Monday, 13 August 2012

ವಚನ ಸಿಂಚನ ೪೭:ಒಲುಮೆ

ಒಲುಮೆ  ಒಚ್ಚತವಾದವರು ಕುಲಛಲವನರಸುವರೇ ?
ಮರುಳಗೊಂಡವರು ಲಜ್ಜೆ ನಾಚಿಕೆಯ ಬಲ್ಲರೇ ?
ಚನ್ನಮಲ್ಲಿಕಾರ್ಜುನ ದೇವಗೊಲಿದವರು
ಲೋಕಾಭಿಮಾನವ ಬಲ್ಲರೇ ?
                              -ಅಕ್ಕಮಹಾದೇವಿ

ಶಿವನ ಸ್ವರೂಪವಾದ ಚನ್ನಮಲ್ಲಿಕಾರ್ಜುನನನ್ನೇ ತನ್ನ ಗಂಡನೆಂದು ಭಾವಿಸಿರುವ ಅಕ್ಕ ಮಹಾದೇವಿಯು ತನ್ನ ಸಾಮಾಜಿಕ ಮತ್ತು ಆಧ್ಯಾತ್ಮಿಕ ಅನುಭಾವ ಮತ್ತು ತನ್ನ ಪ್ರೀತಿಯ ಭಕ್ತಿಯಿಂದ ದೇವರೆಡೆಗೆ ಸೆಳೆದು ಬಿಟ್ಟಿದ್ದಾಳೆ.ಅವಳ ವಚನದಲ್ಲಿ ದೇವರ ಮೇಲೆ(ತನ್ನ ಗಂಡನ ಮೇಲೆ) ಮೋಹವು ಭಕ್ತಿಯ ರೂಪದಲ್ಲಿ ಇರುವುದನ್ನು ಕಾಣಬಹುದು.ಈ ವಚನದಲ್ಲಿ ಜಾತಿ ಪದ್ಧತಿಯನ್ನು ಖಂಡಿಸುತ್ತಾ,ದೇವರ ಪ್ರೀತಿಯನ್ನು ಪಡೆದ ಎಲ್ಲ ಭಕ್ತರು ಒಂದೇ ಅಲ್ಲದೆ ಅವರಲ್ಲಿ ಮತ್ತೆ ಮೇಲು,ಕೀಳು ಎಂದು ವಿಂಗಡಿಸುವುದು ಸರಿಯೇ ಎಂದು ಪ್ರಶ್ನಿಸುತ್ತಾಳೆ.ಈ ವಚನದಲ್ಲಿ ಕುಲ ಎಂಬ ಪದ ಬಳಸಿರುವುದು,ಜಾತಿ,ಲಿಂಗ ಮತ್ತು ಸಮಾಜದ ಇನ್ನಿತರ ವಿಂಗಡಣೆಗಳನ್ನು ಅರ್ಥೈಸಲು.ಅಂದರೆ ಎಲ್ಲ ಜಾತಿ,ಲಿಂಗ ಮತ್ತು ಮತದ ಭಕ್ತರು ಒಂದೇ ಸಮಾನ ಎಂದು ಹೇಳುತ್ತಾಳೆ.
ದೇವರ ಪ್ರೀತಿ ಯಾವ ರೀತಿ ಪರಿಣಾಮ ಬೀರುತ್ತದೋ ಅದೇ ರೀತಿ ಮರುಳಗೊಂಡವರಲ್ಲಿ ಕೂಡ ಲಜ್ಜೆ  ಮತ್ತು ನಾಚಿಕೆಯ ಬಗ್ಗೆ ಯಾವುದೇ ಅಭಿಪ್ರಾಯ ಅಥವಾ ಅಂಜಿಕೆ ಇರುವುದಿಲ್ಲ ಎನ್ನುತ್ತಾಳೆ.ಮುಂದುವರೆಯುತ್ತಾ,ದೇವರಿಗೆ ಒಲಿದವನು ಲೌಕಿಕ ಬಂಧನದಿಂದ ಬಿಡುಗಡೆ ಹೊಂದಿರುತ್ತಾನೆ ಮತ್ತು ಅವನು ಲೋಕದ ಜಂಜಾಟದಿಂದ ಮುಕ್ತಿ ಪಡೆದಿರುತ್ತಾನೆ ಎಂದು ಹೇಳುತ್ತಾಳೆ.
ಒಟ್ಟಾರೆ ಈ ವಚನದಲ್ಲಿ ಕೆಲವು ಸಾಮಾಜಿಕ ಚಿಂತನೆಗಳು ಆಧ್ಯಾತ್ಮಿಕ ನೆಲೆಯಲ್ಲಿ ಕಂಡು ಕೊಳ್ಳುತ್ತದೆ.ದೇವರ ಪ್ರೀತಿಯಲ್ಲಿ ಒಂದಾದ ಭಕ್ತಿಯ ಪರಿ ಇಂದ ಎಲ್ಲ ಭಕ್ತನು ಸಮಾನನಾಗುತ್ತಾನೆ,ಯಾವುದೇ ಜಾತಿಯ ತಡೆ ಇಲ್ಲದೆ ಎನ್ನುವುದು ಇದರ ಸಾರಾಂಶ.

No comments:

Post a Comment