Sunday, 29 July 2012

ವಚನ ಸಿಂಚನ ೪೬:ಭಕ್ತಿ ಚಳುವಳಿ

ಸ್ವಾಮಿ ಸ್ವಾಮಿ ಭವಿಯ ಭಕ್ತನ ಮಾಳ್ಪುದು,
ಯೋಗ್ಯವೋ,ಅಯೋಗ್ಯವೋ?
ಆಗಮ ವಿಚಾರದಿಂದ ಆಗಬಹುದೆಂಬ ಸಿದ್ಧಾಂತ;
ಇಲ್ಲಿ ಪರಮಗುರು  ಸಂಗನ ಬಸವಯ್ಯ ಸರ್ವಜಾತಿಯ 
ಲಿಂಗದ ರಾಶಿ ಮಾಡಿದ ಸಿದ್ಧಾಂತ
ಕಪಿಲಸಿದ್ಧಮಲ್ಲಿಕಾರ್ಜುನ...
                    -ಸಿದ್ಧರಾಮೇಶ್ವರ.
ಈ ವಚನದಲ್ಲಿ ಸಿದ್ಧರಾಮಣ್ಣ ಭಕ್ತಿ ಚಳುವಳಿಯ ಒಂದು ಸಮಸ್ಯೆಯ ಬಗ್ಗೆ  ವಿಚಾರ  ಮಾಡುತ್ತಾರೆ.ಭವಿಯಾದವನು ಅಂದರೆ ಭಕ್ತಿ ಇಲ್ಲದವನನ್ನು ಭಕ್ತನನ್ನಾಗಿ ಮಾಡುವುದು ಸರಿಯೋ ತಪ್ಪೋ ಎಂದು ತಮ್ಮಲ್ಲೇ  ಪ್ರಶ್ನೆ ಕೇಳಿಕೊಂಡು ಅದಕ್ಕೆ ಸಮರ್ಥನೆ ನೀಡಲು ಪ್ರಯತ್ನಿಸುತ್ತಾರೆ.ಆಗಮದ ಪ್ರಕಾರ ಹೊರಗಿನವರನ್ನು ಭಕ್ತಿ ಚಳುವಳಿಗೆ ಸೇರಿಸಿಕೊಳ್ಳಬಹುದು ಮತ್ತು ಅವರಿಗೆ ನಮ್ಮ ಸಮಾನ  ಸ್ಥಾನ  ಕೊಡಬಹುದು.ಇಲ್ಲಿ ಗಮನಿಸಬೇಕಾದ ಇನ್ನೊಂದು ಅಂಶ ಅಂದರೆ ಆಗಮದ ಯಾವ ಭಾಗದಲ್ಲಿ ಈ ರೀತಿಯ ಘೋಷಣೆ ಇದೆ ಎಂದು ತಿಳಿದು ಬರುವುದಿಲ್ಲ.ಅದೇನೇ ಆದರೂ ಇಲ್ಲಿ ಭಕ್ತಿ ಚಳುವಳಿಗೆ ಸೇರಲು ಅವನ ಜಾತಿ ಕುಲ ಯಾವುದು ಲೆಕ್ಕಕ್ಕೆ ಬರುವುದಿಲ್ಲ.ಇಲ್ಲಿ ಸಿದ್ಧರಾಮಣ್ಣ ಇನ್ನೊಂದು ವಾದವನ್ನು ಮಂಡಿಸುತ್ತ ಇಲ್ಲಿ ಬಸವಣ್ಣನ ತತ್ವ ವಿಚಾರ ಮತ್ತು ಕಲ್ಯಾಣದ ಜನರು  ಆಚರಿಸುತ್ತಿದ್ದ  ತತ್ವಗಳೇ ಮೇಲು ನಮಗೆ ಎಂದು ಹೇಳುತ್ತಾ ಬಸವಣ್ಣನ ಸಿದ್ಧಾಂತಗಳನ್ನು ಸಿದ್ಧರಾಮ ಒಪ್ಪಿಕೊಳ್ಳುತ್ತಾನೆ.ಅಂದರೆ ಇದು ಕೂಡ ಜಾತಿ ನಿರ್ಮೂಲನೆಗೆ ಅವರು ತೊಟ್ಟ ಪಣಕ್ಕೆ ಸಾಕ್ಷಿಯಾಗಿರುವ ಇನ್ನೊಂದು ವಚನ.ಇಲ್ಲಿ ಯಾರೊಬ್ಬನ ಹಿನ್ನೆಲೆ ಏನೇ ಇರಬಹುದು,ಅಥವಾ ಅವನು ಯಾವ ಜಾತಿಯವನೇ ಆಗಿರಬಹುದು,ಎಲ್ಲರಿಗೂ ಭಕ್ತಿ ಚಳವಳಿಯಲ್ಲಿ ಸ್ಥಾನವಿದೆ,ಎಲ್ಲರೂ ಸಮಾನರೆ ಎಂದು ಹೇಳುತ್ತಾರೆ.


