Monday, 29 July 2013

ವಚನ ಸಿಂಚನ ೬೮ :ವೇಷ ಡಂಬಕರು

ಕಳ್ಳಗಂಜಿ ಕಾಡ  ಹೊಕ್ಕಡೆ ಹುಲಿ ತಿಂಬುದ ಮಾಬುದೇ ?
ಹುಲಿಗಂಜಿ ಹುತ್ತವ ಹೊಕ್ಕಡೆ ಸರ್ಪ ತಿಂಬುದ ಮಾಬುದೇ ?
ಕಾಲಗಂಜಿ ಭಕ್ತನಾದಡೆ ಕರ್ಮ ತಿಂಬುದ ಮಾಬುದೇ ?
ಇಂತೀ ಮೃತ್ಯುವಿನ ಬಾಯ ತುತ್ತಾದ
ವೇಷಡಂಬಕರ ನಾನೇನೆಂಬೆ ಗುಹೇಶ್ವರಾ !!
                                           - ಅಲ್ಲಮಪ್ರಭು

ಈ ವಚನದಲ್ಲಿ ಅಲ್ಲಮಪ್ರಭು ಅವರು ಮನುಷ್ಯ ಹೇಗೆ ಕಷ್ಟವನ್ನು ಎದುರಿಸಲಾಗದೆ ಮಾಡಿ ಮತ್ತೆ ಕೊನೆಗೆ ಇನ್ನೊಂದು ಕಷ್ಟದಲ್ಲಿ ಸಿಕ್ಕಿಹಾಕಿಕೊಂಡು ಬಳಲುತ್ತಾನೆ ಎಂಬುದನ್ನು ಕೆಲವು ನಿದರ್ಶನಗಳ ಮೂಲಕ ವಿವರಿಸುತ್ತಾರೆ.

ಕಳ್ಳನಿಗೆ ಹೆದರಿಕೊಂಡು ಕಾಡಿನ ಒಳಗೆ ಅಡಗಿದರೆ ಹುಲಿಯ ಬಾಯಿಗೆ ಆಹಾರವಾಗುತ್ತಾನೆ..  ಆ ಹುಲಿಗೆ ಹೆದರಿ ಹುತ್ತದಲ್ಲಿ ಅಡಗಿದರೆ,ಅಲ್ಲಿ ಹಾವಿನ  ಕೈಯಲ್ಲಿ ಸಿಕ್ಕಿಹಾಕಿಕೊಳ್ಳುತ್ತಾನೆ.. ತನಗೆ ಬಂದ  ಕಷ್ಟವನ್ನು ಎದುರಿಸಬಹುದಾಗಿದ್ದರೂ ತನ್ನ ಪಲಾಯನವಾದದಿಂದ ಮತ್ತೊಂದು ದೊಡ್ಡ ಕಷ್ಟದಲ್ಲಿ ಸಿಲುಕಿ ನಲುಗುತ್ತಾನೆ..

ಕೊನೆಗೆ ಸಾವಿಗೆ ಅಂಜಿ ದೇವರ ನೆನೆಯುತ್ತಾ ಭಕ್ತನಾದರೆ ತನ್ನ ಕರ್ಮಗಳನ್ನು ತೊಳೆಯಲು ಸಾಧ್ಯವಿಲ್ಲ ,ಬದಲಾಗಿ ತನ್ನ ಕರ್ಮಗಳೇ ಅವನನ್ನು ಕೊಲ್ಲುತ್ತದೆ. ಇಲ್ಲಿ ಭಕ್ತನಾದವನನ್ನು ವೇಷಡಂಬಕ ಎಂದು ಕರೆಯುತ್ತಾ, ಅಂಥವರ ಬಗ್ಗೆ ಕನಿಕರ ವ್ಯಕ್ತಪಡಿಸುತ್ತಾರೆ..

Monday, 13 May 2013

ವಚನ ಸಿಂಚನ ೬೭:ಕಾಯಕ ನಿಷ್ಠೆ

ಕಾಯಕದಲ್ಲಿ ನಿರತನಾದಡೆ
ಗುರು ದರ್ಶನವಾದಡು ಮರೆಯಬೇಕು,
ಲಿಂಗ ಪೂಜೆಯಾದಡು ಮರೆಯಬೇಕು,
ಜಂಗಮ ಮುಂದಿದ್ದಡು ಹಂಗು ಹರಿಯಬೇಕು
ಕಾಯಕವೇ ಕೈಲಾಸವಾದ ಕಾರಣ
ಅಮಲೇಶ್ವರಲಿಂಗವಾಯಿತ್ತಾದಡು ಕಾಯಕದೊಳಗು. 
                              -ಆಯ್ದಕ್ಕಿ ಮಾರಯ್ಯ

ಕಾಯಕಕ್ಕೆ ಮಹತ್ವ ಕೊಡುವ ಈ ವಚನದಲ್ಲಿ ಆಯ್ದಕ್ಕಿ ಮಾರಯ್ಯ , ಗುರು,ಲಿಂಗ,ಜಂಗಮ ಎಂಬ ತ್ರಿವಿಧಕ್ಕಿಂತ ಕಾಯಕವೇ ಶ್ರೇಷ್ಠ ಎಂದು ಬಿಂಬಿಸುತ್ತಾನೆ .. ಕಾಯಕದಲ್ಲಿ ನಿರತನಾಗಿರುವವನಿಗೆ ಬೇರೆ ಇನ್ನೇನು ಕಾಣಬಾರದು ಎಂದು ಹೇಳುತ್ತಾನೆ .. ತನ್ನ ಗುರು ಬಂದರೂ ಕೂಡ ,ತನ್ನ  ಕಾಯಕಕ್ಕೆ ತೊಡಕಾಗಬಾರದು. ಶರಣರಿಗೆ ಗುರುವಿನ ದರ್ಶನ ಮಂಗಳಕರವಾದದ್ದು,ಆದರೂ ಇಲ್ಲಿ ಗುರುವಿಗಿಂತ ಕಾಯಕಕ್ಕೆ ಪ್ರಾಮುಖ್ಯತೆ ಕೊಡುತ್ತಾನೆ ಮಾರಯ್ಯ .
 ಅದೇ ರೀತಿ ,ಲಿಂಗ ಪೂಜೆ ಸಮಯ ಆದರೂ ಕೂಡ ತನ್ನ ಕಾರ್ಯ ಮೊದಲು ಮುಗಿಸುವುದು ಲೇಸು ಎಂದು ಅಭಿಪ್ರಾಯ ವ್ಯಕ್ತ ಪಡಿಸುತ್ತಾನೆ. ತಾನು ಕೆಲಸದಲ್ಲಿ ನಿರತನಾಗಿದ್ದಾಗ ಜಂಗಮರಿಗೆ ಕಾಣಿಕೆ ಅರ್ಪಿಸುವುದು ಕೂಡ ತರವಲ್ಲ,ಅದಕ್ಕಿಂತ ಅವನ ಕಾಯಕ ಮುಖ್ಯ ಎನ್ನುತ್ತಾನೆ ..

