮಾಡಿ ತನ್ನ ಧೃಡ ಭಕ್ತಿಯಿಂದ ಸ್ಥಾಪಿಸಿದ ಮಾಹ ಪುರುಷ.ಶಿವ ಧರ್ಮದ ಉದ್ಧಾರವೇ ಈತನ ಗುರಿಯಾಗಿತ್ತು.ಸೌರಾಷ್ಟ್ರ ಸೋಮನಾಥಾನ ಅಂಕಿತದಲ್ಲಿ ಅನೇಕ ವಚನಗಳನ್ನು ರಚಿಸಿದ್ದಾನೆ.)Monday, 21 May 2012

ವಚನ-ಸಿಂಚನ ೩೮:ಬಲ ಮತ್ತು ದುರ್ಬಲ

ಕರಿ ಘನ ಅಂಕುಶ ಕಿರಿದೆನ್ನಬಹುದೆ ಬಾರದಯ್ಯಾ,
ಗಿರಿ ಘನ ವಜ್ರ ಕಿರಿದೆನ್ನಬಹುದೆ ಬಾರದಯ್ಯ,
ತಮಂದ ಘನ ಜ್ಯೋತಿ ಕಿರಿದೆನ್ನಬಹುದೆ ಬಾರದಯ್ಯಾ,
ಮರಹು ಘನ ನಿಮ್ಮ ನೆನೆವ ಕಿರಿದೆನ್ನಬಹುದೆ ಬಾರದಯ್ಯ
ಕೂಡಲಸಂಗಮದೇವಾ |||
                                            -ಬಸವಣ್ಣ

ಇಲ್ಲಿ ಬಸವಣ್ಣನವರು ಬಲ ಮತ್ತು ದುರ್ಬಲ ಎಂದು ಭಾವಿಸಿರುವ ಕೆಲವು ವಸ್ತುಗಳ ಬಗ್ಗೆ ನಮಗೆ ಇರುವ ತಪ್ಪು ತಿಳುವಳಿಕೆಯನ್ನು ಕೆಲವು ನಿದರ್ಶನಗಳ ಮೂಲಕ ಹೇಳುತ್ತಾರೆ.ಮೊದಲನೆಯದು ದಿನ ನಿತ್ಯದ ಘಟನೆ,ಮತ್ತೊಂದು ಪೌರಾಣಿಕ ಹಿನ್ನೆಲೆ ಇಂದ ಮತ್ತು ಇನ್ನೊಂದು ಭೌತಿಕ ತತ್ವ ಉಳ್ಳ ನಿದರ್ಶನ.
ಆನೆ ಗಾತ್ರದಲ್ಲಿ ದೊಡ್ಡದು ಮತ್ತು ಬಲಶಾಲಿ ಕೂಡ,ಆದರೆ ಅಂತ ಆನೆಯನ್ನು ಅದರ ಮಾವುತ ಒಂದು ಅಂಕುಶ ದಿಂದ(ಸಣ್ಣ ಸಲಾಕೆ)ಅದನ್ನು ಹಿಡಿದಿಟ್ಟುಕೊಳ್ಳುತ್ತಾನೆ. ಅದೇ ರೀತಿ ಒಂದು ಪರ್ವತ ಕೂಡ ಬಹಳ ದೊಡ್ಡದಾಗಿ ಕಾಣುತ್ತದೆ,ಪುರಾಣದ ಪ್ರಕಾರ ಇಂದ್ರ ತನ್ನ ವಜ್ರಾಯುಧದಿಂದ ಪರ್ವತವನ್ನು ನಾಶ ಮಾಡುತ್ತಾನೆ.ಇನ್ನು ಕತ್ತಲು  ಬಹಳ ಘೋರವಾಗಿ ಕಂಡರೂ ಒಂದು ಸಣ್ಣ  ಬೆಳಕಿನ ಕಿಡಿ ಅದನ್ನು ಮುಚ್ಚಬಲ್ಲದು.ಆದ್ದರಿಂದ ವಸ್ತುವಿನ ಗಾತ್ರದ ಮೂಲಕ ಅದರ ದುರ್ಬಲತೆಯನ್ನು ಅಳೆಯಬಾರದು ಎಂದು ಹೇಳುತ್ತಾ ಮನುಷ್ಯನ ಸಹಜ ಗುಣವಾದ ಮರೆಯುವಿಕೆ ಘನವಲ್ಲ,ಬದಲಾಗಿ ದೇವರನ್ನು ಕಂಡುಕೊಳ್ಳಲು ಶಿವನ ಸ್ವರೂಪವಾದ ಕೂಡಲಸಂಗಮದೇವನನ್ನು ನೆನೆಯುವುದು ಮತ್ತು ಧ್ಯಾನಿಸುವುದೇ  ಘನ ಎಂದು ಹೇಳುತ್ತಾರೆ.