Monday, 23 July 2012

ವಚನ ಸಿಂಚನ ೪೫:ಭಕ್ತಿಯ ನಂಬುಗೆ

ದೇವ ದೇವ ಬಿನ್ನಪವ ಅವಧಾರು |
ವಿಪ್ರ ಮೊದಲು ಅಂತ್ಯಜ ಕಡೆಯಾಗಿ
ಶಿವಭಕ್ತರಾದವರನೆಲ್ಲರನು ಒಂದೇ ಎಂಬೆ
ಹಾರುವ ಮೊದಲು ಶ್ವಪಚ ಕಡೆಯಾಗಿ
ಭವಿಯಾದವರನೆಲ್ಲರನು ಒಂದೇ ಎಂಬೆ |
ಈ ಹೀಂಗೆಂದು ನಂಬುವುದೆನ್ನ ಮನವು |
ಈ ನುಡಿದ ನುಡಿಯೊಳಗೆ ಎಳ್ಳ ಮೊನೆಯಷ್ಟುಸಂದೇಹವುಳ್ಳೆರೆ
ಹಲುದೋರ ಮೂಗ ಕೊಯಿ ಕೂಡಲಸಂಗಮದೇವ .
                                    -ಬಸವಣ್ಣ, 


ಈ ವಚನದಲ್ಲಿ  ಒಂದು ರೀತಿಯ ಪ್ರಾರ್ಥನೆ ಇದೆ ಮತ್ತು ಅದೇ ರೀತಿ ಒಂದೇ ದೇವರನ್ನು ಆರಾಧಿಸುವ ಪ್ರತಿಯೊಬ್ಬ ಭಕ್ತನನ್ನು ಒಂದೇ ಎಂದು ನಂಬುತ್ತೇವೆ ಎಂದು ಬಸವಣ್ಣನವರು ಪ್ರಮಾಣ ವಚನ ತೆಗೆದುಕೊಂಡ ಆಗಿದೆ.ಈ ವಚನದ ಪ್ರಕಾರ ಬಸವಣ್ಣ ಹೇಳುವಂತೆ ಶಿವನನ್ನು ಪೂಜಿಸುವ ಪ್ರತಿಯೋಬ್ಬನನ್ನು ಎಲ್ಲಾ ಸಂಪ್ರದಾಯದ ಸಂಕೋಲೆಯಿಂದ ಬಿಡಿಸಿ ಒಂದೇ ಎಂಬ ಭಾವನೆ ಇದೆ.೧೨ನೆ ಶತಮಾನದಲ್ಲಿ ಅಂಟಿಕೊಂಡಿದ್ದ ಜಾತಿ ಪದ್ಧತಿಯನ್ನು ಬಸವಣ್ಣನವರು ಹೋಗಲಾಡಿಸಲು ಪ್ರಯತ್ನ ಪಟ್ಟಿದ್ದರು ಎಂಬುದಕ್ಕೆ ಈ ವಚನವೂ ಸಾಕ್ಷಿ.ಇಲ್ಲಿ ಶಿವ ಭಕ್ತನಾದವನು ಬ್ರಾಹ್ಮಣನೆ ಹಾಗಿರಬಹುದು ಅಥವಾ  ಆತ ಅತಿ ಕೀಳು ಜಾತಿಯವನೇ ಆಗಿರಬಹುದು,ಒಂದೇ ದೇವರನ್ನು ಪೂಜಿಸುತ್ತಾರೆ ಅಂದರೆ ಇಬ್ಬರೂ ಸಮಾನರೆ ಎಂದು ಹೇಳುತ್ತಾ,ಅದೇ ರೀತಿ ಭವಿಯಾದವನು,ಅಂದರೆ ಭಕ್ತಿಯಿಲ್ಲದವನು,ಅವನು ಕೂಡ ಬ್ರಾಹ್ಮಣನೆ ಆಗಿರಬಹುದು ಅಥವಾ ಅಸ್ಪ್ರುಷ್ಯನೆ ಆಗಿರಬಹುದು,ಅವರು ಕೂಡ ಸಮಾನರೆ.ಇಲ್ಲಿ ಬಸವಣ್ಣನವರ ವಾದ ಏನೆಂದರೆ ಎಲ್ಲರೂ ಒಂದೇ ದೇವರನ್ನು ಪೂಜಿಸುವುದಾದರೆ ಎಲ್ಲರೂ ಸಮಾನರು,ಅದೇ ರೀತಿ  ಪೂಜಿಸದಿದ್ದರೆ  ಕೂಡ ಅವರ ಮಧ್ಯೆ ಕೂಡ ಜಾತಿ ಆಧಾರದ ಮೇಲೆ ವಿಂಗಡಣೆ ಮಾಡುವುದು ಸರಿಯಲ್ಲ ಎಂದು ಹೇಳುತ್ತಾರೆ.ಈ ತರ್ಕವನ್ನು ನನ್ನ ಮನಸ್ಸು ಒಪ್ಪುತ್ತದೆ,ಯಾವುದೇ ಜಾತಿ ವಿಂಗಡಣೆ  ಮಾಡದೆ ಎಲ್ಲರೂ ಒಂದೇ ಸಮ ಎಂದು ಸ್ವೀಕರಿಸುತ್ತೇನೆ,ಇದರಲ್ಲಿ ಎಳ್ಳಷ್ಟು ನಂಬಿಕೆ ಇಲ್ಲದಿದ್ದರೆ ತನ್ನ ಮೂಗನ್ನು ಕೊಯ್ಯಿ ಎಂದು  ಕೂಡಲಸಂಗಮನಲ್ಲಿ ಪ್ರಾರ್ಥಿಸುತ್ತಾರೆ.