ಈ ವಚನದಲ್ಲಿ ಮಾರಯ್ಯ ಕಾಯಕ ಯೋಗಿಯ ಶ್ರಮಕ್ಕೆ ಮೆಚ್ಚುಗೆ ವ್ಯಕ್ತ ಪಡಿಸುತ್ತಾನೆ. ಅಲ್ಲದೆ ,ಹೊಲದಲ್ಲಿ  ಅಕ್ಕಿ ಆಯುವ ತನ್ನ ವೃತ್ತಿಯಲ್ಲಿ ತಾನು ಕೈಲಾಸವನ್ನು ಕಾಣುತ್ತೇನೆ ಎಂದು ಹೇಳುತ್ತಾನೆ.ಇಲ್ಲಿ ತನ್ನ ಕಾಯಕದಿಂದ ವ್ಯಕ್ತಿಯೊಬ್ಬ ದೇವರನ್ನು ಮತ್ತು ದೇವರ ಅಸ್ತಿತ್ವವನ್ನು ಅನುಭವಿಸಬಹುದು ಮತ್ತು ತನ್ನ ವೃತ್ತಿಯಿಂದ ದೇವರನ್ನು ಕಂಡುಕೊಳ್ಳಬಹುದು  ಎನ್ನುತ್ತಾನೆ .
ಈ ವಚನ ಶರಣರು ಕಾಯಕಕ್ಕೆ ನೀಡಿದ ಮಹತ್ವವನ್ನು ಸಾರುತ್ತದೆ ..

ಇಲ್ಲಿ ಗಮನಿಸಬೇಕಾದ ಅಂಶ ಎಂದರೆ "ಕಾಯಕವೇ ಕೈಲಾಸ"ಎಂಬ ನುಡಿಯನ್ನು  ಬಸವಣ್ಣ ಅಲ್ಲದೆ ಇನ್ನು ಅನೇಕ ವಚನಕಾರರು ತಮ್ಮ ವಚನಗಳಲ್ಲಿ ಬಳಸಿದ್ದಾರೆ.

Monday, 8 April 2013

ವಚನ ಸಿಂಚನ ೬೬: ಸಜ್ಜನರ ಸಂಗ

ಹದತಪ್ಪಿ ಕುಟ್ಟಲು ನುಚ್ಚಲ್ಲದೇ ಅಕ್ಕಿಯಿಲ್ಲ
ವೃತಹೀನನ ನೆರೆಯೆ ನರಕವಲ್ಲದೇ ಮುಕ್ತಿಯಿಲ್ಲ
ಅರಿಯದುದು ಹೋಗಲಿ ಅರಿದು ಬೆರೆದೆನಾದಡೆ
ಕಾದ ಕತ್ತಿಯಲ್ಲಿ ಕಿವಿಯ ಕೊಯ್ವರಯ್ಯಾ
ಒಲ್ಲೆಬಲ್ಲೆನಾಗಿ ನಿಮ್ಮಾಣೆ ನಿರ್ಲಜ್ಜೇಶ್ವರಾ...
                                         -ಸೂಳೆ ಸಂಕವ್ವೆ

ಈ  ವಚನದಲ್ಲಿ ಮಾಡುವ ಕೆಲಸ ಹೇಗೆ ಹಿತವಾಗಿರಬೇಕು ಮತ್ತು ಎಂಥವರ ಸಂಗ ಮಾಡಬೇಕು ಎಂದು ಸಂಕವ್ವೆ ಹೇಳುತ್ತಾಳೆ ... ಅಕ್ಕಿಯನ್ನು ಪಡೆಯುಬೇಕೆಂದರೆ ಬತ್ತವನ್ನು ಒನಕೆಯಿಂದ ಕುಟ್ಟಿ ಸಿಪ್ಪೆಯನ್ನು ತೆಗೆದು ಅಕ್ಕಿಯನ್ನು ಪಡೆಯಬೇಕು ... ಬತ್ತವನ್ನು ಒಂದು ಹದದಲ್ಲಿ ಕುಟ್ಟಿದರೆ ಮಾತ್ರ ಅಕ್ಕಿ ಸಿಗುತ್ತದೆ.. ಒನಕೆ ಇದೆ ಎಂದು ಜೋರಾಗಿ  ಕುಟ್ಟಿದರೆ ನಮಗೆ ಸಿಗುವುದು ನುಚ್ಚು ಮಾತ್ರ .. ಅದೇ ರೀತಿ 'ಸಾರ ಸಜ್ಜನರ ಸಂಗವದು ಲೇಸು ಕಂಡಯ್ಯಾ' ಎನ್ನುವ ಹಾಗೆ,ನಾವು ಯಾರ ಸಂಗವನ್ನು ಮಾಡಬೇಕು ಎಂಬುದನ್ನು ಅರಿತಿರಬೇಕು .. ಒಳ್ಳೆಯ ವಾತವರಣದಲ್ಲಿದ್ದರೆ ಮನುಷ್ಯನಿಗೆ ಎಲ್ಲ ರೀತಿಯಲ್ಲೂ ಒಳ್ಳೆಯದು ಎಂದು ಹೇಳುತ್ತಾಳೆ .. ಅದೇ ರೀತಿ ಹೇಳುತ್ತಾ ,ತಿಳಿಯದೆ ತಪ್ಪು ಮಾಡಿದರೆ ಅದಕ್ಕೆ ಕ್ಷಮೆ ನೀಡಬಹುದು .ಅದರೆ  ತಿಳಿದೂ ತಿಳಿದು ತಪ್ಪು ಎಸಗಿದರೆ,ಕಾದ ಕತ್ತಿಯಲಿ ಕಿವಿ ಕೊಯ್ವರು ಎಂದರೆ ಅವರು ಶಿಕ್ಷೆಗೆ ಒಳಪಡುತ್ತಾರೆ ಎಂದು ಎಚ್ಚರಿಸುತ್ತಾಳೆ... ಅರಿತು ಕೂಡ ದುಃಸಂಗ ಮಾಡಿದರೆ ಅವರು ಎಂದಿಗೂ ಸನ್ಮಾರ್ಗದಲ್ಲಿ ನಡೆಯುವುದಿಲ್ಲ ..
ವಿಚಾರವಂತರ,ಅನುಭಾವಿಗಳ,ಶರಣರ  ಸಂಗ ಮಾಡಿದರೆ ಅಕ್ಕಿಯನ್ನು ಪಡೆದಂತೆ ಜೀವನ ರಸಮಯವಾಗಬಹುದು ,ಇಲ್ಲದಿದ್ದರೆ ನುಚ್ಚು ಪಡೆದಂತೆ ಕಷ್ಟಕರವಾಗಬಹುದು ಎಂದು ಸಂಕವ್ವೆ ಹೇಳುತ್ತಾಳೆ ..


