Sunday, 29 January 2012

ವಚನ ಸಿಂಚನ ೨೨:ನೀರು ಮತ್ತು ಮರ

ನೀರ ಕಂಡಲ್ಲಿ ಮುಳುಗವರಯ್ಯಾ
ಮರನ ಕಂಡಲ್ಲಿ ಸುತ್ತುವರಯ್ಯಾ
ಬತ್ತುವ ಜಲವ ಒಣಗುವ ಮರವ ಮೆಚ್ಚಿದವರು 
ನಿಮ್ಮ ನೆತ್ತಬಲ್ಲರು ಕೂಡಲಸಂಗಮದೇವಾ !!!
                                  -ಬಸವಣ್ಣ 

ಇಲ್ಲಿ ಬಸವಣ್ಣನವರು ಜನರಲ್ಲಿ ಮನೆ ಮಾಡಿರುವಂತಹ ಮೂಢ ನಂಬಿಕೆಗಳನ್ನು ಗಾಢವಾಗಿ ವಿರೋಧಿಸುತ್ತಾರೆ..ನೀರು ಕಂಡಾಗ ಮುಳುಗುವುದು ,ಮರ ಕಂಡಾಗ ಸುತ್ತುವುದು ಇದು ಈಗಲೂ ಜನರು  ರೂಢಿಸಿ ಕೊಂಡಿರುವ ಕ್ರಿಯೆಗಳು.ಇವುಗಳನ್ನು ಬಸವಣ್ಣ ೧೨ನೆ ಶತಮಾನದಲ್ಲೇ ವಿರೋಧಿಸಿದ್ದರು.ನೀರು ಯಾವಾಗ ಬೇಕಾದರೂ ಬತ್ತಿ ಹೋಗುತ್ತದೆ,ಅಲ್ಲದೆ ಮರ ಕೂಡ ಒಂದು ದಿನ ತನ್ನ ಆಯುಷ್ಯ ಕಳೆದು ಕೊಂಡು ಒಣಗಿ ಹೋಗುತ್ತದೆ,ಇಂಥ ನೀರು ಮರವನ್ನು ಮೆಚ್ಚಿದವರು ಲೋಕದ  ಸರ್ವಕ್ಕೂ ಕಾರಣನಾದ,ಸರ್ವ ಜೀವಕ್ಕೂ ಕಾರಣನಾದ ಪರಮೇಶ್ವರನನ್ನು ಹೇಗೆ ಅರಿಯಬಲ್ಲರು ?,ಹೇಗೆ ಕಂಡು ಕೊಳ್ಳುವರು? ಎಂದು ಸಂಗಮ ದೇವನಲ್ಲಿ ಕೇಳುತ್ತಾರೆ.

Sunday, 22 January 2012

ವಚನ ಸಿಂಚನ ೨೧:ದೇವರು ಮತ್ತು ಗಂಡ

ದೇವನೊಬ್ಬ ನಾಮ ಹಲವು ;
ಪರಮ ಪತಿವ್ರತೆಗೆ ಗಂಡನೊಬ್ಬ ;
ಮತ್ತೊಂದಕ್ಕೆರಗಿದಡೆ ಕಿಮಿಮೂಗ ಕೊಯ್ವನು !
ಹಲವು ದೈವನ ಎಂಜಲು ತಿಂಬುವರನೇನೆ೦ಬೆ
ಕೂಡಲಸಂಗಮದೇವಾ !!!
                                       -ಬಸವಣ್ಣ

