Monday, 8 April 2013

ವಚನ ಸಿಂಚನ ೬೬: ಸಜ್ಜನರ ಸಂಗ

ಹದತಪ್ಪಿ ಕುಟ್ಟಲು ನುಚ್ಚಲ್ಲದೇ ಅಕ್ಕಿಯಿಲ್ಲ
ವೃತಹೀನನ ನೆರೆಯೆ ನರಕವಲ್ಲದೇ ಮುಕ್ತಿಯಿಲ್ಲ
ಅರಿಯದುದು ಹೋಗಲಿ ಅರಿದು ಬೆರೆದೆನಾದಡೆ
ಕಾದ ಕತ್ತಿಯಲ್ಲಿ ಕಿವಿಯ ಕೊಯ್ವರಯ್ಯಾ
ಒಲ್ಲೆಬಲ್ಲೆನಾಗಿ ನಿಮ್ಮಾಣೆ ನಿರ್ಲಜ್ಜೇಶ್ವರಾ...
                                         -ಸೂಳೆ ಸಂಕವ್ವೆ

ಈ  ವಚನದಲ್ಲಿ ಮಾಡುವ ಕೆಲಸ ಹೇಗೆ ಹಿತವಾಗಿರಬೇಕು ಮತ್ತು ಎಂಥವರ ಸಂಗ ಮಾಡಬೇಕು ಎಂದು ಸಂಕವ್ವೆ ಹೇಳುತ್ತಾಳೆ ... ಅಕ್ಕಿಯನ್ನು ಪಡೆಯುಬೇಕೆಂದರೆ ಬತ್ತವನ್ನು ಒನಕೆಯಿಂದ ಕುಟ್ಟಿ ಸಿಪ್ಪೆಯನ್ನು ತೆಗೆದು ಅಕ್ಕಿಯನ್ನು ಪಡೆಯಬೇಕು ... ಬತ್ತವನ್ನು ಒಂದು ಹದದಲ್ಲಿ ಕುಟ್ಟಿದರೆ ಮಾತ್ರ ಅಕ್ಕಿ ಸಿಗುತ್ತದೆ.. ಒನಕೆ ಇದೆ ಎಂದು ಜೋರಾಗಿ  ಕುಟ್ಟಿದರೆ ನಮಗೆ ಸಿಗುವುದು ನುಚ್ಚು ಮಾತ್ರ .. ಅದೇ ರೀತಿ 'ಸಾರ ಸಜ್ಜನರ ಸಂಗವದು ಲೇಸು ಕಂಡಯ್ಯಾ' ಎನ್ನುವ ಹಾಗೆ,ನಾವು ಯಾರ ಸಂಗವನ್ನು ಮಾಡಬೇಕು ಎಂಬುದನ್ನು ಅರಿತಿರಬೇಕು .. ಒಳ್ಳೆಯ ವಾತವರಣದಲ್ಲಿದ್ದರೆ ಮನುಷ್ಯನಿಗೆ ಎಲ್ಲ ರೀತಿಯಲ್ಲೂ ಒಳ್ಳೆಯದು ಎಂದು ಹೇಳುತ್ತಾಳೆ .. ಅದೇ ರೀತಿ ಹೇಳುತ್ತಾ ,ತಿಳಿಯದೆ ತಪ್ಪು ಮಾಡಿದರೆ ಅದಕ್ಕೆ ಕ್ಷಮೆ ನೀಡಬಹುದು .ಅದರೆ  ತಿಳಿದೂ ತಿಳಿದು ತಪ್ಪು ಎಸಗಿದರೆ,ಕಾದ ಕತ್ತಿಯಲಿ ಕಿವಿ ಕೊಯ್ವರು ಎಂದರೆ ಅವರು ಶಿಕ್ಷೆಗೆ ಒಳಪಡುತ್ತಾರೆ ಎಂದು ಎಚ್ಚರಿಸುತ್ತಾಳೆ... ಅರಿತು ಕೂಡ ದುಃಸಂಗ ಮಾಡಿದರೆ ಅವರು ಎಂದಿಗೂ ಸನ್ಮಾರ್ಗದಲ್ಲಿ ನಡೆಯುವುದಿಲ್ಲ ..
ವಿಚಾರವಂತರ,ಅನುಭಾವಿಗಳ,ಶರಣರ  ಸಂಗ ಮಾಡಿದರೆ ಅಕ್ಕಿಯನ್ನು ಪಡೆದಂತೆ ಜೀವನ ರಸಮಯವಾಗಬಹುದು ,ಇಲ್ಲದಿದ್ದರೆ ನುಚ್ಚು ಪಡೆದಂತೆ ಕಷ್ಟಕರವಾಗಬಹುದು ಎಂದು ಸಂಕವ್ವೆ ಹೇಳುತ್ತಾಳೆ ..