Monday, 27 February 2012

ವಚನ ಸಿಂಚನ ೨೬:ಶಿವ,ಪ್ರೇತ

ಜಲವಿಲ್ಲದ ಕೆರೆ,ಫಲವಿಲ್ಲದ ಬನ,ಭಕ್ತನಿಲ್ಲದ ಗ್ರಾಮ
ಸುಡುಗಾಡಯ್ಯಾ,
ಅಲ್ಲಿ ಶಿವನಿಲ್ಲ,
ಪ್ರೇತ ಜಡಾರಣ್ಯದಲ್ಲಿ
ಹೋಗಬಹುದೇ
ಗುಹೇಶ್ವರಾ ?
               -ಅಲ್ಲಮಪ್ರಭು

ಇಲ್ಲಿ ನೀರಿಲ್ಲದ ಕೆರೆ,ಫಸಲು ಇಲ್ಲದ ಬನ,ಭಕ್ತನಿಲ್ಲದ ಉರು ಇವುಗಳನ್ನು ಅಲ್ಲಮಪ್ರಭು ದೇವರು ಸುಡುಗಾಡಿಗೆ ಹೋಲಿಸುತ್ತಾ ಅಲ್ಲಿ ಶಿವನಿಲ್ಲ ಎಂದು ಹೇಳುತ್ತಾರೆ..ಇಲ್ಲಿ ಸುಡುಗಾಡು ಅಂದರೆ ಆಚಾರ,ವಿಚಾರ,ನೈತಿಕತೆ,ನಡೆ ನುಡಿ,ವಿನಯವಂತಿಕೆ,ಭಕ್ತಿ ಪರವಶತೆ  ಇಲ್ಲದ ಜನರಿರುವ ಉರು ಎಂದು ಭಾವಿಸಬಹುದು.. ಇಲ್ಲಿ ಭಕ್ತನಿಲ್ಲ ಅಂದರೆ ಹರ ನಿಂದೆ ಗುರು ನಿಂದೆ ಮಾಡುವವರನ್ನು ಹಾಗೆ ಕರೆದಿರಬಹುದು...ಇಂಥ ಉರಿನಲ್ಲಿ ಶಿವನ ಕೃಪೆ ಇರುವುದಿಲ್ಲ ಎಂದು ಹೇಳುತ್ತಾ ಪ್ರೇತವು ಜಡಾರಣ್ಯದಲ್ಲಿ ಹೋಗದೆ ಇಂಥ  ಊರಿನಲ್ಲೇ ಸುತ್ತುತ್ತದೆ ಎಂದು ಹೇಳುತ್ತಾರೆ..ಇಲ್ಲಿ ಪ್ರೇತ ಅಂದರೆ  ಅಂತರಂಗ ಬಹಿರಂಗ ಶುದ್ಧಿ ಇಲ್ಲದ ಕೆಟ್ಟ ಮನಸ್ಸಿನ ವ್ಯಕ್ತಿತ್ವ ಎಂದು ಪರಿಗಣಿಸಬಹುದು.. 

Tuesday, 21 February 2012

ವಚನ ಸಿಂಚನ ೨೫:ಇಂದು ನಾಳೆಗೆ

ಹೊನ್ನಿನೊಳಗೊಂದೆರೆಯ ಸೀರೆಯೊಳಗೊಂದೆಳೆಯ
ಇಂದಿಂಗೆ ನಾಳಿಂಗೆ ಬೇಕೆಂದೆನಾದಡೆ ನಿಮ್ಮಾಣೆ,
ನಿಮ್ಮ ಪ್ರಮಥರಾಣೆ,ನಿಮ್ಮ ಶರಣರಿಗಲ್ಲದೆ
ಮತ್ತೊಂದನರಿಯ ಕೂಡಲಸಂಗಮದೇವಾ !!!
                                             -ಬಸವಣ್ಣ