Monday, 11 March 2013

ವಚನ ಸಿಂಚನ ೬೫:ಹೆಣ್ಣು,ಆಧ್ಯಾತ್ಮ ಶಕ್ತಿ

ಸತ್ವಗೆಟ್ಟಲ್ಲಿ ಕಾಷ್ಟವನೂರಿ ನಡೆಯಬೇಕು
ಮತ್ತತ್ವ ವಿದ್ದಲ್ಲಿ ನಿಶ್ಚಯವ ಹೇಳಲಾಗಿ
ಮಹಾಪ್ರಸಾದವೆಂದು ಕೈಕೊಳಬೇಕು
ಎನ್ನ ಭಕ್ತಿಗೆ ನೀ ಶಕ್ತಿಯಾದ ಕಾರಣ
ಎನ್ನ ಸತ್ಯಕ್ಕೆ ನೀ  ಸತಿಯಾದ ಕಾರಣ
ಎನ್ನ ಸುಖ ದುಃಖ, ನಿನ್ನ ಸುಖ ದುಃಖ ಅನ್ಯವಿಲ್ಲ
ಇದಕ್ಕೆ ಭಿನ್ನ ಬೇಡವೇನು ಹೇಳಾ
ನಿಃಕಳಂಕ ಮಲ್ಲಿಕಾರ್ಜುನ
                        -ಮೋಳಿಗೆಯ ಮಾರಯ್ಯ

ಈ ವಚನದಲ್ಲಿ ಮೋಳಿಗೆಯ ಮಾರಯ್ಯ ತನ್ನ ಪತ್ನಿಯಾದ ಮಹಾದೇವಿಯಮ್ಮ ಹೇಗೆ ತನಗೆ ಆಧ್ಯಾತ್ಮದ ಹಾದಿಯಲ್ಲಿ ಊರುಗೋಲು ಆಗುತ್ತಾಳೆ ಎಂಬುದನ್ನು ಹೇಳುತ್ತಾನೆ.ತನ್ನ ಭಕ್ತಿಗೆ ಆಕೆಯೇ ಶಕ್ತಿ ಮತ್ತು ದೇವರನ್ನು ಕಂಡುಕೊಳ್ಳುವ ಸತ್ಯದಲ್ಲಿ ಆಕೆಯೇ ಸತಿ ಎಂದು ಹೇಳುತ್ತಾ ಗಂಡಿಗೆ ಹೆಣ್ಣಿನ ಅವಶ್ಯಕತೆ ಭಕ್ತಿ ಮಾರ್ಗದಲ್ಲಿ ಹೇಗೆ ಎಂದು ವಿವರಿಸುತ್ತಾನೆ . ಹಾಗೆ ಲೌಕಿಕ ಜೀವನದಲ್ಲಿ ಹೆಂಡತಿ ತನ್ನ ಸುಖ ದುಃಖ ಎರಡನ್ನೂ ಹಂಚಿಕೊಳ್ಳುವ ಸ್ವರೂಪಿಣಿ ಎನ್ನುತ್ತಾ ಶಿವನಲ್ಲಿ ಪ್ರಶ್ನಿಸುತ್ತಾ ನಮ್ಮಿಬ್ಬರಲ್ಲಿ ಯಾವುದೇ ವ್ಯತ್ಯಾಸವಿಲ್ಲ ಎಂದು . ಏಕೆಂದರೆ ಅವರು ದೇವರನ್ನು ಕಂಡುಕೊಳ್ಳುವ ರೀತಿ ಮತ್ತು ಬಾಳ್ವೆ ಮಾಡಿದ ರೀತಿ ಇಬ್ಬರೂ ಸಮನಾಗಿ ಅನುಭವಿಸಿದರು ಎಂದು. ಅಂದರೆ ಇಲ್ಲಿ ೧೨ನೆ ಶತಮಾನದಲ್ಲಿ ಶರಣರು ನೀಡಿದ  ಸ್ತ್ರೀ ಸಮಾನತೆಯನ್ನು ಕೂಡ ಕಾಣಬಹುದು .

