Monday, 24 September 2012

ವಚನ ಸಿಂಚನ ೫೧:ನಿರ್ವಾಣ

 
ಮಂಡೆ ಬೋಳಾಗಿ ಮೈ ಬೆತ್ತಲೆಯಾಗಿಪ್ಪವರ ಕಂಡರೆ
ನಿರ್ವಾಣಿಗಳೆಂಬೆನೆ ?ಎನ್ನೆನಯ್ಯಾ
ಅಖಂಡಿತವಾಗಿ ಮನ ಬೋಳಾಗಿ
ಭಾವ ಬೆತ್ತಲೆಯಾಗಿರಬಲ್ಲರೆ ಅದು
ನಿರ್ವಾಣವೆಂಬೆ ಕಾಣಾ
ಮಹಾಲಿಂಗಗುರು ಶಿವಸಿದ್ಧೆಶ್ವರ ಪ್ರಭುವೇ..
                    -ತೋಂಟದ ಸಿದ್ಧಲಿಂಗೇಶ್ವರರು

ಈ ವಚನದಲ್ಲಿ ತೋಂಟದ ಸಿದ್ಧಲಿಂಗೇಶ್ವರರು ನಿರ್ವಾಣಿಗಳು ಅಂದರೆ ಮೋಕ್ಷ ಪಡೆದವರ ಬಗ್ಗೆ ಹೇಳುತ್ತಾರೆ.ತಲೆ ಕೂದಲನ್ನು ಬೋಳಿಸಿಕೊಂಡು,ಬಟ್ಟೆ ಇಲ್ಲದೆ ಬೆತ್ತಲೆಯಾಗಿ ಓಡಾಡುವವರನ್ನು ನಿರ್ವಾಣಿಗಳೆಂದು ಕರೆಯಲು ಸಾಧ್ಯವಿಲ್ಲ.ಮನುಷ್ಯ ಜನ್ಮ ಪವಿತ್ರವಾದದ್ದು,ಸಾರ್ಥಕವಾದದ್ದು.ಅಂಥದ್ದರಲ್ಲಿ ಬೆತ್ತಲೆಯಾಗಿ ಓಡಾಡಿದರೆ ಅಡಿ ನಾಚಿಕೆಯ ಸಂಗತಿ ಅಲ್ಲದೆ ,ಮೋಕ್ಷದ ನಡಿಗೆಯಲ್ಲ.ಅಖಂಡಿತವಾಗಿ ಮನಸ್ಸು ಖಾಲಿಯಾಗಿ,ಮನಸಿನ ಸ್ಥಿತಿಗೆ ಸ್ವರೂಪ ಇಲ್ಲದಿದ್ದರೆ ಆತನನ್ನು ನಿರ್ವಾಣ ಎನ್ನಬಹುದು,ಆತ ಶೂನ್ಯ ಸಂಪಾದನೆ ಮಾಡಿದ್ದಾನೆ ಎನ್ನಬಹುದು ಎಂದು ಮಹಾಲಿಂಗಗುರು ಶಿವಸಿದ್ಧೇಶ್ವರನಲ್ಲಿ ಹೇಳುತ್ತಾರೆ...ಮನಸ್ಸು ಖಾಲಿಯಾಗಿ ಅಂದರೆ ಯಾವುದೇ ವಿಚಾರಗಳ ಬಗ್ಗೆ ಯೋಚನೆ ಇಲ್ಲದೆ ಎಂದು ತಿಳಿಯಬಹುದು..

ಅಲ್ಲಮಪ್ರಭುವಿನ ವಚನಗಳ ಸಿದ್ಧಾಂತವು ಶೂನ್ಯ ಸಂಪಾದನೆಯೇ ಎಂದು ಇಲ್ಲಿ ಸ್ಮರಿಸಬಹುದು.

Monday, 10 September 2012

ವಚನ ಸಿಂಚನ ೫೦:ಲಿಂಗ ಮತ್ತು ಜಾತಿ ವ್ಯವಸ್ಥೆ

ಎಂಥವನಾದಡೇನು.ಲಿಂಗ ಮುಟ್ಟದವನೇ ಕೀಳು ಜಾತಿ.
ಕುಲವಹುದು ತಪ್ಪದು ಲಿಂಗಮುಟ್ಟಲೊಡನೆ..
ಹೊನ್ನಹುದು ತಪ್ಪದು ಪರುಷ ಮುಟ್ಟಲೊಡನೆ.
ಕೂಡಲಸಂಗಮದೇವನೋಲ್ಲ ಸರ್ವಸಂದೇಹಿಗಳ...
                                     -ಬಸವಣ್ಣ 

