Sunday 8 January 2012

ವಚನ-ಸಿಂಚನ ೧೯:ಅರಿವು ಮತ್ತು ಕಷ್ಟ

ಗಂಧ ವೃಕ್ಷವ ಕಡಿದಲ್ಲಿ
ನೊಂದೆನೆಂದು ಗಂಧವ ಬಿಟ್ಟಿತ್ತೆ ಅಯ್ಯಾ?
ಚಂದ ಸುವರ್ಣವ ತಂದು ಕಾಸಿ ಬದಿಡದೆ
ನೊಂದೆನೆದು ಕಳಂಕ ಹಿಡಿಯಿತ್ತೆ  ಅಯ್ಯಾ?
ಸಂದು ಸಂದು ಕಡಿದು ಕಬ್ಬು ಯಂತ್ರದಲ್ಲಿಟ್ಟು ತಿರುಹಿ ಕಾಸಿದಡೆ,
ನೊಂದೆನೆಂದು ಸಿಹಿಯಾಗುವುದ ಬಿಟ್ಟಿತ್ತೆ ಅಯ್ಯಾ?
ತಂದು ತಂದು ಭಾವ ಕಟ್ಟಿಬಿಟ್ಟಡೆ ,
ನಿಮ್ಮರಿವು ಬಿಟ್ಟೆನೆ ಅಯ್ಯಾ,ಕಪಿಲಸಿದ್ಧಮಲ್ಲಿಕಾರ್ಜುನಾ !!!
                                             -ಸಿದ್ಧರಾಮೇಶ್ವರ

 ಶ್ರೀ ಗಂಧದ ಮರಕ್ಕೆ ಕೊಡಲಿ ಪೆಟ್ಟು ಕೊಟ್ಟು ಕೊರಡನ್ನು ತಂದು ಕಲ್ಲಿನಲ್ಲಿ ಆ ಕೊರಡನ್ನು ತೇಯ್ದರೆ ಮಾತ್ರ ಅದು ಸುವಾಸನೆ  ಭರಿತ ಗಂಧವನ್ನು ನೀಡಬಲ್ಲದು.ಪೆಟ್ಟು ತಿಂದು ನೊಂದುಕೊಂಡು ಅದು ಗಂಧವನ್ನು ಬಿಡದೆ ಇದ್ದೀತೆ?
ಅದೇ ರೀತಿ ಚಿನ್ನವನ್ನು ಕಾಸಿ ಅದನ್ನು ತಕ್ಕ ಆಕಾರಕ್ಕೆ ಬರುವಂತೆ ಮಾಡಲು ಅಕ್ಕಸಾಲಿಗ ಅದನ್ನು ಬಡಿಯುತ್ತಾನೆ,ಅವನ ಬಡಿಗೆಯ ನೋವಿಗೆ ನೊಂದುಕೊಂಡು ಸುವರ್ಣವು ತನ್ನ ಕಳಂಕವನ್ನು ಹಿಡಿಯುವುದೇ ?
ಹಾಗೆ ಕಬ್ಬನ್ನು ಕೂಡ ತುಂಡು ತುಂಡು ಮಾಡಿ ಗಾಣದಲ್ಲಿ ಹಾಕಿದರೆ ಮಾತ್ರ ಕಬ್ಬಿನ ಹಾಲಿನ ಸವಿಯನ್ನು ಸವಿಯಲು ಸಾಧ್ಯ,ನಂತರ ಅದನ್ನು ಕಾಸಿದರೆ ಮಾತ್ರ ಬೆಲ್ಲ ಮಾಡಲು ಸಾಧ್ಯ,ಹಾಗಂತ ಅ ಕಬ್ಬು  ನೊಂದುಕೊಂಡರೆ ಸಿಹಿಯಾಗದೆ ಇರುವುದೇ?
ಹಾಗೆ ಮನುಷ್ಯ ಕೂಡ ತನ್ನ ಜೀವನದಲ್ಲಿ ಕಷ್ಟವನ್ನು ಎದುರಿಸಿದರೆ ಇನ್ನೊಬ್ಬರಿಗೆ ಮಾದರಿ ಆಗಬಲ್ಲ,ಮತ್ತು ಸಮಾಜದಲ್ಲಿ ಗಟ್ಟಿಯಾಗಿ ನೆಲೆ ನಿಲ್ಲಬಲ್ಲ..ಕಷ್ಟಗಳನ್ನು ಎದುರಿಸಿದರೆ ಅವನ ಭವಿಷ್ಯ ಚೆನ್ನಾಗಿ ರೂಪುಗೊಳ್ಳುತ್ತದೆ..ಎಂಥ ಕಷ್ಟ ಬಂದರೂ ನಿಮ್ಮ ಅರಿವನ್ನು ಬಿಡುವುದಿಲ್ಲ  ಎಂದು ಕಪಿಲ ಸಿದ್ಧ ಮಲ್ಲಿನಾಥನಲ್ಲಿ ಸಿದ್ಧರಾಮಣ್ಣ ಬೇಡಿಕೊಳ್ಳುತ್ತಾನೆ.



1 comment:

  1. ತುಂಬಾ ಒಳ್ಳೆಯ ವಚನ, ಕೇಳಿರಲಿಲ್ಲ ಓದಿರಲಿಲ್ಲ.. ಈಗ ಓದಿಸಿದ್ದೀರಿ ಅರ್ಥ ಸಹಿತ. ಧನ್ಯವಾದ.

    ReplyDelete