Monday, 4 March 2013

ವಚನ ಸಿಂಚನ ೬೪:ಹೆಣ್ಣು,ದೈವ ಸ್ವರೂಪಿಣಿ

ತಾ ಮಾಡಿದ ಹೆಣ್ಣು ತನ್ನ ತಲೆಯನೇರಿತ್ತು
ತಾ ಮಾಡಿದ ಹೆಣ್ಣು ತನ್ನ ತೊಡೆಯನೇರಿತ್ತು
ತಾ ಮಾಡಿದ ಹೆಣ್ಣು ಬ್ರಹ್ಮನ ನಾಲಿಗೆಯನೇರಿತ್ತು
ತಾ ಮಾಡಿದ ಹೆಣ್ಣು ನಾರಾಯಣನ ಎದೆಯನೇರಿತ್ತು
ಅದು ಕಾರಣ ಹೆಣ್ಣು ಹೆಣ್ಣಲ್ಲ
ಹೆಣ್ಣು ರಕ್ಕಸಿಯಲ್ಲ
ಹೆಣ್ಣು ಪ್ರತ್ಯಕ್ಷ ಕಪಿಲಸಿದ್ಧಮಲ್ಲಿಕಾರ್ಜುನ ನೋಡಾ
                               -ಸಿದ್ಧರಾಮೇಶ್ವರ

ಈ ವಚನದಲ್ಲಿ ಸಿದ್ಧರಾಮ ಪುರಾಣದ ಕೆಲವು ನಿದರ್ಶನಗಳ ಮೂಲಕ ಹೆಣ್ಣಿನ ಘನತೆಯನ್ನು ಹೆಚ್ಚಿಸುತ್ತಾನೆ. ಶಿವ ತನಗೆ ಮತ್ತು ಹಲವು ದೇವರುಗಳಿಗೆ ದೇವತೆಗಳನ್ನು ಸೃಷ್ಟಿ ಮಾಡಿದ.. ಗಂಗೆ ಶಿವನ ತಲೆಯ ಮೇಲೆ ಕೂತಳು, ಪಾರ್ವತಿ ಶಿವನ ತೊಡೆಯ ಮೇಲೆ ಸಿಂಗರಿಸಿದಳು. ಸರಸ್ವತಿ ಬ್ರಹ್ಮನ ನಾಲಗೆಯಲ್ಲಿ ಲೀನವಾದಳು. ಲಕ್ಷ್ಮಿ ವಿಷ್ಣುವಿನ ಎದೆಗೆ ಒರಗಿಕೊಂಡಳು. ಇಲ್ಲಿ ದೇವರುಗಳೇ ಹೆಣ್ಣಿನ ಸಂಗವನ್ನು ಬಯಸುವಾಗ. ಇನ್ನು ಹೆಣ್ಣು, ಅದರಲ್ಲೂ ಐಹಿಕ ಹೆಣ್ಣು, ಕೇವಲ ಗಂಡನ ಭೋಗದ ವಸ್ತು ಆಗುವುದಿಲ್ಲ ಅಥವಾ ದೆವ್ವ,ಭೂತಗಳ ಸ್ವರೂಪವಲ್ಲ, ಬದಲಾಗಿ ಆಕೆ ದೈವ ಸ್ವರೂಪ ಎಂದು ಸಿದ್ಧರಾಮ ಹೇಳುತ್ತಾನೆ.ಶರಣರು ಹೆಣ್ಣನ್ನು ಉಚ್ಚ ಸ್ಥಾನದಲ್ಲಿಟ್ಟು ಗೌರವಿಸಿದ್ದರು ಎಂಬುದಕ್ಕೆ ಈ ವಚನ ಸಾಕ್ಷಿ..

ಯತ್ರ ನಾರ್ಯಸ್ತು ಪೂಜ್ಯಂತೆ,ರಮಂತೆ ತತ್ರ ದೇವತಃ ಎಂಬ ಹಾಗೆ ಇಲ್ಲಿ ಸಿದ್ಧರಾಮ ಕೂಡ ಹೆಣ್ಣು ಪೂಜನೀಯ ಎಂದು ಹೇಳುತ್ತಾನೆ ....

(ಅಂತರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ  ಈ ಸಂಚಿಕೆಯನ್ನು ಅಂಥ ದೈವ ಸ್ವರೂಪಿ ಹೆಣ್ಣಿಗೆ ಗೌರವದಿಂದ ಸಮರ್ಪಣೆ)

Monday, 18 February 2013

ವಚನ ಸಿಂಚನ ೬೩:ಆತಿಥ್ಯ

ಏನು ಬಂದಿರಿ ಹದುಳವಿದ್ದಿರೆ ಎಂದಡೆ
ನಿಮ್ಮೈಸಿರಿ ಹಾರಿ  ಹೊಹುದೇ?
ಕುಳ್ಳಿರೆಂದಡೆ ನೆಲಕುಳಿ ಹೊಹುದೇ?
ಒಡನೆ ನುಡಿದಡೆ ಸಿರ,ಹೊಟ್ಟೆಯೊಡೆವುದೇ?
ಕೊಡಲಿಲ್ಲದಿದ್ದಡೊಂದು, ಗುಣವಿಲ್ಲದಿದ್ದಡೆ
ಮೂಗ ಕೊಯ್ವುದ ಮಾಬನೆ
ಕೂಡಲಸಂಗಮದೇವಯ್ಯಾ !!!
                               -ಬಸವಣ್ಣ

ಈ ವಚನದಲ್ಲಿ ಬಸವಣ್ಣ ಶಿವ ಶರಣರಿಗೆ ಇರಬೇಕಾದ ಆತಿಥ್ಯದ ಗುಣ ಲಕ್ಷಣಗಳನ್ನು ವಿವರಿಸುತ್ತಾನೆ..ಮನೆಗೆ ಬಂದ ಅತಿಥಿಗಳನ್ನು ಸೌಜನ್ಯದಿಂದ ಮಾತನಾಡಿಸಿ ಅವರ ಯೋಗ ಕ್ಷೇಮ ವಿಚಾರಿಸಿದರೆ ನಮ್ಮ ಸಿರಿತನ ಹಾರಿ ಹೋಗುತ್ತದೆಯೇ ಎಂದು ಕಟುವಾಗಿ ಪ್ರಶ್ನಿಸುತ್ತಾರೆ...ಅದೇ ರೀತಿ ಅವರನ್ನು ಕುಳಿತು ಕೊಳ್ಳಲು ಆಹ್ವಾನ ನೀಡಿದರೆ,ನೆಲ ತಗ್ಗಿ ಹೋಗುತ್ತದೆಯೇ ಎಂದು ಮತ್ತೊಮ್ಮೆ ಪ್ರಶ್ನಿಸುತ್ತಾ ಮನೆಗೆ ಬಂದವರನ್ನು ಪ್ರೀತಿಯಿಂದ ಮಾತನಾಡಿಸುವುದು ಸೌಜನ್ಯದ ಲಕ್ಷಣ; ಹಾಗೆ ಮಾಡದಿರುವುದು ಮತ್ತು ಕಷ್ಟದಲ್ಲಿರುವವರಿಗೆ ಕೈಲಾದ ಸಹಾಯ ಮಾಡದಿರುವುದು ಸಜ್ಜನರ ಲಕ್ಷಣವಲ್ಲ ಎಂದು ಹೇಳುತ್ತಾನೆ...

