Monday 23 April 2012

ವಚನ ಸಿಂಚನ ೩೪:ಭಕ್ತಿ ಪಕ್ಷ

ಕಾಗೆ ಒಂದಗುಳ ಕಂಡಡೆ ಕರೆಯದೆ ತನ್ನ ಬಳಗವನು
ಕೋಳಿ ಒಂದಗುಳ ಕಂಡಡೆ ಕೂಗಿ ಕರೆಯದೆ
ತನ್ನ ಕುಲವನೆಲ್ಲವ,
ಶಿವಭಕ್ತನಾಗಿ ಭಕ್ತಿಪಕ್ಷ ವಿಲ್ಲದಿದ್ದಡೆ
ಕಾಗೆ ಕೋಳಿಗಿಂತ ಕರ ಕಷ್ಟ ಕೂಡಲಸಂಗಮದೇವಾ |
                                              -ಬಸವಣ್ಣ

ಈ ವಚನದಲ್ಲಿ ಬಸವಣ್ಣನವರು ಮನುಷ್ಯನ ಸ್ವಾರ್ಥ ಬುದ್ಧಿಯ ಬಗ್ಗೆ ಹೇಳುತ್ತಾ ಕಾಗೆ ಮತ್ತು ಕೋಳಿಯ ನಿದರ್ಶನವನ್ನು ಕೊಟ್ಟು ಅವುಗಳಿಗೆ ಹೋಲಿಸಿ ತೀಕ್ಷ್ಣವಾಗಿ ಭೋದಿಸುತ್ತಾರೆ. ಕಾಗೆ ಒಂದಗುಳ ಕಂಡಾಗ ಇಡಿ ತನ್ನ ಬಳಗವನ್ನು ಕರೆದು ಇದ್ದದ್ದರಲ್ಲೇ ಸಾಧ್ಯವಾದಷ್ಟು ಹಂಚಿ ತಿನ್ನುತ್ತದೆ,ಅದೇ ರೀತಿ ಕೋಳಿ ಕೂಡ ತನ್ನ ಸಂಸಾರವನೆಲ್ಲ ಕರೆದುಕೊಂಡು ಬಂದು ತಿನ್ನುತ್ತದೆ.ಆದರೆ ಶಿವ ಭಕ್ತನಾದ ಮನುಷ್ಯ ತನ್ನ ಕುಲ ಭಾಂದವರ ಜೊತೆ ಹಂಚಿ ತಿನ್ನಲಿಲ್ಲ ಅಂದರೆ ಕಾಗೆ ಕೋಳಿಗಳೇ ಮನುಷ್ಯನಿಗಿಂತ ಲೇಸು ಎಂದು ಹೇಳುತ್ತಾರೆ.

ಮಾನವ ಧರ್ಮದಲ್ಲಿ ಸ್ವಾರ್ಥ ಎಂಬ ದುರ್ಗುಣ ಅಂಟಿಕೊಂಡರೆ ಪ್ರಾಣಿಗಳಿಗಿಂತ ಅವನ ಜೀವನ ಕಷ್ಟವಾಗುತ್ತದೆ ಎಂದು ಹೇಳುತ್ತಾರೆ.

ಇಲ್ಲಿ ಭಕ್ತಿ ಪಕ್ಷ ಅಂದರೆ ಕೇವಲ ಅನ್ನವನ್ನು ಹಂಚಿ ತಿನ್ನುವುದಲ್ಲ,ಅಲ್ಲದೆ ತನ್ನ ಜ್ಞಾನವನ್ನು ಇನ್ನಿತರರ ಜೊತೆ ವಿಚಾರ ವಿನಿಮಯ ಮಾಡುವುದಾಗಿರಬಹುದು.

೧೨ನೆ ಶತಮಾನದಲ್ಲಿ ಅನುಭವ ಮಂಟಪ ಅನ್ನುವ ಸಭೆ ಇದ್ದದ್ದೇ ಈ ರೀತಿ ತಮ್ಮ ಜ್ಞಾನ(ಸಾಮಾಜಿಕ,ಆರ್ಥಿಕ,ಆಧ್ಯಾತ್ಮಿಕ ಎಲ್ಲವೂ)ವನ್ನು ಹಂಚಿಕೊಳ್ಳುವುದಕ್ಕೆ.

No comments:

Post a Comment