Sunday, 25 March 2012

ವಚನ ಸಿಂಚನ ೩೦:ಇಷ್ಟಲಿಂಗ-ಪ್ರಾಣಲಿಂಗ

ಬೆಂಕಿಗೆ ಉರಿ ಮೊದಲೋ,ಹೊಗೆ ಮೊದಲೋ,
ಎಂಬುದನರಿದಲ್ಲಿ ಇಷ್ಟಲಿಂಗ ಸಂಬಂಧಿ,
ಉಭಯವನಳಿದಲ್ಲಿ ಪ್ರಾಣಲಿಂಗ  ಸಂಬಂಧಿ,
ಆ ಉಭಯ ನಷ್ಟವಾದಲ್ಲಿ,
ಏನೂ ಎನಲಿಲ್ಲ, ಜಾಂಬೇಶ್ವರ ..
                 -ರಾಯಸದ ಮಂಚಣ್ಣ 

ಈ ವಚನದಲ್ಲಿ ರಾಯಸದ ಮಂಚಣ್ಣ ಇಷ್ಟಲಿಂಗ ಮತ್ತು ಪ್ರಾಣಲಿಂಗ ಸಂಭಂದದ ಬಗ್ಗೆ ಬೆಂಕಿ ಮತ್ತು ಹೊಗೆಯ ನಿದರ್ಶನದ ಮೂಲಕ ವಿಮರ್ಶಿಸುತ್ತಾರೆ.ಬೆಂಕಿ ಮತ್ತು ಹೋಗೆ ಇವೆರಡರಲ್ಲಿ ಯಾವುದು ಮೊದಲು,ಹೀಗೆ ಬೀಜ ಮತ್ತು ಮರಗಳಲ್ಲಿಯ ಸಂಭಂದವನ್ನು ಅರಿದರೆ ಆತ ಇಷ್ಟಲಿಂಗ ಸಂಭಂದಿ ಆಗುತ್ತಾನೆ.ಇಷ್ಟಲಿಂಗ ಅಂದರೆ ವಿಶ್ವದಾಕಾರದಲ್ಲಿರುವ ಸಾಕಾರ ರೂಪ,ಸಾಮಾಜಿಕ ಸಮಾನತೆಯ ಕುರುಹು.ಇಂಥ ಒಗಟನ್ನು ಅರ್ಥ ಮಾಡಿಕೊಂಡರೆ ಇಡೀ ವಿಶ್ವ ಸ್ವರೂಪವಾದ ಇಷ್ಟಲಿಂಗವನ್ನು ಅರ್ಥೈಸಿಕೊಂಡಂತೆ.ಜೀವಲಿಂಗವಾದ ಇಷ್ಟಲಿಂಗದಲ್ಲಿ ಶಿವನ ಅಸ್ತಿತ್ವ ಇದೆ,ಅದೇ ಪ್ರಾಣಲಿಂಗ.ಇಲ್ಲಿ ಬೆಂಕಿ ಮತ್ತು ಹೋಗೆ,ಬೀಜ ಮತ್ತು ಮರ ಇವುಗಳಲ್ಲಿ ಅಡಗಿರುವ ಶಕ್ತಿಯೇ ಪ್ರಾಣಲಿಂಗ ಎಂದು ಭಾವಿಸಬಹುದು.ಈ ಉಭಯ ವಸ್ತುಗಳು ಇಲ್ಲವಾದರೆ ಅದೇನು ನಷ್ಟವಲ್ಲ ಎಂದು ಹೇಳುತ್ತಾರೆ.

ಇಷ್ಟಲಿಂಗ ಪ್ರಾಣಲಿಂಗ ಮತ್ತು ಭಾವಲಿಂಗಗಳನ್ನು ಸಂಭದಗೊಳಿಸುವುದೇ ಸಂಸ್ಕಾರ...
ಇಷ್ಟಲಿಂಗವು ೧೨ನೆ ಶತಮಾನದ ಕಲ್ಯಾಣ ಕ್ರಾಂತಿಯ ಮುಖ್ಯ ರೂಪವೂ ಹೌದು.