ಈ ವಚನದ ಒಟ್ಟಾರೆ ಅರ್ಥ ಭಕ್ತಿಯ ಮಾರ್ಗದ ಮೇಲೆ ಜನರನ್ನು ಗುರುಉತಿಸಬೇಕೆ ಹೊರಟು ಅವರನ್ನು ಜಾತಿಯ ಆಧಾರದ ಮೇಲೆ ಬೇರ್ಪಡಿಸುವುದು ಸರಿಯಲ್ಲ ಎಂಬುದು.

Monday, 9 July 2012

ವಚನ ಸಿಂಚನ ೪೪:ಸಂಸಾರ ಶರಧಿ

ಕಾಲಲ್ಲಿ ಕಟ್ಟಿದ ಗುಂಡು,
ಕೊರಳಲ್ಲಿ ಕಟ್ಟಿದ ಬೆಂಡು,
ತೇಲಲೀಯದು ಗುಂಡು,
ಮುಳುಗಲೀಯದು ಬೆಂಡು,
ಇಂತಪ್ಪ ಸಂಸಾರ ಶರಧಿಯ ದಾಟಿಸಿ
ಕಾಲಾ೦ತಕನೆ ಕಾಯೋ,
ಕೂಡಲಸಂಗಮದೇವಾ !!!
                    -ಬಸವಣ್ಣ

ಇಲ್ಲಿ ಬಸವಣ್ಣನವರು ಸಂಸಾರವನ್ನು ಸಮುದ್ರಕ್ಕೆ ಹೋಲಿಸುತ್ತಾ ಅಂತ ಸಮುದ್ರವನ್ನು ದಾಟುವಾಗ ಬರುವ ಕಷ್ಟ ಕಾರ್ಪಣ್ಯಗಳನ್ನು ಬಹಳ ಸಮಯೋಚಿತವಾಗಿ ಈ ವಚನದಲ್ಲಿ ವಿವರಿಸುತ್ತಾರೆ.ಕಲ್ಲು ಗುಂಡು ನೀರಿನಲ್ಲಿ ಮುಳುಗುವ ವಸ್ತು,ಅದೇ ರೀತಿ ಬೆಂಡು ತೇಲುವ ವಸ್ತು.ಸಂಸಾರದಲ್ಲಿ ಒಂದು ಕಡೆ ಗುಂಡನ್ನು ಕಟ್ಟಿಕೊಂಡು ಇನ್ನೊಂದು ಕಡೆ ಬೆಂಡನ್ನು ಕಟ್ಟಿಕೊಂಡರೆ ಸಮತೋಲನ ಕಾಪಾಡುವುದು ಕಷ್ಟ.ಇಲ್ಲಿ ಕಲ್ಲು ಗುಂಡು ಮತ್ತು ಬೆಂಡು ಅಂದರೆ ಸಂಸಾರದಲ್ಲಿ ಬರುವ ಸುಖ ದುಃಖ ಅಥವಾ ಸರಸ ವಿರಸ ಅಥವಾ ಇಷ್ಟ ಕಷ್ಟದ ಗಳಿಗೆಗಳು ಎಂದು ಭಾವಿಸಬಹುದು.ಇಂತಿರುವ ಸಂಸಾರವೆಂಬ ಸಮುದ್ರದಲ್ಲಿ ಸುಖ ದುಃಖವನ್ನು ಸಮನಾಗಿ ಸಹಿಸುವ ಶಕ್ತಿಯನ್ನು ನೀಡುವವನು ನೀನೇ ದೇವಾ ಎಂದು ಶಿವ ಸ್ವರೂಪಿ ಕೂಡಲಸಂಗಮದೇವನಲ್ಲಿ ಹೇಳುತ್ತಾರೆ.