ಈ ವಚನದಲ್ಲಿ ಬಸವಣ್ಣ ಲಿಂಗದ ಗುಣ ಲಕ್ಷಣಗಳನ್ನು ವಿವರಿಸುತ್ತಾರೆ.ಹೇಗೆ ಲಿಂಗದ ಒಂದು ಸ್ಪರ್ಶದಿಂದ ಜನರ ಬದಲಾವಣೆ ಆಗುತ್ತದೆ ಎಂಬುದನ್ನು ಇಲ್ಲಿ ಹೇಳುತ್ತಾರೆ.ಇಷ್ಟ ಲಿಂಗ ಧರಿಸದೆ ಇದ್ದರೆ ಅವನನ್ನು ಮೇಲು,ಕೀಳು ಎಂದು ವಿಂಗಡಿಸಲು ಸಾಧ್ಯವಿಲ್ಲ.ಲಿಂಗ ಧರಿಸದೆ ಇರುವವರೆ ಕೀಳು ಮತ್ತು ಲಿಂಗ ಧರಿಸಿದವರೆಲ್ಲರೂ ಉನ್ನತರಾಗುತ್ತಾರೆ.ಅವರೆಲ್ಲರನ್ನು ಒಂದೇ ಸಮಾನೆರೆಂದು ಸ್ವೀಕರಿಸಬೇಕು ಎಂದು ಹೇಳುತ್ತಾ ಮತ್ತೆ ಜಾತಿ ವ್ಯವಸ್ಥೆಯನ್ನು ನಿರ್ಮೂಲ ಮಾಡುವ ಕಾರ್ಯಕ್ಕೆ ಲಿಂಗವನ್ನು ಉಪಯೋಗಿಸುತ್ತಾರೆ ಬಸವ.ಇಷ್ಟ ಲಿಂಗ ಧರಿಸಿದವರು ಶಿವನ ಭಕ್ತರು,ಒಂದೇ ದೇವರನ್ನು ಪೂಜಿಸುವ ಎಲ್ಲರೂ ಸಮಾನರಾಗುತ್ತಾರೆ,ಅವರು ಹಿಂದೆ ಯಾವ ಕುಲದಲ್ಲೇ ಇದ್ದರೂ  ಸರಿ.ಇಲ್ಲಿ ಲಿಂಗ ಧರಿಸುವ ಕ್ರಿಯೆಯನ್ನು ಒಂದು ಭೌತಿಕ ಕ್ರಿಯೆಗೆ ಹೋಲಿಸುತ್ತಾರೆ.ಪುರಾಣದ ಪ್ರಕಾರ ಪರುಶವನ್ನು ಮುಟ್ಟಿದ ಕೂಡಲೇ ಅದು ಚಿನ್ನವಾದಂತೆ,ಲಿಂಗ ಧಾರಣೆ ಕೂಡ ಅದು ಎಲ್ಲಾ ಕೀಳು ಜಾತಿಯವರನ್ನು ಕೂಡ ಉನ್ನತ ಜಾತಿಯವರನ್ನಾಗಿ  ಪರಿವರ್ತಿಸುತ್ತದೆ.ಇದರಿಂದ ಸಮಾಜದಲ್ಲಿ ಜಾತಿ ವ್ಯವಸ್ಥೆ ಹೋಗಲಾಡಿಸುತ್ತದೆ ಎಂದು ಬಸವಣ್ಣ ಹೇಳುತ್ತಾರೆ.ಇಲ್ಲಿ ಬಸವನ ಪ್ರಕಾರ ಎಲ್ಲರೂ ಲಿಂಗ ಧರಿಸುವುದರಿಂದ ಎಲ್ಲರಲ್ಲೂ  ಸಮಾನತೆ ಎದ್ದು ಕಾಣುತ್ತದೆ.
ವಚನದ ಕೊನೆಯ ಸಾಲಿನಲ್ಲಿ ಇಷ್ಟಲಿಂಗದ ಮಹಿಮೆ ಮತ್ತು ಅದರ ಪ್ರಾಮುಖ್ಯತೆಯನ್ನು ಸಂದೇಹ ಪಡುವವರನ್ನು ದೇವರು ಮೆಚ್ಚುವುದಿಲ್ಲ ಅಂದರೆ ಪರಮಾತ್ಮ ಕೂಡ ಎಲ್ಲ ಭಕ್ತರನ್ನು  ಸಮಾನಾಗಿ ಕಾಣುತ್ತಾನೆ ಎಂದು.

