Monday 20 August 2012

ವಚನ ಸಿಂಚನ ೪೮:ಲಿಂಗವಿದ್ದವರ ಮನೆ ಕೈಲಾಸ

ಬಂದು ಬಲ್ಲಹ ಬಿಡಲು ಹೊಲಗೇರಿ ಎಂಬ ಹೆಸರೊಲವೇ,ಅಯ್ಯಾ?
ಲಿಂಗವಿದ್ದವರ ಮನೆ ಕೈಲಾಸವೆಂದು ನಂಬಬೇಕು.
          ಚಂಡಾಲವಾಟಿಕಾಯಾಂ ವಾ ಶಿವಭಕ್ತಶ್ಚಿತೋ ಯದಿ |
         ತತ್ ಶಿವಲೋಕಸ್ಯ ತದ್ ಗೃಹಂ ಶಿವಮಂದಿರಂ ||

ಎಂಬುದಾಗಿ
ಲೋಕದ ಡಂಭಕರ ಮಾತು ಬೇಡ,
ಕೂಡಲಸಂಗಮದೇವನಿದ್ದುದೆ ಕೈಲಾಸ...
                                    -ಬಸವಣ್ಣ

ಬಸವಣ್ಣನ ಈ ವಚನ ಕೂಡ,ಜಾತಿಯತೆಯ ಅಂಧಕಾರವನ್ನು ಹೋಗಲಾಡಿಸುವ ಉದ್ದೇಶ ಹೊಂದಿದೆ.ಬಸವಣ್ಣ ಹೇಳುತ್ತಾನೆ,ಒಬ್ಬ ಅನುಭಾವಿ ಅಥವಾ ಲಿಂಗ ಧರಿಸಿದ ವ್ಯಕ್ತಿ ಅಸ್ಪೃಶ್ಯರ ಓಣಿಯಲ್ಲಿ ಬಂದು ನೆಲೆಸಿದರೆ,ಅದು ಹೊಲಗೇರಿ ಆಗುವುದಿಲ್ಲ ,ಬದಲಾಗಿ ಅಲ್ಲಿ ಶಿವ ಭಕ್ತನ ಮನೆ ಅಂದರೆ ಕೈಲಾಸ ಇರುವ ಕಾರಣ ಆ ಹೊಲಗೇರಿ ಕೂಡ ಕೈಲಾಸದಂತೆ ಎಂದು. ಆದ್ದರಿಂದ ಶಿವಭಕ್ತ ನೆಲೆಸಿರುವ ಊರನ್ನು ಹೊಲಗೇರಿ ಎಂದು ಹೇಳಲು ಸಾಧ್ಯವೇ ಎಂದು ದೇವರಲ್ಲಿ ಪ್ರಶ್ನಿಸುತ್ತಾರೆ.ಇಷ್ಟಲಿಂಗವು ದೇವರ ಸ್ವರೂಪವಾದ್ದರಿಂದ,ಬಸವನ ಪ್ರಕಾರ ದೇವರ ಅಸ್ತಿತ್ವ ಆ ಹೊಲಗೇರಿಯಲ್ಲಿ ಕೂಡ ಇರುತ್ತದೆ,ಅಂದರೆ ಅಲ್ಲಿ ಸಮಾನತೆ ಇದೆ ಎಂದು ಹೇಳಬಹುದು.