 

Sunday, 18 March 2012

ವಚನ-ಸಿಂಚನ ೨೯:ಅಂತಃಕರಣ

ಹರಿದ ಗೋಣಿಯಲೊಬ್ಬ ಕಳವೆಯ ತುಂಬಿದ
ಇರುಳೆಲ್ಲ ನಡೆದನಾ ಸುಂಕಕ್ಕಂಜಿ
ಕಳವೆಯೆಲ್ಲ ಹೋಗಿ ಬರಿಯ ಗೋಣಿ ಉಳಿಯಿತ್ತು
ಅಳಿಮನದವನ ಭಕ್ತಿ ಇಂತಾಯಿತ್ತು ರಾಮನಾಥಾ....!
                                  -ಜೇಡರ ದಾಸಿಮಯ್ಯ

ಈ ವಚನದಲ್ಲಿ ದೃಢತೆ ಇಲ್ಲದ ಮನಸ್ಸಿನ ಕಳವಳ ಮತ್ತು ಅಂತ ಒಂದು ಮನಸ್ಸಿನ ತೊಳಲಾಟ ಇಲ್ಲಿ ವ್ಯಕ್ತವಾಗಿದೆ  ..ಒಬ್ಬ ರೈತ ತಾನು ಬೆಳೆದ ಭತ್ತವನ್ನು ಮಾರುಕಟ್ಟೆಗೆ ಸಾಗಿಸುವಾಗ ತೆತ್ತಬೇಕಾದ  ಅನಿವಾರ್ಯವಾದ ಸುಂಕವನ್ನು ತಪ್ಪಿಸಲು ರಾತ್ರಿಯಿಡೀ ನಡೆದು ಹೋಗುತ್ತಾನೆ.ಸುಂಕ ತಪ್ಪಿಸಿಕೊಳ್ಳಲು ಹೋಗಿ ಕಷ್ಟ ಪಟ್ಟು ಬೆಳೆದ ಬೆಳೆಯನ್ನೇ ಕಳೆದು ಕೊಳ್ಳುತ್ತಾನೆ.ಇದು ಒಂದು ರೀತಿಯ ಮೂರ್ಖತನವಾದರೆ,ಇನ್ನೊಂದು ರೀತಿಯಲ್ಲಿ ಅಂತಃಕರಣ ಶುದ್ಧವಿಲ್ಲದವನ ಮನಸ್ಸು ಮತ್ತು ಭಕ್ತಿ.

ಇಲ್ಲಿ ಹರಿದ ಗೋಣಿ ಅಂದರೆ ತನ್ನನ್ನು ತಾನು ಅರಿಯದೆ ಅಜ್ಞಾನದಲ್ಲಿ,ಕತ್ತಲೆಯಲ್ಲಿ ಜೀವನ ಸಾಗಿಸುತ್ತಿರುವ ಒಂದು ಮನಸ್ಸು ಮತ್ತು ಸುಂಕಕ್ಕೆ ಅಂಜಿ ರಾತ್ರಿಯೆಲ್ಲ ನಡೆಯುವುದು ಅಂದರೆ ತನ್ನನ್ನು ತಾನು ಅರಿಯಲು ಪ್ರಯತ್ನಿಸದೆ ಇರುವುದು ಎಂದು ಭಾವಿಸಬಹುದು.ಬರಿಯ ಗೋಣಿ ಉಳಿಯಿತ್ತು ಅಂದರೆ ಕೇವಲ ದೇಹ ಉಳಿದಿತ್ತು ಎಂದು ಅರ್ಥೈಸಬಹುದು.. ಅಳಿಮನದವನ ಭಕ್ತಿ ಅಂದರೆ ಯಾವುದೇ ಒಂದು ಕಡೆ ದಿಟ್ಟ ಗುರಿ ಇಲ್ಲದ ಚಂಚಲ ಮನಸ್ಸಿನವನು,ಅವನಲ್ಲಿ ಭಕ್ತಿಯೂ ಕೂಡ ಹಾಗೆ ದೃಢತೆ ಇರುವುದಿಲ್ಲ ಎಂದು ಜೇಡರ(ದೇವರ) ದಾಸಿಮಯ್ಯನವರು ಹೇಳುತ್ತಾರೆ.