Monday, 3 September 2012

ವಚನ ಸಿಂಚನ ೪೯:ವಿಭೂತಿ

ಹಿತವಿದೇ, ಸಕಲಲೋಕದ ಜನಕ್ಕೆ ಮತವಿದೇ
ಶೃತಿ-ಪುರಾಣ-ಆಗಮದ ಗತಿಯಿದೇ
ಭಕುತಿಯ ಬೆಳಗಿನ ಉನ್ನತಿಯಿದೇ !
ಶ್ರೀವಿಭೂತಿಯ ಧರಿಸಿರೆ !
ಭವವ ಪರಿವುದು, ದುರಿತಸಂಕುಲವನೊರೆಸುವುದು,
ನಿರುತವಿದು ನಂಬು ಮನುಜ !
ಜವನ ಭೂತಿಯೇ ವಿಭೂತಿ !
ಮರಣಭಯದಿಂದ ಅಗಸ್ತ್ಯ ಕಶ್ಯಪ ಜಮದಗ್ನಿಗಳು
ದರಿಸಿದರೆಂದು ನೋಡಾ
ಶ್ರೀಶೈಲಚೆನ್ನಮಲ್ಲಿಕಾರ್ಜುನನೊಲಿಸುವ ವಿಭೂತಿ !
                                   -ಅಕ್ಕಮಹಾದೇವಿ

ಈ ವಚನದಲ್ಲಿ ಅಕ್ಕಮಹಾದೇವಿಯು ಶ್ರೀ ವಿಭೂತಿಯ ಮಹಿಮೆಯ ಬಗ್ಗೆ ವಿವರಿಸುತ್ತಾಳೆ...
ವಿಭೂತಿಯಲ್ಲಿ ಒಲವಿದೆ,ಭಕ್ತಿಯ ಸೆಲೆಯಿದೆ..ಇಡಿ ಲೋಕದ ಜನರಿಗೆ ಇದು ಗೌರವವನ್ನು,ಮಾನ್ಯತೆಯನ್ನು ನೀಡುತ್ತದೆ.ಶೃತಿ-ಪುರಾಣ-ಆಗಮಗಳಲ್ಲಿ ಕೂಡ ಇದನ್ನು ಎತ್ತರದ ಸ್ಥಾನದಲ್ಲಿ ಇರಿಸಿದ್ದಾರೆ.ಇದು ಭಕ್ತಿಯ ಬೆಳಗಿನ ಮಾತು ಆಧ್ಯಾತ್ಮದ ಚಿಂತನೆ ಇದೆ..ಆದ್ದರಿಂದ ಅವಿಭೂತಿಯನ್ನು ಧರಿಸಿ ಎಂದು ಅಕ್ಕ ಹೇಳುತ್ತಾ,ಜನ್ಮಾಂತರದ ಬೇರನ್ನು ಅಳಿಸಿ ಹಾಕುತ್ತದೆ,ದುರಿತ ಸಂಕುಲದ ಕತ್ತಲನ್ನು ತೊಲಗಿಸುವುದು.ಇದು ನಂಬಿಕೆಯ ಆಧಾರದ ಮೇಲೆ ಕಟ್ಟಿರುವುದು.ಜನನ ಭೂತಿಯೇ ವಿಭೂತಿ ಅಂದರೆ ಇದೊಂದು ಸಿರಿ ಸಂಪತ್ತಿನ ಸಂಕೇತ ಎಂದು.ಇಂಥ ಒಂದು ಪವಿತ್ರವಾದ ವಿಭೂತಿಯನ್ನು ಧರಿಸಿರಿ ಎಂದು ಹೇಳುತ್ತಾಳೆ ಅಕ್ಕಮಹಾದೇವಿ.

ಅಲ್ಲದೆ ಅಗಸ್ತ್ಯ,ಜಮದಗ್ನಿ ಕಶ್ಯಪ ಮಹರ್ಷಿಗಳೇ ಜೀವ ಭಯದಿಂದ ಇದನ್ನು ಧರಿಸಿದರು,ಅಲ್ಲದೆ ಇದು ಶಿವ ಸ್ವರೂಪಿಯಾದ ಮಲ್ಲಿಕಾರ್ಜುನನಿಗೆ ಪ್ರಿಯವಾದದ್ದು ಎಂದು ಹೇಳುತ್ತಾ ಎಲ್ಲರಲ್ಲೂ ಮತ್ತೊಮ್ಮೆ ಧರಿಸಿರಿ ಎನ್ನುತ್ತಾಳೆ.

ಶರಣರ ನೊಸಲಿಗೆ ಶ್ರೀ ವಿಭೂತಿಯೇ ಶೃಂಗಾರ ಎಂದು ಬಸವಣ್ಣ ಇನ್ನೊಂದು ವಚನದಲ್ಲಿ ಹೇಳಿರುವಂತೆ ಈ ವಚನದಲ್ಲಿ ಅಕ್ಕಮಹಾದೇವಿಯು ವಿಭೂತಿಯಲ್ಲಿ ಭಕ್ತಿ ಮತ್ತು ಆಧ್ಯಾತ್ಮದ ಮಹತ್ವವನ್ನು ಕೆಲವು ಪುರಾಣದ ನಿದರ್ಶನಗಳ ಮೂಲಕ ಹೇಳುತ್ತಾಳೆ.