ತಡಿ ನೆಲೆಯಿಲ್ಲದ ಮಹಾನದಿಯಲ್ಲಿ
ಒಡಲಿಲ್ಲದ ಅಂಬಿಗ ಬಂದಿದ್ದೇನೆ.
ಹಿಡಿವ ಬಿಡುವ ಮನದ ಬೆಲೆಗೊಟ್ಟಡೆ
ಕಡೆಗಣಿಸಿ ಹಾಯಿಸುವೆ ಮಹಾ ಹೊಳೆಯ.
ನುಡಿಯಿಲ್ಲದ ನಿಸ್ಸೀಮ ಗ್ರಾಮದಲ್ಲಿರಿಸುವೆನೆಂದಾತನಂಬಿಗ ಚೌಡಯ್ಯ
-ಅಂಬಿಗರ ಚೌಡಯ್ಯ
ಈ ವಚನದಲ್ಲಿ ಚೌಡಯ್ಯ ತನ್ನ ವೃತ್ತಿಯಾದ ದೋಣಿ ಹಾಯಿಸುವ ಅಂಬಿಗನನ್ನು ದೇವರಂತೆ ಚಿತ್ರಿಸಿ, ಆ ಕಾರ್ಯದಲ್ಲಿ ಅತಿಂದ್ರೀಯ ಅನುಭವವನ್ನು ಕಾಣುವ ಪ್ರಯತ್ನ ಮಾಡುತ್ತಾನೆ.. ಸಾಮಾನ್ಯ ಅಂಬಿಗನಿಗೆ ದಾಟಿಸಲು ಸಾಧ್ಯವಾಗದ, ಆಗಾಧವಾದ ಮತ್ತು ಕೊನೆಯಿಲ್ಲದ ನದಿಯನ್ನು ಒಡಲಿಲ್ಲದ ಅಂದರೆ ಅಶರೀರ ಅಂಬಿಗ ಮಾತ್ರ ದಾಟಿಸಲು ಸಾಧ್ಯ. 'ಮನದ ಬೆಲೆಕೊಟ್ಟರೆ' ಅಂದರೆ ನೀನು ಮನಃಪೂರ್ವಕವಾಗಿ ಭಕ್ತಿಯನ್ನು ಸಾಮರ್ಪಿಸಿಸಿದರೆ ಮಾತ್ರ ಒಂದು ನಿಶ್ಚಿತತೆಯನ್ನು ಕಂಡುಕೊಳ್ಳಬಹುದು, ಅಥವಾ ಹೊಳೆಯನ್ನು ದಾಟಬಹುದು ಎಂದು ವಿವರಿಸುತ್ತಾನೆ.
ಇಲ್ಲಿ ಜೀವನವನ್ನು ಹೊಳೆ ಎಂದು ಬಣ್ಣಿಸಿ ಕಂಡುಕೊಳ್ಳಬೇಕಾದ ನಿತ್ಯತೆಯನ್ನು ಹೊಳೆ ಹಾಯುವುದಕ್ಕೆ ಹೋಲಿಸಿದ್ದಾನೆ ವಚನಕಾರ ಚೌಡಯ್ಯ.. ಗಮನಿಸಬೇಕಾದ ಇನ್ನೊಂದು ಅಂಶ ಎಂದರೆ, ಚೌಡಯ್ಯ ಯಾವುದೇ ಮುದ್ರಿಕೆಯನ್ನು ಇಲ್ಲಿ ದೇವರೆಂದು ಚಿತ್ರಿಸಿಲ್ಲ, ಬದಲಾಗಿ ತನ್ನ ಮನೋವೃತ್ತಿಯನ್ನು , ಒಂದು ಅನುಭಾವವನ್ನು ದೈವಸ್ವರೂಪವಾಗಿ ಕಂಡುಕೊಂಡಿದ್ದಾನೆ.