Monday, 14 May 2012

ವಚನ ಸಿಂಚನ ೩೭:ದೂಷಣೆ

ಗೂಗೆ ಕಣ್ಣ ಕಾಣಲರಿಯದೆ ರವಿಯ ಬಯ್ವುದು,
ಕಾಗೆ ಕಣ್ಣ ಕಾಣಲರಿಯದೆ ಶಶಿಯ ಬಯ್ವುದು,
ಕುರುಡ ಕಣ್ಣ ಕಾಣಲರಿಯದೆ ಕನ್ನಡಿಯ ಬಯ್ವನು,
ಇವರ ಮಾತೆಲ್ಲವೂ ಸಹಜವೇ,
ನರಕ ಸಂಸಾರದಲ್ಲಿ ಹೊಡಕುಗೊಳ್ಳುತ್ತಾ,
ಶಿವನಿಲ್ಲ,ಮುಕ್ತಿಯಿಲ್ಲ,ಹುಸಿಯೆಂದರೆ,
ನರಕದಲ್ಲಿಕ್ಕದೆ ಬಿಡುವನೇ ಚನ್ನಮಲ್ಲಿಕಾರ್ಜುನ !!!
                        -ಅಕ್ಕಮಹಾದೇವಿ

ಈ ವಚನದಲ್ಲಿ ಅಕ್ಕಮಹಾದೇವಿಯು ಮನುಷ್ಯ ತನ್ನ ಅಸಹಾಯಕತೆ ಮತ್ತು ತನ್ನ ಸಂಕಟದಲ್ಲಿ ಬೇರೆಯವರನ್ನು ಹೇಗೆ ದೂಷಿಸುತ್ತಾನೆ ಎಂದು ಕೆಲವು ನಿದರ್ಶನಗಳ ಮೂಲಕ ಹೇಳುತ್ತಾರೆ.ಗೂಬೆಗೆ ಹಗಲಿನಲ್ಲಿ ಕಣ್ಣು ಕಾಣದ್ದರಿಂದ ಸೂರ್ಯನನ್ನು ಬೈಯ್ಯುತ್ತದೆ ,ಅದೇ ರೀತಿ ಕಾಗೆಯು ರಾತ್ರಿ ಸಮಯದಲ್ಲಿ ಚಂದ್ರನನ್ನು ಬೈಯ್ಯುತ್ತದೆ ಮತ್ತು ಕುರುಡ ತನ್ನ ಪ್ರತಿಬಿಂಬ ಕನ್ನಡಿಯಲ್ಲಿ ಕಾಣದ್ದಕ್ಕೆ ಕನ್ನಡಿಯನ್ನೇ ಬೈಯ್ಯುತ್ತಾನೆ.ಇದು ಪ್ರತಿಯೊಬ್ಬ ಅಸಹಾಯಕನ ಸಹಜ ಮಾತು ಎಂದು ಹೇಳುತ್ತಾ ಇದು ಸಂಸಾರದಲ್ಲಿ ನರಕವು ಹೊರಳಾಡುವಂತೆ ದೂಷಿಸುವುದು ಕೂಡ ಎಂದು ಹೇಳುತ್ತಾರೆ.

ಇಲ್ಲಿ ಶಿವನಿಲ್ಲ ಅಂದರೆ ತನಗಿರುವ ಶಕ್ತಿಯ ಬಗ್ಗೆ ನಂಬಿಕೆ ಮತ್ತು ಆತ್ಮ ವಿಶ್ವಾಸ ಇಲ್ಲದೆ ಬೇರೆಯದರ ಬಗ್ಗೆ ಅಪೇಕ್ಷಿಸುವ ಪರಿ ಮತ್ತು ಮುಕ್ತಿಯಿಲ್ಲ ಅಂದರೆ ಇಂಥ ಕಷ್ಟಗಳು ತನಗೆ ಮಾತ್ರ ಇರುವುದು ಎಂದು ಭಾವಿಸಿ ಸದಾ ಇನ್ನೊಬ್ಬರನ್ನು ದೂರುತ್ತಿರುವುದು.
ತನಗಿರುವ ಅಗಾಧ ಶಕ್ತಿಯನ್ನು ಉಪಯೋಗಿಸಿಕೊಳ್ಳದೆ ಅನ್ಯರನ್ನು ದೂಷಿಸಿದರೆ ಅಂಥವರನ್ನು ಚನ್ನಮಲ್ಲಿಕಾರ್ಜುನ ನರಕಕ್ಕೆ ತಳ್ಳುತ್ತಾನೆ ಅಂದರೆ ಅವರು ಯಾವಾಗಲು ಕಷ್ಟವನ್ನು ಅನುಭವಿಸುತ್ತಾರೆ ಎಂದು ಹೇಳುತ್ತಾ ತಮಗೆ ಲಭ್ಯವಿರುವ ಶಕ್ತಿಯನ್ನು ಸದ್ವಿನಿಯೋಗ ಮಾಡಿಕೊಂಡು ಒಳ್ಳೆ ರೀತಿಯಲ್ಲಿ ನಡೆದರೆ ಶಿವನನ್ನು ತಲುಪಬಹುದು ಅಂದರೆ ಮುಕ್ತಿಯ ಕಡೆ ನಡೆಯಬಹುದು ಎಂದು ಹೇಳುತ್ತಾರೆ.

