Monday 13 May 2013

ವಚನ ಸಿಂಚನ ೬೭:ಕಾಯಕ ನಿಷ್ಠೆ

ಕಾಯಕದಲ್ಲಿ ನಿರತನಾದಡೆ
ಗುರು ದರ್ಶನವಾದಡು ಮರೆಯಬೇಕು,
ಲಿಂಗ ಪೂಜೆಯಾದಡು ಮರೆಯಬೇಕು,
ಜಂಗಮ ಮುಂದಿದ್ದಡು ಹಂಗು ಹರಿಯಬೇಕು
ಕಾಯಕವೇ ಕೈಲಾಸವಾದ ಕಾರಣ
ಅಮಲೇಶ್ವರಲಿಂಗವಾಯಿತ್ತಾದಡು ಕಾಯಕದೊಳಗು. 
                              -ಆಯ್ದಕ್ಕಿ ಮಾರಯ್ಯ

ಕಾಯಕಕ್ಕೆ ಮಹತ್ವ ಕೊಡುವ ಈ ವಚನದಲ್ಲಿ ಆಯ್ದಕ್ಕಿ ಮಾರಯ್ಯ , ಗುರು,ಲಿಂಗ,ಜಂಗಮ ಎಂಬ ತ್ರಿವಿಧಕ್ಕಿಂತ ಕಾಯಕವೇ ಶ್ರೇಷ್ಠ ಎಂದು ಬಿಂಬಿಸುತ್ತಾನೆ .. ಕಾಯಕದಲ್ಲಿ ನಿರತನಾಗಿರುವವನಿಗೆ ಬೇರೆ ಇನ್ನೇನು ಕಾಣಬಾರದು ಎಂದು ಹೇಳುತ್ತಾನೆ .. ತನ್ನ ಗುರು ಬಂದರೂ ಕೂಡ ,ತನ್ನ  ಕಾಯಕಕ್ಕೆ ತೊಡಕಾಗಬಾರದು. ಶರಣರಿಗೆ ಗುರುವಿನ ದರ್ಶನ ಮಂಗಳಕರವಾದದ್ದು,ಆದರೂ ಇಲ್ಲಿ ಗುರುವಿಗಿಂತ ಕಾಯಕಕ್ಕೆ ಪ್ರಾಮುಖ್ಯತೆ ಕೊಡುತ್ತಾನೆ ಮಾರಯ್ಯ .
 ಅದೇ ರೀತಿ ,ಲಿಂಗ ಪೂಜೆ ಸಮಯ ಆದರೂ ಕೂಡ ತನ್ನ ಕಾರ್ಯ ಮೊದಲು ಮುಗಿಸುವುದು ಲೇಸು ಎಂದು ಅಭಿಪ್ರಾಯ ವ್ಯಕ್ತ ಪಡಿಸುತ್ತಾನೆ. ತಾನು ಕೆಲಸದಲ್ಲಿ ನಿರತನಾಗಿದ್ದಾಗ ಜಂಗಮರಿಗೆ ಕಾಣಿಕೆ ಅರ್ಪಿಸುವುದು ಕೂಡ ತರವಲ್ಲ,ಅದಕ್ಕಿಂತ ಅವನ ಕಾಯಕ ಮುಖ್ಯ ಎನ್ನುತ್ತಾನೆ ..

ಈ ವಚನದಲ್ಲಿ ಮಾರಯ್ಯ ಕಾಯಕ ಯೋಗಿಯ ಶ್ರಮಕ್ಕೆ ಮೆಚ್ಚುಗೆ ವ್ಯಕ್ತ ಪಡಿಸುತ್ತಾನೆ. ಅಲ್ಲದೆ ,ಹೊಲದಲ್ಲಿ  ಅಕ್ಕಿ ಆಯುವ ತನ್ನ ವೃತ್ತಿಯಲ್ಲಿ ತಾನು ಕೈಲಾಸವನ್ನು ಕಾಣುತ್ತೇನೆ ಎಂದು ಹೇಳುತ್ತಾನೆ.ಇಲ್ಲಿ ತನ್ನ ಕಾಯಕದಿಂದ ವ್ಯಕ್ತಿಯೊಬ್ಬ ದೇವರನ್ನು ಮತ್ತು ದೇವರ ಅಸ್ತಿತ್ವವನ್ನು ಅನುಭವಿಸಬಹುದು ಮತ್ತು ತನ್ನ ವೃತ್ತಿಯಿಂದ ದೇವರನ್ನು ಕಂಡುಕೊಳ್ಳಬಹುದು  ಎನ್ನುತ್ತಾನೆ .
ಈ ವಚನ ಶರಣರು ಕಾಯಕಕ್ಕೆ ನೀಡಿದ ಮಹತ್ವವನ್ನು ಸಾರುತ್ತದೆ ..

ಇಲ್ಲಿ ಗಮನಿಸಬೇಕಾದ ಅಂಶ ಎಂದರೆ "ಕಾಯಕವೇ ಕೈಲಾಸ"ಎಂಬ ನುಡಿಯನ್ನು  ಬಸವಣ್ಣ ಅಲ್ಲದೆ ಇನ್ನು ಅನೇಕ ವಚನಕಾರರು ತಮ್ಮ ವಚನಗಳಲ್ಲಿ ಬಳಸಿದ್ದಾರೆ.

2 comments:

  1. ಆಯ್ದಕ್ಕಿ ಮಾರಯ್ಯನವರ ಬಗ್ಗೆ ಒಮ್ಮೆ ನಮ್ಮ ಕನ್ನಡ ಮಾಸ್ತರರು ಉಲ್ಲೇಖಿಸಿದ್ದು ಈಗಲೂ ನೆನಪಿದೆ. ಅವರ ನಾಮಾಂಕಿತ ಅಮಲೇಶ್ವರಲಿಂಗ ಎಲ್ಲಿದೆ ಎನ್ನುವನ್ನು ನಾನು ಹುಡುಕಿ ನೋಡುತ್ತೇನೆ. ಕಾಯಕದಲ್ಲಿ ನಿರಂತರಾದವಿಗೆ ಬೇರೆಲ್ಲೂ ದೃಷ್ಟಿ ಹೋಗಲೇ ಬಾರದು ಎಂದು ಎಚ್ಚರಿಸುವ ವಚನವಿದು.

    ReplyDelete
  2. ಕೆಲಸದ ಮಹತ್ವವನ್ನು ಶರಣರು ತುಂಬಾ ಚನ್ನಾಗಿ ವಿವರಿಸಿದ್ದಾರೆ.

    ReplyDelete