Monday 21 May 2012

ವಚನ-ಸಿಂಚನ ೩೮:ಬಲ ಮತ್ತು ದುರ್ಬಲ

ಕರಿ ಘನ ಅಂಕುಶ ಕಿರಿದೆನ್ನಬಹುದೆ ಬಾರದಯ್ಯಾ,
ಗಿರಿ ಘನ ವಜ್ರ ಕಿರಿದೆನ್ನಬಹುದೆ ಬಾರದಯ್ಯ,
ತಮಂದ ಘನ ಜ್ಯೋತಿ ಕಿರಿದೆನ್ನಬಹುದೆ ಬಾರದಯ್ಯಾ,
ಮರಹು ಘನ ನಿಮ್ಮ ನೆನೆವ ಕಿರಿದೆನ್ನಬಹುದೆ ಬಾರದಯ್ಯ
ಕೂಡಲಸಂಗಮದೇವಾ |||
                                            -ಬಸವಣ್ಣ

ಇಲ್ಲಿ ಬಸವಣ್ಣನವರು ಬಲ ಮತ್ತು ದುರ್ಬಲ ಎಂದು ಭಾವಿಸಿರುವ ಕೆಲವು ವಸ್ತುಗಳ ಬಗ್ಗೆ ನಮಗೆ ಇರುವ ತಪ್ಪು ತಿಳುವಳಿಕೆಯನ್ನು ಕೆಲವು ನಿದರ್ಶನಗಳ ಮೂಲಕ ಹೇಳುತ್ತಾರೆ.ಮೊದಲನೆಯದು ದಿನ ನಿತ್ಯದ ಘಟನೆ,ಮತ್ತೊಂದು ಪೌರಾಣಿಕ ಹಿನ್ನೆಲೆ ಇಂದ ಮತ್ತು ಇನ್ನೊಂದು ಭೌತಿಕ ತತ್ವ ಉಳ್ಳ ನಿದರ್ಶನ.
ಆನೆ ಗಾತ್ರದಲ್ಲಿ ದೊಡ್ಡದು ಮತ್ತು ಬಲಶಾಲಿ ಕೂಡ,ಆದರೆ ಅಂತ ಆನೆಯನ್ನು ಅದರ ಮಾವುತ ಒಂದು ಅಂಕುಶ ದಿಂದ(ಸಣ್ಣ ಸಲಾಕೆ)ಅದನ್ನು ಹಿಡಿದಿಟ್ಟುಕೊಳ್ಳುತ್ತಾನೆ. ಅದೇ ರೀತಿ ಒಂದು ಪರ್ವತ ಕೂಡ ಬಹಳ ದೊಡ್ಡದಾಗಿ ಕಾಣುತ್ತದೆ,ಪುರಾಣದ ಪ್ರಕಾರ ಇಂದ್ರ ತನ್ನ ವಜ್ರಾಯುಧದಿಂದ ಪರ್ವತವನ್ನು ನಾಶ ಮಾಡುತ್ತಾನೆ.ಇನ್ನು ಕತ್ತಲು  ಬಹಳ ಘೋರವಾಗಿ ಕಂಡರೂ ಒಂದು ಸಣ್ಣ  ಬೆಳಕಿನ ಕಿಡಿ ಅದನ್ನು ಮುಚ್ಚಬಲ್ಲದು.ಆದ್ದರಿಂದ ವಸ್ತುವಿನ ಗಾತ್ರದ ಮೂಲಕ ಅದರ ದುರ್ಬಲತೆಯನ್ನು ಅಳೆಯಬಾರದು ಎಂದು ಹೇಳುತ್ತಾ ಮನುಷ್ಯನ ಸಹಜ ಗುಣವಾದ ಮರೆಯುವಿಕೆ ಘನವಲ್ಲ,ಬದಲಾಗಿ ದೇವರನ್ನು ಕಂಡುಕೊಳ್ಳಲು ಶಿವನ ಸ್ವರೂಪವಾದ ಕೂಡಲಸಂಗಮದೇವನನ್ನು ನೆನೆಯುವುದು ಮತ್ತು ಧ್ಯಾನಿಸುವುದೇ  ಘನ ಎಂದು ಹೇಳುತ್ತಾರೆ.

No comments:

Post a Comment