ಈ ವಚನದಲ್ಲಿ ಇನ್ನೊಂದು ಗಮನಿಸಬೇಕಾದ ಅಂಶ ಅಂದರೆ,ಬಸವಣ್ಣ ಸಂಸ್ಕೃತವನ್ನು ಬಳಸಿರುವುದು.ಕ್ರಾಂತಿಕಾರಿ ಬಸವಣ್ಣ,ಜನ ಸಾಮಾನ್ಯರನ್ನು ತಲುಪದ ಸಂಸ್ಕೃತವನ್ನು ಬಳಸದೆ,ಎಲ್ಲರಿಗೂ ಅರ್ಥವಾಗುವ ಸಲುವಾಗಿ ಸರಳ ಭಾಷೆಯನ್ನೂ ಬಳಸಿದ್ದು.ಆದರೆ ಕೆಲವು ವಚನದಲ್ಲಿ,ಆ ವಚನದ ಅರ್ಥವನ್ನು ಇನ್ನಷ್ಟು ಪುಷ್ಟಿ ಗೊಳಿಸಲು ಕೆಲವು ಕಡೆ ಸಂಸ್ಕೃತ ಬಳಸಿದ್ದು ಉಂಟು.ಅಲ್ಲದೆ ಇದು ಬಸವಣ್ಣನ ಸಂಸ್ಕೃತ ಪಾಂಡಿತ್ಯವನ್ನು ಕೂಡ ಎತ್ತಿ ತೋರಿಸುತ್ತದೆ.ಸಂಸ್ಕೃತ ತಿಳಿದಿದ್ದರೂ,ಸರಳವಾಗಿ ಜನರಿಗೆ ಅರ್ಥವಾಗುವಂತೆ ವಚನಗಳನ್ನು ರಚಿಸಿದ್ದು,ಬಸವಣ್ಣನಿಗೆ ಜನ ಸಾಮಾನ್ಯರ ಬಗ್ಗೆ ಇದ್ದ ಕಾಳಜಿ ಅರ್ಥವಾಗುತ್ತದೆ.ಈ ವಚನದಲ್ಲಿ ಸಂಸ್ಕೃತ ಪದ ಕೂಡ,ಅಸ್ಪೃಶ್ಯರ ಕೇರಿ ಕೂಡ ಶಿವ ಭಕ್ತನಿದ್ದರೆ ಅದು ಕೈಲಾಸದಂತೆ ಮತ್ತು ಆ ಅಸ್ಪ್ರುಶ್ಯನ ಮನೆ ಕೂಡ ದೇವಾಲಯ(ಶಿವ ಮಂದಿರ) ಆಗುತ್ತದೆ ಎಂದು ಸಾರುತ್ತದೆ.

ವಚನದ ಕೊನೆಯಲ್ಲಿ ಲೋಕದ ಡಂಭಕರ ಮಾತಿಗೆ ಬೆಲೆ ಕೊಡುವುದು ಸಾಲದ ಪ್ರಾಪ್ತಿ ಎಂದು ಹೇಳುತ್ತಾ,ಮತ್ತೆ ಎಲ್ಲೆಲ್ಲಿ ಲಿಂಗ ಇದೆಯೋ,ಅದು ಕೈಲಾಸದಂತೆ ಎಂದು ಹೇಳುತ್ತಾ,ಇಷ್ಟ ಲಿಂಗದ ಇದ್ದಾರೆ ಆ ಕೀಳು ಜಾತಿ ಎಂದು ಭಾವಿಸುವ ವ್ಯಕ್ತಿ ಕೂಡ ಮೇರು ವ್ಯಕ್ತಿ ಆಗುತ್ತಾನೆ ಎಂದು ಹೇಳುತ್ತಾರೆ.

Monday 13 August 2012

ವಚನ ಸಿಂಚನ ೪೭:ಒಲುಮೆ

ಒಲುಮೆ  ಒಚ್ಚತವಾದವರು ಕುಲಛಲವನರಸುವರೇ ?
ಮರುಳಗೊಂಡವರು ಲಜ್ಜೆ ನಾಚಿಕೆಯ ಬಲ್ಲರೇ ?
ಚನ್ನಮಲ್ಲಿಕಾರ್ಜುನ ದೇವಗೊಲಿದವರು
ಲೋಕಾಭಿಮಾನವ ಬಲ್ಲರೇ ?
                              -ಅಕ್ಕಮಹಾದೇವಿ