ಇಲ್ಲಿ ಬಸವಣ್ಣನವರು ಮನುಷ್ಯ ಸಹಜ ಆಸೆ ಮತ್ತು ಮನಸ್ಥಿತಿಯ ಬಗ್ಗೆ ಹೇಳುತ್ತಾ ನಾಳೆಗೆ ಕೂಡಿ ಇಡುವ ಬುದ್ಧಿ ಮಾನವನಿಗೆ ಇರಬಾರದು ಎಂದು ಹೇಳುತ್ತಾರೆ..ಹೊನ್ನಿನಲ್ಲಿ ಒಂದಿಷ್ಟನ್ನು ಬೇಡುವ ಅಥವಾ ಉಡುವ ಬಟ್ಟೆಯಲ್ಲಿ ಇನ್ನಷ್ಟು ಹೆಚ್ಚಿಗೆ ಅಪೇಕ್ಷಿಸಿದೆ  ಆದರೆ ನಿಮ್ಮ ಮೇಲೆ ಆಣೆ ಮಾಡುವುದಾಗಿ ದೇವರಲ್ಲಿ ಕೇಳಿಕೊಳ್ಳುತ್ತಾರೆ..ಶರಣಾದಿ  ಪ್ರಮಥರಿಗಲ್ಲದೆ ಬೇರೆಯದನ್ನು ತಿಳಿಯುವುದಿಲ್ಲ ಎನ್ನುತ್ತಾರೆ.
ತನ್ನ ಪತಿರಾಯ ಲಕ್ಕಯ್ಯ ತಮ್ಮ ಅವಶ್ಯಕತೆಗಿಂತ ಜಾಸ್ತಿ ಅಕ್ಕಿಯನ್ನು ಆಯ್ದು ತಂದಾಗ ಮಾರಮ್ಮ "ಈಸಕ್ಕಿ ಅಸೆ ನಿಮಗೇಕೆ ?" ಎಂದು ಪ್ರಶ್ನಿಸಿ ಹೆಚ್ಚಿಗೆ ಇದ್ದ ಅಕ್ಕಿಯನ್ನು ಪುನಃ ಅಲ್ಲಿಯೇ ಬಿಟ್ಟು ಬರುವಂತೆ ಹೇಳುವ ವಚನ ಕೂಡ ಈ ವಚನಕ್ಕೆ ಸಾಂಧರ್ಭಿಕವಾಗಿದೆ..

Monday, 13 February 2012

ವಚನ ಸಿಂಚನ ೨೪ : ಜ್ಞಾನಯೋಗಿ

ಅರವತ್ತೆಂಟು ಸಾವಿರ ವಚನಗಳ ಹಾಡಿ ಹಾಡಿ
ಸೋತಿತೆನ್ನ ಮನ ನೋಡಯ್ಯಾ
ಹಾಡುವುದೊಂದೇ  ವಚನ ;ನೋಡುವುದೊಂದೇ ವಚನ
ವಿಷಯ ಬಿಟ್ಟು ನಿರ್ವಿಶಯನಾಗುವುದೊಂದೇ ವಚನ
ಕಪಿಲ ಸಿದ್ಧ ಮೆಲ್ಲೆಶ್ವರನಲ್ಲಿ !!!
                                   -ಸಿದ್ಧರಾಮೇಶ್ವರ,

 ಈ ವಚನದ ಮೂಲಕ ತಿಳಿಯುವುದೇನೆಂದರೆ ಸಿದ್ಧರಾಮಣ್ಣ ಅರವತ್ತೆಂಟು ಸಾವಿರ ವಚನಗಳನ್ನು ಬರೆದಿದ್ದರು ಎಂದು,ಆದರೆ ಇದುವರಗೆ ಸಿಕ್ಕಿರುವ ಸಿದ್ಧರಾಮನ ವಚನಗಳ ಸಂಖ್ಯೆ ೧೯೯೨.ಅಷ್ಟೊಂದು ಬರೆದಿದ್ದರು ಇರಬಹುದು..ಅಲ್ಲದೆ ಆತ ತನ್ನ ಜೀವಿತಾವಧಿಯಲ್ಲಿ ಮಾಡಿದ ಕಾರ್ಯಗಳನ್ನು ಗಮನಿಸಿದರೆ ಅಷ್ಟು ವಚನಗಳನ್ನು ಬರೆದಿದ್ದ ಎಂಬುದರಲ್ಲಿ ಸಂದೇಹವಿಲ್ಲ.. ಆತನನ್ನು ಯೋಗಿಗಳಲ್ಲಿ ಮಹಾಯೋಗಿ ಅನ್ನುತ್ತಾರೆ ಬಸವಣ್ಣನವರು... ಕೆರೆ ಕಟ್ಟೆಗಳನ್ನು ಕಟ್ಟಿಸಿದ,ಕಾಯಕ ವರ್ಗದ ಏಳಿಗೆಗೆ ಶ್ರಮಿಸಿದ,ಆದ್ದರಿಂದಲೇ ಈತನನ್ನು ಕಾಯಕ ಯೋಗಿ ಅನ್ನುತ್ತಾರೆ..ಸಿದ್ಧರಾಮ ಸಮಾಜ ಮುಖಿಯಾಗಿ ಚಿಂತಿಸಿದ ವಿಚಾರಗಳನ್ನು ಗಮನಿಸಿದಾಗ ಆತನ ಪ್ರಭುತ್ವ ಮತ್ತು ಆತ ವಚನಗಳನ್ನು ಅನುಭವಿಸಿ ಬರೆದಿದ್ದ ಎಂದು ಹೇಳಬಹುದು. ಅಲ್ಲದೆ ೧೨ನೆ ಶತಮಾನದ ಅನುಭವ ಮಂಟಪದಲ್ಲಿ ಕಾರ್ಯೋನ್ಮುಖರಾಗಿ ಅಲ್ಲಮ ಪ್ರಭು ಮತ್ತು ಬಸವಣ್ಣನವರ ಜೊತೆ ಸೇರಿ ಶ್ರಮ ವಹಿಸುತ್ತಾರೆ..ಅಲ್ಲದೆ ಮಹಿಳೆಯರ ಸಮಾನತೆಗೆ ಹೋರಾಡಿದ ಹಲವು ವಚನಕಾರರು ಮತ್ತು ಶರಣರ ಸಾಲಿನಲ್ಲಿ ಸಿದ್ಧರಾಮ ಕೂಡ ನಿಲ್ಲುತ್ತಾರೆ.. ಹೆಣ್ಣನ್ನು ಪ್ರತ್ಯಕ್ಷ ಕಪಿಲ ಸಿದ್ಧ ಮಲ್ಲಿಕಾರ್ಜುನ ಎಂದು ಬಣ್ಣಿಸಿ ಹೆಣ್ಣನ್ನು ಸಾಕ್ಷಾತ್ ದೇವರಿಗೆ ಹೋಲಿಸಿದ ಮೊದಲ ವಚನಕಾರ ಇರಬಹುದು...
ವಚನದ ಕೊನೆಯಲ್ಲಿ ಹಾಡುವುದೊಂದೇ  ವಚನ ;ನೋಡುವುದೊಂದೇ ವಚನ ಅಂದರೆ ನಡೆದಂತೆ ನುಡಿ,ನುಡಿದಂತೆ ನಡಿ ಎಂಬ ಅರ್ಥವನ್ನು ನೀಡುತ್ತದೆ.. ಹಾಗೆ ನಡೆಯದಿದ್ದರೆ ವಿಷಯ ಬಿಟ್ಟು ನಿರ್ವಿಶಯನಾಗಿ ಕಪಿಲ ಸಿದ್ಧ ಮಲ್ಲೇಶ್ವರನಲ್ಲಿ ಲೀನವಾಗಿ ಎಂದು ಹೇಳುತ್ತಾರೆ..