Monday, 2 July 2012

ವಚನ ಸಿಂಚನ ೪೩:ಸುಜ್ಞಾನವೆಂಬ ಕರ ತೇಜ

ಕಸವಕೊಂಡು ಹೊಸ ಧಾನ್ಯವ ಕೊಟ್ಟಡೆ,ಒಲ್ಲೆಂಬ ಚದುರರಾರು..
ಜಲವ ಕೊಂಡು ಅಮೃತವ ಕೊಟ್ಟಡೆ,ಒಲ್ಲೆಂಬ ಭಾಷೆಯದಾರದು?
ಎನ್ನಂತರಂಗದ ಜ್ಞಾನವಕೊಂಡು ಸುಜ್ಞಾನವಪ್ಪ
ನಿಮ್ಮ ಕರ ತೇಜವ ಕೊಟ್ಟಡೆ
ಒಲ್ಲೆನೆಂಬ ಪಾತಕಿ ಯಾರು?
ಕಪಿಲಸಿದ್ಧಮಲ್ಲಿಕಾರ್ಜುನ ಮಡಿವಾಳ ತಂದೆ....
                         -ಸಿದ್ಧರಾಮೇಶ್ವರ

ಜೀವನದಲ್ಲಿ ಯಾರೇ ಆದರು ದುರಾವಸ್ಥೆಯಲ್ಲಿರುವ ವಸ್ತುವನ್ನು ಕೊಟ್ಟು ಅದಕ್ಕಿಂತ ಚೆನ್ನಾಗಿರುವ ಭೋಗ ವಸ್ತುವನ್ನು ಪಡೆಯಲು ಒಲ್ಲೆ ಎನ್ನುವುದಿಲ್ಲ,ಅಂತ ವ್ಯಕ್ತಿಗಳನ್ನು ಇಲ್ಲಿ ಸಿದ್ದರಾಮಣ್ಣ ಚತುರರು ಎಂದು ಹೇಳುತ್ತಾ ಕೆಲವು ನಿದರ್ಶನಗಳನ್ನು ಕೊಟ್ಟು ತನ್ನನ್ನು ಕೂಡ ಪಾತಕಿ ಎಂದು ಹೇಳಿಕೊಳ್ಳುತ್ತಾನೆ.ಕಸವನ್ನು ಕೊಟ್ಟು ಅದಕ್ಕಿಂತ ಬೆಲೆ ಬಾಳುವ ಧಾನ್ಯವನ್ನು ಯಾವ ಚತುರನು ಕೂಡ ಬೇಡ ಅನ್ನುವುದಿಲ್ಲ,ಅದೇ ರೀತಿ ನೀರನ್ನು ಕೊಂಡು ಅಮೃತವನ್ನು ಕೊಟ್ಟರೆ ಕೂಡ ಅದನ್ನು ಪಡೆಯುತ್ತಾರೆ.ಈ ರೀತಿ ಇರಬೇಕಾದರೆ ತನ್ನ ಅಂತರಂಗದಲ್ಲಿರುವ ಜ್ಞಾನವನ್ನು ಪಡೆದು ಸುಜ್ಞಾನವಾಗಿರುವ ತಮ್ಮ ತೇಜೋಮಯ ವರ್ಚಸ್ಸನ್ನು ಕೊಟ್ಟರೆ ಒಲ್ಲೆ ಎನ್ನದ ಪಾತಕಿ ತಾನು ಎಂದು ಕಪಿಲ ಸಿದ್ಧ ಮಲ್ಲಿಕಾರ್ಜುನನಲ್ಲಿ ಹೇಳುತ್ತಾರೆ.ಅಂದರೆ ತಮ್ಮ ಜ್ಞಾನವನ್ನು ಕಸ ಮತ್ತು ನೀರಿಗೆ ಹೋಲಿಸುತ್ತಾ ಕಪಿಲಸಿದ್ಧಮಲ್ಲಿನಾಥನ ಸುಜ್ಞಾನವನ್ನು ಧಾನ್ಯ ಮತ್ತು ಅಮೃತಕ್ಕೆ ಹೋಲಿಸುತ್ತ ಸಿದ್ಧರಾಮೇಶ್ವರರು ಹೇಳುತ್ತಾರೆ ಅಂತ ಸುಜ್ಞಾನವನ್ನು ಕಸಿದುಕೊಳ್ಳುವ ಪಾತಕಿ ತಾನು ಎಂದು.