ಇಲ್ಲಿ ಬಸವಣ್ಣನವರು ಇಡೀ ಭೂ ಮಂಡಲಕ್ಕೆ ಒಬ್ಬನೇ ದೈವ,ಪ್ರತಿ ಜೀವ ಜಂತುಗಳ ನಡವಳಿಕೆಗೆ ಅವನೇ ಕಾರಣಕರ್ತ..ಅದೇ ರೀತಿ ಪತಿವ್ರತೆ ಆದ ಹೆಣ್ಣಿಗೆ ಒಬ್ಬನೇ ಗಂಡ.ಅವಳು ಇನ್ನೊಂದು ಗಂಡನ ಸಂಗವನ್ನು ಬಯಸುವುದಿಲ್ಲ."ಛಲ ಬೇಕು ಶರಣಂಗೆ ಪರಸತಿಯನೊಲ್ಲೆನೆಂಬ" ಎಂದು ಗಂಡಸಿಗೆ ಹೇಳಿದರೆ,ಈ ವಚನದಲ್ಲಿ "ಪರಮ ಪತಿವ್ರತೆಗೆ ಗಂಡನೊಬ್ಬ " ಎಂದು ಹೆಣ್ಣಿಗೆ ಹೇಳುತ್ತಾರೆ.. ಸತಿ ಪತಿಗಳಲ್ಲೊಂದಾದ ಭಕ್ತಿ ಎಂದು ಇನ್ನೊಂದು ವಚನದಲ್ಲಿ  ಹೇಳಿದ ಹಾಗೆ.ಈ ವಚನದಲ್ಲಿ ಹೇಳುವ ಹಾಗೆ ಜಗತ್ತಿಗೆ ಒಬ್ಬನೇ ದೇವರು,ಅದೇ ರೀತಿ ಹೆಣ್ಣಿಗೆ ಒಬ್ಬನೇ ಗಂಡ,ಅವನು ಕೂಡ ಆಕೆಗೆ ದೈವದ ಸಮಾನ.
ಮತ್ತೊಂದಕ್ಕೆರಗಿದಡೆ ಅಂದರೆ ಇಲ್ಲಿ ಪ್ರತಿಯೊಬ್ಬ ಮನುಷ್ಯನು ಬೇರೆ ದೇವರನ್ನು ಪೂಜಿಸುವುದು ಆಗಿರಬಹುದು ಅಥವಾ ಹೆಣ್ಣೊಬ್ಬಳು ಬೇರೆ ಗಂಡನನ್ನು ಬಯಸುವುದು ಆಗಿರಬಹುದು ,ಅಂಥವರ ಕಿವಿ ಮೂಗು ಕೊಯ್ವೆನು ಅಂದರೆ ಅವರು ಶಿಕ್ಷಿಸಲ್ಪಡುತ್ತಾರೆ ಎಂದು ಭಾವಿಸಬಹುದು.ಸಾಕ್ಷಾತ್ ದೈವನೊಬ್ಬ ಇರಬೇಕಾದರೆ ಬೇರೆ ಬೇರೆ ದೇವರುಗಳ ಎಂಜಲು ತಿನ್ನುವವರಿಗೆ ಏನೆಂದು ಹೇಳಬೇಕು ಎಂದು ಬಸವಣ್ಣನವರು ಕೂಡಲಸಂಗಮ ದೇವನಲ್ಲಿ ಕೇಳಿಕೊಳ್ಳುತ್ತಾರೆ..

ಇದೆ ರೀತಿ ಜೇಡರ ದಾಸಿಮಯ್ಯ ಒಂದು ವಚನದಲ್ಲಿ  ಕೇಳುತ್ತಾರೆ"ನಿಮ್ಮ ದಾನವನುಂಡು ಅನ್ಯರ ಹೊಗಳುವ ಕುನ್ನಿಗಳ ನೇನೆoಬೆ ರಾಮನಾಥ !!" ಎಂದು.



Monday, 16 January 2012

ವಚನ-ಸಿಂಚನ ೨೦:ಶಿವ ಪಥ

ಮಡಕೆಯ ಮಾಡುವಡೆ ಮಣ್ಣೇ ಮೊದಲುತೊಡಿಗೆಯ ಮಾಡುವಡೆ ಹೊನ್ನೇ ಮೊದಲು
ಶಿವಪಥವರಿವಡೆ ಗುರುಪಥವೆ ಮೊದಲು
ನಮ್ಮ ಕೂಡಲಸಂಗಮದೇವನ ಅರಿವೊಡೆ ಶರಣರ ಸಂಗವೇ ಮೊದಲು !!!
                                                                        -ಬಸವಣ್ಣ