ಮೂಗ ಕೊಯ್ಯದೆ ಬಿಡುವನೆ ಎಂದರೆ ಅಂಥವರು ಶಿಕ್ಷಾರ್ಹರು ಎಂದು ಹೇಳುತ್ತಾ ಅಂಥವರು ದೇವರ ಒಲುಮೆಗೆ ಪಾತ್ರರಾಗುವುದಿಲ್ಲ ಎಂದು ಬಸವಣ್ಣ ಹೇಳುತ್ತಾರೆ.

ಇವನಾರವ ಎಂದೆನಿಸದೆ,ಇವನಮ್ಮವ ಎಂದೆನಿಸಯ್ಯಾ ಎಂದು ತನ್ನ ಇನ್ನೊಂದು ವಚನದಲ್ಲಿ ಎಲ್ಲ ವರ್ಗದ ಜನರನ್ನು ಆದರದಿಂದ ಕಾಣು  ಎಂದು ಜಾತಿ ವ್ಯವಸ್ಥೆಯನ್ನು ನಿರ್ಮೂಲನೆ ಮಾಡಲು ಕರೆ ನೀಡಿರುವಂತೆ ಇಲ್ಲಿ ಕೂಡ ಆದರಾತಿಥ್ಯ ಶರಣರ ಗುಣ ಲಕ್ಷಣ ಎಂದು ಸಂಭೋಧಿಸುತ್ತಾನೆ...

Monday, 11 February 2013

ವಚನ ಸಿಂಚನ ೬೨:ಮಡಿ ಮೈಲಿಗೆ ಮತ್ತು ಲಿಂಗ

ಆವವನಾದಡೇನು,
ಶ್ರೀ ಶಿವಲಿಂಗ ದೇವರು ಅಂಗದ ಮೇಲೆ ಉಳ್ಳವರ
ಬಾಯ ತಾಂಬೂಲ ಮೆಲುವೆನು,
ಬಿಲ್ಲುಡೆಯ ಹೊದೆವೆನು,
ಪಾದರಕ್ಷೆಯ ಕಾದು  ಬದುಕುವೆನು,
ನಮ್ಮ ಕೂಡಲಸಂಗಮದೇವ ಅಂಗದಿಂದ ತೊಲಗದೆ ನೆನೆವವರ...
                                         -ಬಸವಣ್ಣ

ಈ ವಚನದಲ್ಲಿ ಬಸವಣ್ಣ ಸಾಂಪ್ರದಾಯಿಕೆ ಮಡಿ ಮೈಲಿಗೆಗಳು  ಅರ್ಥಹೀನ ಎಂದು ಸ್ಪಷ್ಟಪಡಿಸುತ್ತಾರೆ..ಬಸವಣ್ಣನ ಪ್ರಕಾರ ದೈವ ಸಂಕೇತವೂ,ಸಮಾನತೆಯ ಸಂಕೇತವೂ ಆದ ಇಷ್ಟ ಲಿಂಗವನ್ನು ಧರಿಸಿದರೆ  ಅಂಥವನಿಗೆ ಈ ಮಡಿ ಮೈಲಿಗೆಗಳ ಜಂಜಾಟವಿಲ್ಲ ಎಂದು ಹೇಳುತ್ತಾರೆ...ಲಿಂಗ ಧರಿಸಿದವರೆಲ್ಲರು ಉಚ್ಚರು,ಯಾವುದೇ ಬೇಧ ಭಾವವಿಲ್ಲದ ಸಮಾನರು ಅವರು ಎಂದು ಪುಷ್ಟಿಕರಿಸುತ್ತಾ ಅವರಲ್ಲಿ ಯಾವುದೇ ಅಂತರವಿಲ್ಲ ಎಂದು ವಿವರಿಸಲು ಕೆಲವು ನಿದರ್ಶನಗಳನ್ನು ಕೊಡುತ್ತಾರೆ..

ಒಬ್ಬ ವ್ಯಕ್ತಿ ಅಗೆದ ತಾಂಬೂಲ ಇನ್ನೊಬ್ಬನಿಗೆ ಶುಚಿಕರವಲ್ಲ ಮತ್ತು ಅದು ಆತನ ಎಂಜಲು ಎಲ್ಲ ಬೇರೆತದ್ದರಿಂದ ಅದು ಮಲೀನವಾದದ್ದು.ಆದರ ಬಸವಣ್ಣ ಹೇಳುತ್ತಾರೆ ಲಿಂಗಧಾರಿಯೊಬ್ಬ ಅಗೆದು ಬಿಟ್ಟ ತಾಂಬೂಲವನ್ನು  ತಾನು ತಿನ್ನಲು ಸಿದ್ಧ ಎಂದು ಆತ ಅಸ್ಪ್ರುಶ್ಯನೆ ಆಗಿರಲಿ,ಕೆಳ ಜಾತಿಯವನೇ ಆಗಿರಲಿ ಆತ ಲಿಂಗಧಾರಿಯಾಗಿದ್ದರೆ ಆತನ ಬಾಯಿಂದ ತಾಂಬೂಲವನ್ನು  ತಿನ್ನಬಲ್ಲೆ ಅಂದರೆ, ಇಲ್ಲಿ ಎಂಜಲಾದರೇನು ಮಾನಸಿಕ ಶುಚಿರ್ಭೂತರಾದರೆ ಎಲ್ಲವೂ ಶ್ರೇಷ್ಠ  ಎಂದು ಬಸವ ಹೇಳಬೇಕಾದರೆ ಆತನ ಉದ್ದೇಶ ಈ ಮೈಲಿಗೆ ಸಂಪ್ರದಾಯವನ್ನು ಹೋಗಲಾಡಿಸುವುದು ಮತ್ತು ಅದನ್ನು ವಿರೋಧಿಸುವುದು...

