Monday, 12 March 2012

ವಚನ-ಸಿಂಚನ ೨೮:ದಿಟದ ನಾಗ ಮತ್ತು ಜಂಗಮ

ಕಲ್ಲ ನಾಗರ ಕಂಡರೆ ಹಾಲನೆರೆ ಎಂಬರು
ದಿಟದ ನಾಗರ ಕಂಡರೆ ಕೊಲ್ಲು ಕೊಲ್ಲೆಂಬರಯ್ಯಾ...
ಉಂಬ ಜಂಗಮ ಬಂದರೆ ನಡೆ ಎಂಬರು
ಉಣ್ಣದ ಲಿಂಗಕ್ಕೆ ಬೋನವ ಹಿಡಿವರಯ್ಯಾ...
ನಮ್ಮ ಕೂಡಲಸಂಗಮದೇವನ ಶರಣರ ಕಂಡು ಉದಾಶೀನವ
ಮಾಡಿದಡೆ ಕಲ್ಲು ತಾಗಿದ ಮಿಟ್ಟೆಯಂತಪ್ಪರಯ್ಯಾ....
                                   -ಬಸವಣ್ಣ

ಈ ವಚನದಲ್ಲಿ ಬಸವಣ್ಣನವರು ಜನರಲ್ಲಿ ಗೂಡು ಕಟ್ಟಿರುವ ಮೂಢ ನಂಬಿಕೆಗಳು ಮತ್ತು ಇತರೆ ಮನುಷ್ಯರನ್ನು ಕಂಡರೆ ಅವರು ಪಡುವ ಅಸೂಯೆ ಮತ್ತು ಅಸಹನೆಗಳ ಬಗ್ಗೆ ಧ್ವನಿ ಎತ್ತಿದ್ದಾರೆ.ಒಂದು ನಿರ್ಜೀವ ವಸ್ತುವಾದ ಕಲ್ಲಿನ ಹಾವಿನ ವಿಗ್ರಹಕ್ಕೆ ಭಕ್ತಿ ಇಂದ ಹಾಲನ್ನು ಸುರಿಯುವ ಜನ,ನಿಜವಾದ ಹಾವನ್ನು ಕಂಡಾಗ ಅದು ಒಂದು ಮೂಕ ಪ್ರಾಣಿ ಎಂದು ಅರಿಯದೆ ವಿವೇಚನೆ ಇಲ್ಲದೆ ಅದನ್ನು ಸಾಯಿಸಲು ಪ್ರಯತ್ನಿಸುತ್ತಾರೆ.ಅದೇ ರೀತಿ ಉಣ್ಣುವ ಜಂಗಮ ಹಸಿದು ಬಂದಾಗ ಒಂಚೂರು ಕರುಣೆ ಇಲ್ಲದೆ ಆತನಿಗೆ ಏನನ್ನೂ ನೀಡುವುದಿಲ್ಲ,ಬದಲಾಗಿ ತಿನ್ನದ ಲಿಂಗಕ್ಕೆ ನೈವೇದ್ಯ ನೀಡುತ್ತಾರೆ.ಈ ರೀತಿ ನಿರ್ಜೀವ ವಸ್ತುಗಳಿಗೆ ಸುರಿದು ಪೋಲು ಮಾಡುವ ಬದಲು ಹಸಿದವರಿಗೆ ನೀಡಿ ಅದನ್ನು ಸದ್ವಿನಿಯೋಗ ಮಾಡಬಹುದು ಎಂದು ಹೇಳುತ್ತಾರೆ.

ಇಲ್ಲಿ ಶರಣರ ಕಂಡು ಉದಾಸೀನವ ಮಾಡಿದರೆ ಅಂದರೆ ಜೀವಂತ ಹಾವು ಅಥವಾ ಜಂಗಮ ಆಗಿರಬಹುದು ಅಥವಾ ಹಸಿದ ಬಡವನಿರಬಹುದು ಅಥವಾ ಇನ್ನ್ಯಾವುದಾದರು ದೈವ ಸಂಕೇತದ ವಸ್ತು ಎಂದು ಭಾವಿಸಬಹುದು.ಅಂತ ಶರಣರನ್ನು ಕಡೆಗಣಿಸಿದರೆ ಅಂದರೆ ಅವರಿಗೆ ಭಕ್ತಿ ತೋರದಿದ್ದರೆ ಕಲ್ಲು ತಾಗಿದ ಮಣ್ಣಿನ ಗುಡ್ಡೆ ಅಂತೆ ಉಪಯೋಗಕ್ಕೆ ಬಾರದಂತೆ ಇವರ ಭಕ್ತಿಯೂ ಆಗುತ್ತದೆ ಎಂದು ಹೇಳುತ್ತಾರೆ.

ಒಟ್ಟಾರೆಯಾಗಿ ಈ ವಚನದ ಭಾವಾರ್ಥ ಹಸಿದವರಿಗೆ ಇಲ್ಲ ಅನ್ನಬಾರದು ಮತ್ತು ಕಲ್ಲಿಗೆ ನೈವೇದ್ಯೇ ಮಾಡುವ ಬದಲು ಅಂಥವರಿಗೆ ನೀಡಿದರೆ ಅದು ಭಕ್ತಿ ಇಂದ ಕೂಡಿರುತ್ತದೆ ಮತ್ತು ಅದು ಕೂಡಲಸಂಗಮದೇವನಿಗೆ ಅರ್ಪಿಸಿದಂತೆ.




2 comments:

  1. ಗಿರೀಶ್ ಅವರೆ, ತುಂಬಾ ಸುಂದರವಾದ ಒಂದು ವಚನ ಇದು. ಪಠ್ಯವಾಗಿತ್ತು.

    ಎಲ್ಲಾ ವಚನಗಳಿಗೂ ಅರ್ಥ ಸಹಿತ ಬರೆಯುವ ನಿಮ್ಮ ಕೆಲಸ ತುಂಬಾ ಇಷ್ಟ. ಓದುತ್ತಾ ಇರುವಂತೆ ಪ್ರೇರಣೆ :)

    ReplyDelete
    Replies
    1. ಕಿರಣರೆ,ಧನ್ಯೋಸ್ಮಿ.ನೀವು ಓದಿದರೆ ಇನ್ನಷ್ಟು ವಚನಗಳನ್ನು ಅರ್ಥ ಸಮೇತ ಬರೆಯಲು ಅದೇ ಪ್ರೇರಣೆ.

      Delete