Tuesday, 7 February 2012

ವಚನ ಸಿಂಚನ ೨೩:ಭಕ್ತಿಪ್ರಿಯ

ನಾದಪ್ರಿಯ ಶಿವನೆಂಬರು ನಾದಪ್ರಿಯ ಶಿವನಲ್ಲ
 ವೇದಪ್ರಿಯ ಶಿವನೆಂಬರು ವೇದಪ್ರಿಯ ಶಿವನಲ್ಲ
 ನಾದವ ಮಾಡಿದ ರಾವಣಂಗೆ ಅರೆಯಾಯುಷವಾಯ್ತು
 ವೇದವನೋದಿದ ಬ್ರಹ್ಮನ ಶಿರಹೋಯ್ತು
 ನಾದಪ್ರಿಯನೂ ಅಲ್ಲ ವೇದಪ್ರಿಯನೂ ಅಲ್ಲ
 ಭಕ್ತಿಪ್ರಿಯ ನಮ್ಮ ಕೂಡಲಸಂಗಮದೇವ!
                                                -ಬಸವಣ್ಣ
 

ಶಿವನನ್ನು ನಾದಪ್ರಿಯ ಮತ್ತು ವೇದಪ್ರಿಯ ಅನ್ನುತ್ತಾರೆ,ಆದರೆ ನಾದಪ್ರಿಯ ಮತ್ತು ವೇದಪ್ರಿಯ ಶಿವ ಅಲ್ಲ.
ರಸವತ್ತಾದ ರಾಗ ನುಡಿಸಿದ ರಾವಣ ತನ್ನ ಪೂರ್ತಿ ಜೀವಿತಾವಧಿಯನ್ನು ಜೀವಿಸಲು ಸಾಧ್ಯ ಆಗಲಿಲ್ಲ.. ಅದೇ ರೀತಿ ಎಲ್ಲ ವೇದಗಳನ್ನು ಅಧ್ಯಯನ ಮಾಡಿದ ಬ್ರಹ್ಮ ತನ್ನ ತಲೆಯನ್ನು ಕಳೆದು ಕೊಳ್ಳಬೇಕಾದ ಪರಿಸ್ಥಿತಿ ಬಂದಿತ್ತು.. 
ಆದರೆ ಕೂಡಲಸಂಗಮ ದೇವನು ನಾದಪ್ರಿಯನೂ ಅಲ್ಲ,ವೇದಪ್ರಿಯನೂ ಅಲ್ಲ.. ಅವನು ಭಕ್ತಿ ಪ್ರಿಯನು.ತನಗೆ ಭಕ್ತಿ ತೋರಿಸುವವರನ್ನು ರಕ್ಷಿಸುತ್ತಾನೆ,ಇಡಿ ಜೀವ ಸಂಕುಲವನ್ನು ರಕ್ಷಿಸುತ್ತಾನೆ ಎಂದು ಬಸವಣ್ಣನವರು ಹೇಳುತ್ತಾರೆ...... ಇಲ್ಲಿ ಭಕ್ತಿಯ ಪ್ರಾಮುಖ್ಯತೆಯನ್ನು ವಿವರಿಸುತ್ತಾರೆ.