 ಅದೇ ರೀತಿ ,ತಾನು ಇನ್ನೊಬ್ಬ ಉಟ್ಟು ಬಿಟ್ಟ ಮಲೀನವಾದ ಬಟ್ಟೆಯನ್ನು ಉಡಲು ಸಿದ್ಧ ಮತ್ತು ಬೇರೆಯವರ ಪಾದರಕ್ಷೆಗಳನ್ನು ಕಾದು ಜೀವನ ಮಾಡಬಲ್ಲೆ,ಅವರು ಯಾವ ಕುಲದವನೇ  ಆಗಿರಲಿ,ಅವರು ಲಿಂಗಧಾರಿಗಳಾಗಿದ್ದರೆ ಸಾಕು ಅವರೆಲ್ಲರೂ ಸಮಾನರು ಎಂದು ಹೇಳುತ್ತಾ ಇಷ್ಟಲಿಂಗವನ್ನು ಸಾಮಾಜಿಕ ಸಮಾನತೆಯ ಕುರುಹು ಎಂದು ಬಿಂಬಿಸುತ್ತಾರೆ.

ಲಿಂಗವನ್ನು ಅಂಗದಲ್ಲಿ ಧರಿಸುವವರು ಎಂದಿಗೂ ದೇವರಿಂದ ಬೇರ್ಪಡುವುದಿಲ್ಲ,ದೇವರೊಡನೆ ಬೆಸುಗೆ ಎಂದಿಗೂ ಇರುತ್ತದೆ,ಅಂಥವರ ಬಾಯಿಂದ ತಾಂಬೂಲವನ್ನು ಪಡೆಯಲು,ಅವರು  ಉತ್ತ ಬಟ್ಟೆಯನ್ನು ತೊಡಲು,ಅವರ ಪಾದರಕ್ಷೆಗಳನ್ನು ಕಾಯಲು ಸಿದ್ಧ,ಇಂಥ ಹೊಂದಾಣಿಕೆಗೆ ಇಳಿಯಲು ಸಿದ್ಧ ಎಂದು ಹೇಳುವ ಪರಿಭಾಷೆಯ ಹಿಂದೆ ಸಮಾನತೆಯ ಸಾರುವ ಉದ್ದೇಶ ಎದ್ದು ಕಾಣುತ್ತದೆ..
ಮತ್ತು ಇಲ್ಲಿ ಗಮನಿಸಬೇಕಾದ ಒಂದು ಅಂಶ ಎಂದರೆ,ಇಲ್ಲಿ ನೀಡಿರುವ ನಿದರ್ಶನಗಳಲ್ಲಿ ಉತ್ಕಟತೆ ಮತ್ತು ತೀಕ್ಷ್ಣತೆ ಒಂದಕ್ಕಿಂತ ಒಂದರಲ್ಲಿ ಹೆಚ್ಚುತ್ತಾ ಹೋಗುತ್ತದೆ..

 

Monday, 4 February 2013

ವಚನ ಸಿಂಚನ ೬೧: "ವೀರ" ಶೈವ

 ಕಲಿಯ ಕೈಯ ಕೈದುವಿನಂತಿರಬೇಕಯ್ಯಾ,
ಎಲುದೋರೆ ಸರಸವಾಡಿದಡೆ   ಸೈರಿಸಬೇಕಯ್ಯಾ,
ರಣದಲ್ಲಿ ತಲೆ ಹರಿದು ನೆಲಕ್ಕೆ ಬಿದ್ದು
ಬೊಬ್ಬಿಡಲದಕ್ಕ ಒಲಿವ ಕೂಡಲಸಂಗಮದೇವಾ !!!
                       -ಬಸವಣ್ಣ

ಈ ವಚನದಲ್ಲಿ ಬಸವಣ್ಣನವರು,ಶಿವನನ್ನು ಒಲಿಸಿಕೊಳ್ಳಬೇಕಾದರೆ ವೀರತೆಯ,ಶೌರ್ಯತೆಯ ಪ್ರದರ್ಶನ ಕೆಲವೊಮ್ಮೆ ಅನಿವಾರ್ಯ ಆಗಬಹುದು ಎಂದು ವಿವರಿಸುತ್ತಾರೆ...ಪ್ರತಿಯೊಬ್ಬ ಶಿವಶರಣನು ವೀರನ ಕೈಯ ಖಡ್ಗದಂತಿರಬೇಕು, ಚರ್ಮ ಸುಲಿದು ಮೂಳೆ ಕಾಣಿಸುವಂತಿದ್ದರೂ ಅದನ್ನು ಸೈರಿಸಿಕೊಳ್ಳುವಂತಿರಬೇಕು,ಯುದ್ಧದಲ್ಲಿ ರುಂಡ ಮುಂಡ  ಬೇರೆ ಬೇರೆಯಾಗಿ ,ತಲೆಯು ವೀರ ಯೋಧನ ಹಾಗೆ "ಹರ ಹರ ಮಹಾದೇವಾ" ಎಂದು ಬೊಬ್ಬೆ ಇಟ್ಟಾಗ ಕೂಡಲಸಂಗಮದೇವ ಒಲಿಯುತ್ತಾನೆ ಎಂದು ಬಸವಣ್ಣ ಹೇಳುತ್ತಾರೆ.