Monday, 12 March 2012

ವಚನ-ಸಿಂಚನ ೨೮:ದಿಟದ ನಾಗ ಮತ್ತು ಜಂಗಮ

ಕಲ್ಲ ನಾಗರ ಕಂಡರೆ ಹಾಲನೆರೆ ಎಂಬರು
ದಿಟದ ನಾಗರ ಕಂಡರೆ ಕೊಲ್ಲು ಕೊಲ್ಲೆಂಬರಯ್ಯಾ...
ಉಂಬ ಜಂಗಮ ಬಂದರೆ ನಡೆ ಎಂಬರು
ಉಣ್ಣದ ಲಿಂಗಕ್ಕೆ ಬೋನವ ಹಿಡಿವರಯ್ಯಾ...
ನಮ್ಮ ಕೂಡಲಸಂಗಮದೇವನ ಶರಣರ ಕಂಡು ಉದಾಶೀನವ
ಮಾಡಿದಡೆ ಕಲ್ಲು ತಾಗಿದ ಮಿಟ್ಟೆಯಂತಪ್ಪರಯ್ಯಾ....
                                   -ಬಸವಣ್ಣ

ಈ ವಚನದಲ್ಲಿ ಬಸವಣ್ಣನವರು ಜನರಲ್ಲಿ ಗೂಡು ಕಟ್ಟಿರುವ ಮೂಢ ನಂಬಿಕೆಗಳು ಮತ್ತು ಇತರೆ ಮನುಷ್ಯರನ್ನು ಕಂಡರೆ ಅವರು ಪಡುವ ಅಸೂಯೆ ಮತ್ತು ಅಸಹನೆಗಳ ಬಗ್ಗೆ ಧ್ವನಿ ಎತ್ತಿದ್ದಾರೆ.ಒಂದು ನಿರ್ಜೀವ ವಸ್ತುವಾದ ಕಲ್ಲಿನ ಹಾವಿನ ವಿಗ್ರಹಕ್ಕೆ ಭಕ್ತಿ ಇಂದ ಹಾಲನ್ನು ಸುರಿಯುವ ಜನ,ನಿಜವಾದ ಹಾವನ್ನು ಕಂಡಾಗ ಅದು ಒಂದು ಮೂಕ ಪ್ರಾಣಿ ಎಂದು ಅರಿಯದೆ ವಿವೇಚನೆ ಇಲ್ಲದೆ ಅದನ್ನು ಸಾಯಿಸಲು ಪ್ರಯತ್ನಿಸುತ್ತಾರೆ.ಅದೇ ರೀತಿ ಉಣ್ಣುವ ಜಂಗಮ ಹಸಿದು ಬಂದಾಗ ಒಂಚೂರು ಕರುಣೆ ಇಲ್ಲದೆ ಆತನಿಗೆ ಏನನ್ನೂ ನೀಡುವುದಿಲ್ಲ,ಬದಲಾಗಿ ತಿನ್ನದ ಲಿಂಗಕ್ಕೆ ನೈವೇದ್ಯ ನೀಡುತ್ತಾರೆ.ಈ ರೀತಿ ನಿರ್ಜೀವ ವಸ್ತುಗಳಿಗೆ ಸುರಿದು ಪೋಲು ಮಾಡುವ ಬದಲು ಹಸಿದವರಿಗೆ ನೀಡಿ ಅದನ್ನು ಸದ್ವಿನಿಯೋಗ ಮಾಡಬಹುದು ಎಂದು ಹೇಳುತ್ತಾರೆ.

ಇಲ್ಲಿ ಶರಣರ ಕಂಡು ಉದಾಸೀನವ ಮಾಡಿದರೆ ಅಂದರೆ ಜೀವಂತ ಹಾವು ಅಥವಾ ಜಂಗಮ ಆಗಿರಬಹುದು ಅಥವಾ ಹಸಿದ ಬಡವನಿರಬಹುದು ಅಥವಾ ಇನ್ನ್ಯಾವುದಾದರು ದೈವ ಸಂಕೇತದ ವಸ್ತು ಎಂದು ಭಾವಿಸಬಹುದು.ಅಂತ ಶರಣರನ್ನು ಕಡೆಗಣಿಸಿದರೆ ಅಂದರೆ ಅವರಿಗೆ ಭಕ್ತಿ ತೋರದಿದ್ದರೆ ಕಲ್ಲು ತಾಗಿದ ಮಣ್ಣಿನ ಗುಡ್ಡೆ ಅಂತೆ ಉಪಯೋಗಕ್ಕೆ ಬಾರದಂತೆ ಇವರ ಭಕ್ತಿಯೂ ಆಗುತ್ತದೆ ಎಂದು ಹೇಳುತ್ತಾರೆ.

