Monday 28 May 2012

ವಚನ-ಸಿಂಚನ ೩೯:ಲಿಂಗದಂತೆ ದೇಹವು

ತನುವಿನಲ್ಲಿ ನಿರ್ಮೋಹ,ಮನದಲ್ಲಿ ನಿರಹಂಕಾರ,
ಪ್ರಾಣದಲ್ಲಿ ನಿರ್ಭಯ,ಚಿತ್ತದಲ್ಲಿ ನಿರಪೇಕ್ಷೆ ,
ವಿಷಯಂಗಳಲ್ಲಿ ಉದಾಸೀನ,ಭಾವದಲ್ಲಿ ದಿಗಂಬರ ,
ಜ್ಞಾನದಲ್ಲಿ ಪರಮಾನಂದವೆಡೆಗೊಂಡ  ಬಳಿಕ 
 ಸೌರಾಷ್ಟ್ರ ಸೋಮೇಶ್ವರ ನೆಂಬ ಲಿಂಗವು ಬೇರಿಲ್ಲ ಕಾಣಿರೆ.
                                        -ಶರಣ ಆದಯ್ಯ

ಈ ವಚನದಲ್ಲಿ ಆದಯ್ಯನವರು ನಮ್ಮಲ್ಲೇ ಲಿಂಗವನ್ನು ಮತ್ತು ಲಿಂಗತ್ವವನ್ನು ಕಂಡುಕೊಳ್ಳುವ ಬಗೆಯನ್ನು ಹೇಳುತ್ತಾರೆ.ಅಲ್ಲದೆ ಹರಿಷಡ್ವರ್ಗಗಳನ್ನು ಗೆಲ್ಲುವ ಅನುಭವವನ್ನು ಹೇಳುತ್ತಾರೆ.
ದೇಹದ ಬಗ್ಗೆ ಮೋಹ ಬಿಟ್ಟು ಬಿಡು , ಮನಸ್ಸಿನಲ್ಲಿ ಆಹಂಕಾರ ತೊಲಗಿಸು ,ಪ್ರಾಣದ ಬಗ್ಗೆ ಭಯ ಬಿಟ್ಟು ಜೀವಿಸು,ಮನಸ್ಸಿನಲ್ಲಿ ಯಾವುದೇ ಭೋಗ ವಸ್ತುಗಳ ಬಗ್ಗೆ ಅಪೇಕ್ಷೆಯನ್ನು ಬಿಡು,
ಅನ್ಯ ವಿಷಯಗಳ ಬಗ್ಗೆ ಆಸಕ್ತಿ ಬೇಡ,ಅದೇ ತರಹ ಭಾವದಲ್ಲಿ ದಿಗಂಬರ ಅಂದರೆ ಭಾವನೆಗಳು ಮುಕ್ತವಾಗಿರಲಿ ಎಂದು ಹೇಳುತ್ತಾ ಈ ರೀತಿ ಇದ್ದರೆ ಜ್ಞಾನವನ್ನು ಸಂಪಾದಿಸಿಕೊಂಡು ಆನಂದವನ್ನು ಅನುಭವಿಸಬಹುದು.
ಅರಿವನ್ನು ಪಡೆಯಬಹುದು ಎಂದು ಸಾರುತ್ತಾ ಇಂಥ ಜ್ಞಾನಿಯು ಸೌರಾಷ್ಟ್ರ ಸೋಮೆಶ್ವರನೆಂಬ ಶಿವನ ಸ್ವರೂಪವಿದ್ದಂತೆ,ಅಂಥವರಲ್ಲಿ ಶಿವನನ್ನು ಕಾಣ ಬಹುದು ಎಂದು ಹೇಳುತ್ತಾರೆ.

(ಶರಣ ಆದಯ್ಯ:೧೨ನೆ ಶತಮಾನದ ಶಿವ ಶರಣರ ಸಮಕಾಲೀನ.ಸೌರಾಷ್ಟ್ರದವನಾದ ಈತ ವ್ಯಾಪಾರ ನಿಮಿತ್ತ ಕರ್ನಾಟಕದ ಲಕ್ಷ್ಮೇಶ್ವರಕ್ಕೆ ಬಂದು ಅಲ್ಲಿನ ಜೈನ ಮಹಿಳೆಯನ್ನು ಮೋಹಿಸಿ ಮದುವೆ ಆಗುತ್ತಾನೆ.ಜೈನರೊಡನೆ ಹೋರಾಡಿ ಸೌರಾಷ್ಟ್ರದ ಸೋಮೆಶ್ವರನನ್ನು ಪುಲಿಗೆರೆಯ ಸುರಹೊನ್ನೆ ಬಸದಿಯಲ್ಲಿ ಸ್ಥಾಪಿಸುವೆನೆಂದು ಆಣೆ ಮಾಡಿ ತನ್ನ ಧೃಡ ಭಕ್ತಿಯಿಂದ ಸ್ಥಾಪಿಸಿದ ಮಾಹ ಪುರುಷ.ಶಿವ ಧರ್ಮದ ಉದ್ಧಾರವೇ ಈತನ ಗುರಿಯಾಗಿತ್ತು.ಸೌರಾಷ್ಟ್ರ ಸೋಮನಾಥಾನ ಅಂಕಿತದಲ್ಲಿ ಅನೇಕ ವಚನಗಳನ್ನು ರಚಿಸಿದ್ದಾನೆ.)



No comments:

Post a Comment