Monday 14 May 2012

ವಚನ ಸಿಂಚನ ೩೭:ದೂಷಣೆ

ಗೂಗೆ ಕಣ್ಣ ಕಾಣಲರಿಯದೆ ರವಿಯ ಬಯ್ವುದು,
ಕಾಗೆ ಕಣ್ಣ ಕಾಣಲರಿಯದೆ ಶಶಿಯ ಬಯ್ವುದು,
ಕುರುಡ ಕಣ್ಣ ಕಾಣಲರಿಯದೆ ಕನ್ನಡಿಯ ಬಯ್ವನು,
ಇವರ ಮಾತೆಲ್ಲವೂ ಸಹಜವೇ,
ನರಕ ಸಂಸಾರದಲ್ಲಿ ಹೊಡಕುಗೊಳ್ಳುತ್ತಾ,
ಶಿವನಿಲ್ಲ,ಮುಕ್ತಿಯಿಲ್ಲ,ಹುಸಿಯೆಂದರೆ,
ನರಕದಲ್ಲಿಕ್ಕದೆ ಬಿಡುವನೇ ಚನ್ನಮಲ್ಲಿಕಾರ್ಜುನ !!!
                        -ಅಕ್ಕಮಹಾದೇವಿ

ಈ ವಚನದಲ್ಲಿ ಅಕ್ಕಮಹಾದೇವಿಯು ಮನುಷ್ಯ ತನ್ನ ಅಸಹಾಯಕತೆ ಮತ್ತು ತನ್ನ ಸಂಕಟದಲ್ಲಿ ಬೇರೆಯವರನ್ನು ಹೇಗೆ ದೂಷಿಸುತ್ತಾನೆ ಎಂದು ಕೆಲವು ನಿದರ್ಶನಗಳ ಮೂಲಕ ಹೇಳುತ್ತಾರೆ.ಗೂಬೆಗೆ ಹಗಲಿನಲ್ಲಿ ಕಣ್ಣು ಕಾಣದ್ದರಿಂದ ಸೂರ್ಯನನ್ನು ಬೈಯ್ಯುತ್ತದೆ ,ಅದೇ ರೀತಿ ಕಾಗೆಯು ರಾತ್ರಿ ಸಮಯದಲ್ಲಿ ಚಂದ್ರನನ್ನು ಬೈಯ್ಯುತ್ತದೆ ಮತ್ತು ಕುರುಡ ತನ್ನ ಪ್ರತಿಬಿಂಬ ಕನ್ನಡಿಯಲ್ಲಿ ಕಾಣದ್ದಕ್ಕೆ ಕನ್ನಡಿಯನ್ನೇ ಬೈಯ್ಯುತ್ತಾನೆ.ಇದು ಪ್ರತಿಯೊಬ್ಬ ಅಸಹಾಯಕನ ಸಹಜ ಮಾತು ಎಂದು ಹೇಳುತ್ತಾ ಇದು ಸಂಸಾರದಲ್ಲಿ ನರಕವು ಹೊರಳಾಡುವಂತೆ ದೂಷಿಸುವುದು ಕೂಡ ಎಂದು ಹೇಳುತ್ತಾರೆ.

ಇಲ್ಲಿ ಶಿವನಿಲ್ಲ ಅಂದರೆ ತನಗಿರುವ ಶಕ್ತಿಯ ಬಗ್ಗೆ ನಂಬಿಕೆ ಮತ್ತು ಆತ್ಮ ವಿಶ್ವಾಸ ಇಲ್ಲದೆ ಬೇರೆಯದರ ಬಗ್ಗೆ ಅಪೇಕ್ಷಿಸುವ ಪರಿ ಮತ್ತು ಮುಕ್ತಿಯಿಲ್ಲ ಅಂದರೆ ಇಂಥ ಕಷ್ಟಗಳು ತನಗೆ ಮಾತ್ರ ಇರುವುದು ಎಂದು ಭಾವಿಸಿ ಸದಾ ಇನ್ನೊಬ್ಬರನ್ನು ದೂರುತ್ತಿರುವುದು.
ತನಗಿರುವ ಅಗಾಧ ಶಕ್ತಿಯನ್ನು ಉಪಯೋಗಿಸಿಕೊಳ್ಳದೆ ಅನ್ಯರನ್ನು ದೂಷಿಸಿದರೆ ಅಂಥವರನ್ನು ಚನ್ನಮಲ್ಲಿಕಾರ್ಜುನ ನರಕಕ್ಕೆ ತಳ್ಳುತ್ತಾನೆ ಅಂದರೆ ಅವರು ಯಾವಾಗಲು ಕಷ್ಟವನ್ನು ಅನುಭವಿಸುತ್ತಾರೆ ಎಂದು ಹೇಳುತ್ತಾ ತಮಗೆ ಲಭ್ಯವಿರುವ ಶಕ್ತಿಯನ್ನು ಸದ್ವಿನಿಯೋಗ ಮಾಡಿಕೊಂಡು ಒಳ್ಳೆ ರೀತಿಯಲ್ಲಿ ನಡೆದರೆ ಶಿವನನ್ನು ತಲುಪಬಹುದು ಅಂದರೆ ಮುಕ್ತಿಯ ಕಡೆ ನಡೆಯಬಹುದು ಎಂದು ಹೇಳುತ್ತಾರೆ.

No comments:

Post a Comment