ಶಿವನ ಸ್ವರೂಪವಾದ ಚನ್ನಮಲ್ಲಿಕಾರ್ಜುನನನ್ನೇ ತನ್ನ ಗಂಡನೆಂದು ಭಾವಿಸಿರುವ ಅಕ್ಕ ಮಹಾದೇವಿಯು ತನ್ನ ಸಾಮಾಜಿಕ ಮತ್ತು ಆಧ್ಯಾತ್ಮಿಕ ಅನುಭಾವ ಮತ್ತು ತನ್ನ ಪ್ರೀತಿಯ ಭಕ್ತಿಯಿಂದ ದೇವರೆಡೆಗೆ ಸೆಳೆದು ಬಿಟ್ಟಿದ್ದಾಳೆ.ಅವಳ ವಚನದಲ್ಲಿ ದೇವರ ಮೇಲೆ(ತನ್ನ ಗಂಡನ ಮೇಲೆ) ಮೋಹವು ಭಕ್ತಿಯ ರೂಪದಲ್ಲಿ ಇರುವುದನ್ನು ಕಾಣಬಹುದು.ಈ ವಚನದಲ್ಲಿ ಜಾತಿ ಪದ್ಧತಿಯನ್ನು ಖಂಡಿಸುತ್ತಾ,ದೇವರ ಪ್ರೀತಿಯನ್ನು ಪಡೆದ ಎಲ್ಲ ಭಕ್ತರು ಒಂದೇ ಅಲ್ಲದೆ ಅವರಲ್ಲಿ ಮತ್ತೆ ಮೇಲು,ಕೀಳು ಎಂದು ವಿಂಗಡಿಸುವುದು ಸರಿಯೇ ಎಂದು ಪ್ರಶ್ನಿಸುತ್ತಾಳೆ.ಈ ವಚನದಲ್ಲಿ ಕುಲ ಎಂಬ ಪದ ಬಳಸಿರುವುದು,ಜಾತಿ,ಲಿಂಗ ಮತ್ತು ಸಮಾಜದ ಇನ್ನಿತರ ವಿಂಗಡಣೆಗಳನ್ನು ಅರ್ಥೈಸಲು.ಅಂದರೆ ಎಲ್ಲ ಜಾತಿ,ಲಿಂಗ ಮತ್ತು ಮತದ ಭಕ್ತರು ಒಂದೇ ಸಮಾನ ಎಂದು ಹೇಳುತ್ತಾಳೆ.
ದೇವರ ಪ್ರೀತಿ ಯಾವ ರೀತಿ ಪರಿಣಾಮ ಬೀರುತ್ತದೋ ಅದೇ ರೀತಿ ಮರುಳಗೊಂಡವರಲ್ಲಿ ಕೂಡ ಲಜ್ಜೆ  ಮತ್ತು ನಾಚಿಕೆಯ ಬಗ್ಗೆ ಯಾವುದೇ ಅಭಿಪ್ರಾಯ ಅಥವಾ ಅಂಜಿಕೆ ಇರುವುದಿಲ್ಲ ಎನ್ನುತ್ತಾಳೆ.ಮುಂದುವರೆಯುತ್ತಾ,ದೇವರಿಗೆ ಒಲಿದವನು ಲೌಕಿಕ ಬಂಧನದಿಂದ ಬಿಡುಗಡೆ ಹೊಂದಿರುತ್ತಾನೆ ಮತ್ತು ಅವನು ಲೋಕದ ಜಂಜಾಟದಿಂದ ಮುಕ್ತಿ ಪಡೆದಿರುತ್ತಾನೆ ಎಂದು ಹೇಳುತ್ತಾಳೆ.
ಒಟ್ಟಾರೆ ಈ ವಚನದಲ್ಲಿ ಕೆಲವು ಸಾಮಾಜಿಕ ಚಿಂತನೆಗಳು ಆಧ್ಯಾತ್ಮಿಕ ನೆಲೆಯಲ್ಲಿ ಕಂಡು ಕೊಳ್ಳುತ್ತದೆ.ದೇವರ ಪ್ರೀತಿಯಲ್ಲಿ ಒಂದಾದ ಭಕ್ತಿಯ ಪರಿ ಇಂದ ಎಲ್ಲ ಭಕ್ತನು ಸಮಾನನಾಗುತ್ತಾನೆ,ಯಾವುದೇ ಜಾತಿಯ ತಡೆ ಇಲ್ಲದೆ ಎನ್ನುವುದು ಇದರ ಸಾರಾಂಶ.