ಒಟ್ಟಾರೆಯಾಗಿ ಈ ವಚನದ ಭಾವಾರ್ಥ ಹಸಿದವರಿಗೆ ಇಲ್ಲ ಅನ್ನಬಾರದು ಮತ್ತು ಕಲ್ಲಿಗೆ ನೈವೇದ್ಯೇ ಮಾಡುವ ಬದಲು ಅಂಥವರಿಗೆ ನೀಡಿದರೆ ಅದು ಭಕ್ತಿ ಇಂದ ಕೂಡಿರುತ್ತದೆ ಮತ್ತು ಅದು ಕೂಡಲಸಂಗಮದೇವನಿಗೆ ಅರ್ಪಿಸಿದಂತೆ.




Monday, 5 March 2012

ವಚನ ಸಿಂಚನ ೨೭:ಮನೋನಿಗ್ರಹ

ಅತ್ತಲಿತ್ತ ಹೋಗದಂತೆ ಹೆಳವನ ಮಾಡಯ್ಯಾ ತಂದೆ,
ಸುತ್ತಿ ಸುಳಿದು ನೋಡದಂತೆ ಅಂಧಕನ ಮಾಡಯ್ಯಾ ತಂದೆ,
ಮತ್ತೊಂದು ಕೇಳದಂತೆ ಕಿವುಡನ ಮಾಡಯ್ಯಾ ತಂದೆ,
ನಿಮ್ಮ ಶರಣರ ಪಾದವಲ್ಲದೆ ಅನ್ಯ ವಿಷಯಕ್ಕೆಳದಂತೆ
ಇರಿಸು ಕೂಡಲಸಂಗಮದೇವಾ !!!
                                       -ಬಸವಣ್ಣ

ಇಲ್ಲಿ ಬಸವಣ್ಣನವರು ಮನೋನಿಗ್ರಹದ ಬಗ್ಗೆ ಹೇಳುತ್ತಾ ತಮ್ಮನ್ನು ಕೇವಲ ಸತ್ಯದೆಡೆಗೆ,ವಿಚಾರವಂತಿಕೆ ಎಡೆಗೆ,ನ್ಯಾಯ ನೀತಿಯ ಧರ್ಮದೆಡೆಗೆ ಮಾತ್ರ ಸೆಳೆಯುವಂತೆ ಮಾಡು ಎಂದು ಕೂಡಲಸಂಗಮದೇವನಲ್ಲಿ  ಪ್ರಾರ್ಥಿಸುತ್ತ ಎಲ್ಲೂ ಹೋಗದಂತೆ ತನ್ನನ್ನು ಕಾಲಿಲ್ಲದವನನ್ನಾಗಿ ಮಾಡು,ಜಗದ ಅಂಧಕಾರವನ್ನು ನೋಡದಂತೆ ಕುರುಡನನ್ನಾಗಿ ಮಾಡು,ಅಜ್ಞಾನದ ಮಾತನ್ನು ಕೇಳದಂತೆ ಕಿವುಡನನ್ನಾಗಿ ಮಾಡು ಎಂದು ಕೇಳಿಕೊಳ್ಳುತ್ತಾರೆ.ಇಲ್ಲಿ ಅನ್ಯ ವಿಷಯ ಅಂದರೆ ಅಜ್ಞಾನ ಮತ್ತು ಅಸಭ್ಯ ಚಿಂತನೆಗಳು ಎಂದೂ ಮತ್ತು ಶರಣರ ಪಾದ ಅಂದರೆ ಭಕ್ತಿ ಜ್ಞಾನ ಮತ್ತು ಅರಿವಿನ ಸಂಕೇತ ಎಂದು ಭಾವಿಸಬಹುದು.