ಈ ವಚನದಲ್ಲಿ ಗಮನಿಸಬೇಕಾದ ಒಂದು ಅಂಶ ಅಂದರೆ,೧೨ನೆ ಶತಮಾನದಲ್ಲಿ ಕಲ್ಯಾಣದಲ್ಲಿದ್ದ ಸಾಮಾಜಿಕ ಪರಿಸ್ಥಿತಿ,ಕಲ್ಯಾಣ ಕ್ರಾಂತಿಯ ಹಿನ್ನೆಲೆಯಲ್ಲಿ ಶಿವ ಶರಣರಿಗೆ ಬಿಜ್ಜಳ ಅರಸನ ಕಡೆಯವರಿಂದ ಉಪಟಳ ಬಹಳ ಇತ್ತು..ಆದ್ದರಿಂದ ತಮಗೆ ಯಾವುದೇ ಸಂದರ್ಭದಲ್ಲಿ ತೊಂದರೆ ಬರಬಹುದೆಂಬ ನಿರೀಕ್ಷೆಯಲ್ಲಿ ಬಸವಣ್ಣ ಕಲ್ಯಾಣದ ಶರಣರಿಗೆ ಎಚ್ಚರಿಕೆ ನೀಡಿದಂತಿದೆ ಈ ವಚನ...ಹರಳಯ್ಯ ಮತ್ತು ಮಧುವರಸನನ್ನು ಕೊಂದಿದ್ದು ಶರಣರಿಗೆ ನೀಡಿದ ತೊಂದರೆಯ ಒಂದು  ನಿದರ್ಶನ..

ಇನ್ನೊಂದು ಸಂಗತಿ ಅಂದರೆ ಶಿವನ ಆರಾಧಕರಾದ ಶೈವರು ಬಸವಣ್ಣನ ಕಾಲಕ್ಕೂ ಹಿಂದಿನಿಂದಲೂ ಇದ್ದರು ಮತ್ತು ಆ ಧರ್ಮವನ್ನು ಬಸವಣ್ಣ ಕೆಲವು ರೂಪುರೇಷೆಗಳಿಂದ ಪುನಶ್ಚೇತನಗೊಳಿಸಿದರು ಎಂದರೆ ತಪ್ಪಾಗಲಾರದು..ಇಷ್ಟಲಿಂಗವನ್ನು ನೀಡಿದರು,ಗುರು ಲಿಂಗ ಜಂಗಮ ಎಂಬ ತ್ರಿವಿಧವನ್ನು ಹುಟ್ಟು ಹಾಕಿದರು. ವೀರಶೈವ ಎಂಬ ಪದದ ಬಳಕೆ ಯಾರ ವಚನಗಳಲ್ಲೂ ಅಷ್ಟಾಗಿ ಕಂಡು ಬರುವುದಿಲ್ಲವಾದರೂ,ಈ ವಚನದಲ್ಲಿ ಶಿವ ಶರಣರಿಗೆ "ವೀರ"ರಾಗಿ ಇರಬೇಕೆಂದು ಉತ್ತೇಜಿಸುತ್ತಾರೆ .. ಈ ವಚನದಂತೆ ವೀರನಾದ ಶೈವ  "ವೀರಶೈವ" ಆಗಿರಬಹುದೇ ???



 

Thursday, 24 January 2013

ವಚನ-ಸಿಂಚನ ೬೦:ಶರಣ ಸತಿ - ಲಿಂಗ ಪತಿ

ಭವಿಸಂಗವಳಿದು ಶಿವಭಕ್ತನಾದ ಬಳಿಕ
ಭಕ್ತಂಗೆ ಭವಿಸಂಗ ಅತಿಘೋರ ನರಕ !
ಶರಣ ಸತಿ - ಲಿಂಗ ಪತಿಯಾದ ಬಳಿಕ
ಶರಣಂಗೆ ಸತಿಸಂಗ ಅತಿಘೋರ ನರಕ !
ಚೆನ್ನಮಲ್ಲಿಕಾರ್ಜುನ,
ಲಿಂಗೈಕ್ಯಂಗೆ ಪ್ರಾಣಗುಣ ಅಳಿಯದವರ ಸಂಗವೇ ಭಂಗ !
                                              -ಅಕ್ಕಮಹಾದೇವಿ

ಈ ವಚನದಲ್ಲಿ ಅಕ್ಕಮಹಾದೇವಿ ಶರಣ ಸತಿ-ಲಿಂಗ ಪತಿ ಎಂಬ ಅಂಶವನ್ನು ಪ್ರತಿಪಾದಿಸುತ್ತಾಳೆ.ಅಲ್ಲದೆ ತಾನೂ ಕೂಡ ಅದೇ ರೀತಿ ಬದುಕಿದವಳು ಅಕ್ಕ.ಚೆನ್ನಮಲ್ಲಿಕಾರ್ಜುನನೇ  ತನ್ನ ಪತಿ ಎಂದು ಭಾವಿಸಿ ಶಿವ ಸ್ವರೂಪವಾದ ಲಿಂಗವನ್ನು ಆರಾಧಿಸಿದವಳು  ಅಕ್ಕ...

ಲೌಕಿಕ ಸುಖವನ್ನು ಬಿಟ್ಟು ಸಂಸಾರ ಬಂಧನಕ್ಕೆ ಹೊಳಗಾಗದೆ ಎಲ್ಲವನ್ನೂ ತೊರೆದು ಶಿವ ಭಕ್ತನಾದ ಮೂರ್ತರೂಪನು,ಮತ್ತೆ ಭವಿಯ ಸಂಗವನ್ನು ಬಯಸುವುದು ನರಕವಿದ್ದಂತೆ ಎಂದು ಹೇಳುವ ಅಕ್ಕಮಹಾದೇವಿ ಮುಂದುವರೆಸುತ್ತಾ ಭಕ್ತನೇ ಸತಿ,ಲಿಂಗವೇ ಪತಿ ಎಂದು ಭಾವಿಸಿರುವ ಭಕ್ತನಿಗೆ ಹೆಣ್ಣಿನ ಮೇಲೆ ವ್ಯಾಮೋಹ ಆದರೆ ಅದು ಘೋರ ತಪ್ಪು,ಅದು ನರಕವಿದ್ದಂತೆ ಎಂದು ಚೆನ್ನಮಲ್ಲಿಕಾರ್ಜುನನಲ್ಲಿ ಹೇಳುತ್ತಾಳೆ..
ಲಿಂಗೈಕ್ಯಂಗೆ  ಅಂದರೆ ಲಿಂಗದೊಡನೆ ಸಂಭದ ಬೆಸೆಯುವವನು ಅಂದರೆ ಲಿಂಗದೊಡನೆ ಒಂದುಗೂಡುವವನಿಗೆ ಪ್ರಾಣಗುಣ ಅಳಿಯದವರ ಅಂದರೆ ಆತ್ಮವನ್ನು,ಪ್ರಾಣವನ್ನು ಬಿಡಲು ಒಲ್ಲದವನ ಸಂಗವೇ ಅಡಚಣೆ  ಇದ್ದ ಹಾಗೆ ಹೇಳುತ್ತಾ ಅಂಥವನ ಸಂಗದಿಂದ ಹೊರಬಂದರೆ ಮಾತ್ರ ಭಕ್ತನೊಬ್ಬ ದೇವರನ್ನು ಕಾಣಲು ಸಾಧ್ಯ ಎಂದು ಅಕ್ಕಮಹಾದೇವಿ ಹೇಳುತ್ತಾಳೆ...