Monday, 7 May 2012

ವಚನ ಸಿಂಚನ ೩೬:ಶಿವಾನುಭಾವ

ಎನ್ನ ಘ್ರಾಣದಲ್ಲಿ ಆಚಾರಲಿಂಗ,
ಎನ್ನ ಜಿಹ್ವೆಯಲ್ಲಿ ಗುರುಲಿಂಗ,
ಎನ್ನ ನೇತ್ರದಲ್ಲಿ ಶಿವಲಿಂಗ,
ಎನ್ನ ತ್ವಕ್ಕಿನಲ್ಲಿ ಜಂಗಮಲಿಂಗ,
ಎನ್ನ ಶ್ರೋತ್ರದಲ್ಲಿ ಪ್ರಸಾದಲಿಂಗ,
ಎನ್ನ ಹೃದಯದಲ್ಲಿ ಮಹಾಲಿಂಗ,
ಎನ್ನ ಸ್ಥೂಲದೇಹದಲ್ಲಿ ಇಷ್ಟಲಿಂಗ,
ಎನ್ನ ಸೂಕ್ಷ್ಮದೇಹದಲ್ಲಿ ಪ್ರಾಣಲಿಂಗ,
ಎನ್ನ ಕಾರಣದೇಹದಲ್ಲಿ ಭಾವಲಿಂಗ,
ಕಪಿಲಸಿದ್ಧಮಲ್ಲಿಕಾರ್ಜುನನೆಂಬ ಚೆನ್ನಬಸವಣ್ಣ !!!
                      -ಸಿದ್ಧರಾಮೇಶ್ವರ

ಈ ವಚನದಲ್ಲಿ ಸಿದ್ದರಾಮಣ್ಣ ಶಿವಾನುಭಾವವನ್ನು ತಮ್ಮ ದೇಹದ ಮೂಲಕ  ಅನುಭವಿಸುವ ಬಗ್ಗೆ ವಿಶ್ಲೇಷಿಸುತ್ತಾರೆ.ಇಲ್ಲಿ ಭಕ್ತನೊಬ್ಬ  ತನ್ನ ಎಡಗೈಯಲ್ಲಿ ಇಷ್ಟ ಲಿಂಗವನ್ನು ಇಟ್ಟು ಪೂಜೆಗೆ  ಕೂರುವ ಭಂಗಿಯು ಲಿಂಗದ ಪೀಠದಂತೆಯೇ ಇರುತ್ತದೆ,ಆದ್ದರಿಂದ ಶಿವ ಭಕ್ತ ಕೂಡ ಶಿವನ ಸ್ವರೂಪವೆ ಆಗುತ್ತಾನೆ ಎಂದು ಈ ಮೂಲಕ ತಿಳಿಸುತ್ತಾ ಮನುಷ್ಯನದೇಹ ಕೂಡ ಲಿಂಗದಂತೆ ಎಂದು ಈ ವಚನದಲ್ಲಿ ಹೇಳುತ್ತಾರೆ.

ತನ್ನ ಪಂಚೇದ್ರಿಯಗಳಲ್ಲಿ ಗುರು,ಲಿಂಗ ,ಜಂಗಮ,ಪ್ರಸಾದ ಮತ್ತು ಭಕ್ತಿಯನ್ನು ಕಾಣಬಹುದು ಮತ್ತು ತನ್ನ ಭೌತಿಕ ಶರೀರವು ಇಷ್ಟಲಿಂಗದಂತೆ ಎಂದು ಹೇಳುತ್ತಾ,ತನ್ನ ಸೂಕ್ಷ್ಮ ದೇಹ ಅಂದರೆ ಆತ್ಮದಲ್ಲಿ ಪ್ರಾಣಲಿಂಗವಿದೆ ಮತ್ತು ಅವರ ಕಾರಣದೇಹ ಅಂದರೆ ಬುದ್ಧಿಯಮತ್ತು ಅನುಭವದಲ್ಲಿ ಭಾವಲಿಂಗವಿರುತ್ತದೆ ಎನ್ನುತ್ತಾರೆ..