ಒಂದು ಮಡಕೆ ತಯಾರಿಸಬೇಕಾದರೆ ಮಣ್ಣು ಅತ್ಯವಶ್ಯಕ,ಹಾಗೆ ತೊಡಿಗೆ ಮಾಡಬೇಕೆಂದರೆ ಹೊನ್ನು ಅಷ್ಟೇ ಅವಶ್ಯ.
ಅದೇ ರೀತಿ ಶಿವಪಥವನ್ನು ಅರಿಯಬೇಕು ಅಂದರೆ ಗುರು ಪಥದ ಅರಿವಿರಬೇಕು,ಗುರುವಿನ ಜೊತೆ ಒಡನಾಟದಲ್ಲಿರಬೇಕು.ಗುರುವಿನ ಮಹತ್ವವನ್ನು ಅರಿಯಬೇಕು.
ಆದರೆ ಕೂಡಲಸಂಗಮ ದೇವನನ್ನು ಅರಿಯಬೇಕು ಅಂದರೆ ಶರಣರ ಸಾಂಗತ್ಯ ಮೊದಲು.ಅಂದರೆ ಶರಣರು ಅಷ್ಟು ಅನುಭಾವಿಗಳು,ಸಾತ್ವಿಕರು,ಜ್ಞಾನಿಗಳು ಎಂದು ಬಸವಣ್ಣ ಹೇಳುತ್ತಾರೆ.ಶರಣರು ಅನುಭವದಿಂದ ಅನುಭಾವಿಗಲಾಗಿದ್ದಾರೆ.

Sunday, 8 January 2012

ವಚನ-ಸಿಂಚನ ೧೯:ಅರಿವು ಮತ್ತು ಕಷ್ಟ

ಗಂಧ ವೃಕ್ಷವ ಕಡಿದಲ್ಲಿ
ನೊಂದೆನೆಂದು ಗಂಧವ ಬಿಟ್ಟಿತ್ತೆ ಅಯ್ಯಾ?
ಚಂದ ಸುವರ್ಣವ ತಂದು ಕಾಸಿ ಬದಿಡದೆ
ನೊಂದೆನೆದು ಕಳಂಕ ಹಿಡಿಯಿತ್ತೆ  ಅಯ್ಯಾ?
ಸಂದು ಸಂದು ಕಡಿದು ಕಬ್ಬು ಯಂತ್ರದಲ್ಲಿಟ್ಟು ತಿರುಹಿ ಕಾಸಿದಡೆ,
ನೊಂದೆನೆಂದು ಸಿಹಿಯಾಗುವುದ ಬಿಟ್ಟಿತ್ತೆ ಅಯ್ಯಾ?
ತಂದು ತಂದು ಭಾವ ಕಟ್ಟಿಬಿಟ್ಟಡೆ ,
ನಿಮ್ಮರಿವು ಬಿಟ್ಟೆನೆ ಅಯ್ಯಾ,ಕಪಿಲಸಿದ್ಧಮಲ್ಲಿಕಾರ್ಜುನಾ !!!
                                             -ಸಿದ್ಧರಾಮೇಶ್ವರ

 ಶ್ರೀ ಗಂಧದ ಮರಕ್ಕೆ ಕೊಡಲಿ ಪೆಟ್ಟು ಕೊಟ್ಟು ಕೊರಡನ್ನು ತಂದು ಕಲ್ಲಿನಲ್ಲಿ ಆ ಕೊರಡನ್ನು ತೇಯ್ದರೆ ಮಾತ್ರ ಅದು ಸುವಾಸನೆ  ಭರಿತ ಗಂಧವನ್ನು ನೀಡಬಲ್ಲದು.ಪೆಟ್ಟು ತಿಂದು ನೊಂದುಕೊಂಡು ಅದು ಗಂಧವನ್ನು ಬಿಡದೆ ಇದ್ದೀತೆ?
ಅದೇ ರೀತಿ ಚಿನ್ನವನ್ನು ಕಾಸಿ ಅದನ್ನು ತಕ್ಕ ಆಕಾರಕ್ಕೆ ಬರುವಂತೆ ಮಾಡಲು ಅಕ್ಕಸಾಲಿಗ ಅದನ್ನು ಬಡಿಯುತ್ತಾನೆ,ಅವನ ಬಡಿಗೆಯ ನೋವಿಗೆ ನೊಂದುಕೊಂಡು ಸುವರ್ಣವು ತನ್ನ ಕಳಂಕವನ್ನು ಹಿಡಿಯುವುದೇ ?
ಹಾಗೆ ಕಬ್ಬನ್ನು ಕೂಡ ತುಂಡು ತುಂಡು ಮಾಡಿ ಗಾಣದಲ್ಲಿ ಹಾಕಿದರೆ ಮಾತ್ರ ಕಬ್ಬಿನ ಹಾಲಿನ ಸವಿಯನ್ನು ಸವಿಯಲು ಸಾಧ್ಯ,ನಂತರ ಅದನ್ನು ಕಾಸಿದರೆ ಮಾತ್ರ ಬೆಲ್ಲ ಮಾಡಲು ಸಾಧ್ಯ,ಹಾಗಂತ ಅ ಕಬ್ಬು  ನೊಂದುಕೊಂಡರೆ ಸಿಹಿಯಾಗದೆ ಇರುವುದೇ?
ಹಾಗೆ ಮನುಷ್ಯ ಕೂಡ ತನ್ನ ಜೀವನದಲ್ಲಿ ಕಷ್ಟವನ್ನು ಎದುರಿಸಿದರೆ ಇನ್ನೊಬ್ಬರಿಗೆ ಮಾದರಿ ಆಗಬಲ್ಲ,ಮತ್ತು ಸಮಾಜದಲ್ಲಿ ಗಟ್ಟಿಯಾಗಿ ನೆಲೆ ನಿಲ್ಲಬಲ್ಲ..ಕಷ್ಟಗಳನ್ನು ಎದುರಿಸಿದರೆ ಅವನ ಭವಿಷ್ಯ ಚೆನ್ನಾಗಿ ರೂಪುಗೊಳ್ಳುತ್ತದೆ..ಎಂಥ ಕಷ್ಟ ಬಂದರೂ ನಿಮ್ಮ ಅರಿವನ್ನು ಬಿಡುವುದಿಲ್ಲ  ಎಂದು ಕಪಿಲ ಸಿದ್ಧ ಮಲ್ಲಿನಾಥನಲ್ಲಿ ಸಿದ್ಧರಾಮಣ್ಣ ಬೇಡಿಕೊಳ್ಳುತ್ತಾನೆ.