ಅಕ್ಕಮಹಾದೇವಿ ಕೂಡ ಸಂಸಾರ ಬಂಧನದಿಂದ ಹೊರ ಬಂದು ಚೆನ್ನಮಲ್ಲಿಕಾರ್ಜುನನನ್ನು ಅರಸುತ್ತಾ ಆಧ್ಯಾತ್ಮದ ಮೂರ್ತಿಯಾಗಿ ಮೆರೆದವಳು...

 

Monday, 14 January 2013

ವಚನ ಸಿಂಚನ ೫೯:ಆಸೆ-ಆಮಿಷ ಮತ್ತು ಭಕ್ತಿ

ಆಸೆಗೆ ಸತ್ತುದು ಕೋಟಿ !
ಆಮಿಷಕ್ಕೆ ಸತ್ತುದು ಕೋಟಿ !
ಹೊನ್ನು-ಹೆಣ್ಣು-ಮಣ್ಣಿಂದು ಸತ್ತುದು ಕೋಟಿ !
ಗುಹೇಶ್ವರ,
ನಿಮಗಾಗಿ ಸತ್ತವರನಾರನೂ ಕಾಣೆ
                                       -ಅಲ್ಲಮಪ್ರಭು


ಈ ವಚನದಲ್ಲಿ ಅಲ್ಲಮ ಪ್ರಭು ಮನುಷ್ಯ ಆಸೆಗಳ ಬೆನ್ನತ್ತಿ  ಹೋಗುವ ಅವನ ದುರ್ಭುದ್ದಿಯನ್ನು ವಿವರಿಸುತ್ತಾನೆ... ಮನುಷ್ಯ ಆಸೆ ಮತ್ತು ಪರನೊಬ್ಬ ನೀಡುವ  ಆಮಿಷಕ್ಕೆ ತನ್ನ ನೈತಿಕತೆ ಯನ್ನು ಕಳೆದು ಕೊಳ್ಳುತ್ತಿದ್ದಾನೆ.ಈ ರೀತಿ ಆಸೆ ಆಮಿಷಕ್ಕೆ ಬಲಿ  ಆದವರು ಕೋಟಿಗಟ್ಟಲೆ ಜನರು...ಇದೆ ರೀತಿ ಹೊನ್ನು,ಹೆಣ್ಣು,ಮಣ್ಣಿನ ಹಿಂದೆ ಹೋಗಿ ನೂರಾರು ಜನ ಬಲಿಯಾದರು.. ಈ  ವಚನದಲ್ಲಿ ಸತ್ತುದು ಕೋಟಿ ಅಂದರೆ ಮನುಷ್ಯನ ನೈತಿಕತೆ ,ಅವನ ಧರ್ಮ ಮತ್ತು ಸಂಸ್ಕಾರ ಎಂದು ಅರ್ಥೈಸಿಕೊಳ್ಳಬಹುದು... ಹೀಗೆ ಹೇಳುತ್ತಾ ಗುಹೇಶ್ವರನಲ್ಲಿ ನಿನಗಾಗಿ ಸತ್ತವರು ಒಬ್ಬರೂ ಇಲ್ಲ ಎಂದು ಹೇಳುತ್ತಾನೆ..ಅಂದರೆ ಇಲ್ಲಿ ಗುಹೇಶ್ವರನಲ್ಲಿ ಭಕ್ತಿಯನ್ನು ಅರಸಿಕೊಂಡು ಹೋದವನು ಒಬ್ಬನೂ ಇಲ್ಲ ಅಥವಾ ದೇವರನ್ನು ಕಂಡುಕೊಳ್ಳುವ ಪ್ರಯತ್ನವನ್ನು ಒಬ್ಬನೂ  ಮಾಡಲಿಲ್ಲ ಎಂದು ಅಲ್ಲಮ ವಿಷಾದ ವ್ಯಕ್ತ ಪಡಿಸುತ್ತಾನೆ...

ಅಂದರೆ ಈ ವಚನದಲ್ಲಿ ಅಲ್ಲಮ ಭಕ್ತಿಯ ಮಾರ್ಗದೆಡೆ ಹೋಗಿ ಎಂದು ವಿನಂತಿಸಿ ಕೊಳ್ಳುವ ಹಾಗೆ ಇದೆ...

ಹೆಣ್ಣು,ಹೊನ್ನು ,ಮಣ್ಣು ಇವುಗಳನ್ನು ಮಾಯೆ ಎಂದು ಹೇಳುತ್ತಾ ಇವೆಲ್ಲದಕ್ಕಿಂತ ಮನದ ಆಸೆಯೇ ಮಾಯೆ ಎಂದು  ಅಲ್ಲಮ  ತನ್ನಇನ್ನೊಂದು  ವಚನದಲ್ಲಿ ಹೇಳುತ್ತಾನೆ...ಇದೆ ರೀತಿ ಹಲವಾರು ವಚನಕಾರರು ಈ ಮೂರು ವಸ್ತುಗಳನ್ನು ತಮ್ಮ ವಚನದಲ್ಲಿ ಬಳಸಿಕೊಂಡಿದ್ದಾರೆ ಮತ್ತು ಇದಕ್ಕೆ ಸಮನಾದ ಭಾವವನ್ನೇ ಅವರುಗಳು ನೀಡಿದ್ದಾರೆ...