Sunday, 1 January 2012

ವಚನ ಸಿಂಚನ ೧೮:ಧ್ಯೇಯ

ಹರ ತನ್ನ ಭಕ್ತರ ತಿರಿವಂತೆ ಮಾಡುವ |
ಒರೆದು ನೋಡುವ ಸುವರ್ಣದ ಚಿನ್ನದಂತೆ |
ಅರೆದು ನೋಡುವ ಚಂದನದಂತೆ |
ಅರಿದು ನೋಡುವ ಕಬ್ಬಿನ ಕೋಲಿನಂತೆ |
ಬೆದರದೆ ಬೆಚ್ಚದೆ ಇರ್ದಡೆ ಕರವೆತ್ತಿಕೊಂಬ ನಮ್ಮ ರಾಮನಾಥನು |
                                                        -ಜೇಡರ ದಾಸಿಮಯ್ಯ


ಶಿವ  ತನ್ನ ಭಕ್ತರಿಗೆ ಕಷ್ಟಗಳನ್ನು ಕೊಡುತ್ತಲೇ ಇರುತ್ತಾನೆ...ಅದು ಹೇಗೆ ಇರುತ್ತದೆ ಅಂದರೆ ಅಕ್ಕಸಾಲಿಗ ಒಡವೆ ಮಾಡಲು ಚಿನ್ನವನ್ನು  ಅದಕ್ಕೆ ಒಳ್ಳೆ ರೂಪು ಮತ್ತು ಬಣ್ಣ ಕೊಡಲು ಉಜ್ಜುವಂತೆ ಕ್ಲಿಷ್ಟಕರವಾಗಿರುತ್ತದೆ.ಗಂಧದ ಕೊರಡನ್ನು ಕಲ್ಲಿನಲ್ಲಿ ತೇಯುವಂತೆ ಕಷ್ಟ ವಾಗಿರುತ್ತದೆ..ಕಬ್ಬಿಣ ರಸ ತೆಗೆಯಲು ಗಾಣಕ್ಕೆ ಹಾಕಿ ಹಿಂಡುವಂತೆ ಇರುತ್ತದೆ...ಇಂಥ ಕಷ್ಟಗಳನ್ನು ಸಹಿಸಿ ಹೆದರದೆ ಧೈರ್ಯವಾಗಿ ಇದ್ದರೆ ರಾಮನಾಥನು ಅಂಥವರನ್ನು ಕೈ ಹಿಡಿದು ಎತ್ತಿಕೊಳ್ಳುವನು ಎಂದು ಜೇಡರ(ದೇವರ) ದಾಸಿಮಯ್ಯ ಹೇಳುತ್ತಾನೆ..ಅಂದರೆ ಕಷ್ಟ ಪಡುವವರನ್ನು ದೇವರು ಎಂದಿಗೂ ಕೈ ಬಿಡುವುದಿಲ್ಲ ಎಂದರ್ಥ...