Monday, 11 March 2013

ವಚನ ಸಿಂಚನ ೬೫:ಹೆಣ್ಣು,ಆಧ್ಯಾತ್ಮ ಶಕ್ತಿ

ಸತ್ವಗೆಟ್ಟಲ್ಲಿ ಕಾಷ್ಟವನೂರಿ ನಡೆಯಬೇಕು
ಮತ್ತತ್ವ ವಿದ್ದಲ್ಲಿ ನಿಶ್ಚಯವ ಹೇಳಲಾಗಿ
ಮಹಾಪ್ರಸಾದವೆಂದು ಕೈಕೊಳಬೇಕು
ಎನ್ನ ಭಕ್ತಿಗೆ ನೀ ಶಕ್ತಿಯಾದ ಕಾರಣ
ಎನ್ನ ಸತ್ಯಕ್ಕೆ ನೀ  ಸತಿಯಾದ ಕಾರಣ
ಎನ್ನ ಸುಖ ದುಃಖ, ನಿನ್ನ ಸುಖ ದುಃಖ ಅನ್ಯವಿಲ್ಲ
ಇದಕ್ಕೆ ಭಿನ್ನ ಬೇಡವೇನು ಹೇಳಾ
ನಿಃಕಳಂಕ ಮಲ್ಲಿಕಾರ್ಜುನ
                        -ಮೋಳಿಗೆಯ ಮಾರಯ್ಯ

ಈ ವಚನದಲ್ಲಿ ಮೋಳಿಗೆಯ ಮಾರಯ್ಯ ತನ್ನ ಪತ್ನಿಯಾದ ಮಹಾದೇವಿಯಮ್ಮ ಹೇಗೆ ತನಗೆ ಆಧ್ಯಾತ್ಮದ ಹಾದಿಯಲ್ಲಿ ಊರುಗೋಲು ಆಗುತ್ತಾಳೆ ಎಂಬುದನ್ನು ಹೇಳುತ್ತಾನೆ.ತನ್ನ ಭಕ್ತಿಗೆ ಆಕೆಯೇ ಶಕ್ತಿ ಮತ್ತು ದೇವರನ್ನು ಕಂಡುಕೊಳ್ಳುವ ಸತ್ಯದಲ್ಲಿ ಆಕೆಯೇ ಸತಿ ಎಂದು ಹೇಳುತ್ತಾ ಗಂಡಿಗೆ ಹೆಣ್ಣಿನ ಅವಶ್ಯಕತೆ ಭಕ್ತಿ ಮಾರ್ಗದಲ್ಲಿ ಹೇಗೆ ಎಂದು ವಿವರಿಸುತ್ತಾನೆ . ಹಾಗೆ ಲೌಕಿಕ ಜೀವನದಲ್ಲಿ ಹೆಂಡತಿ ತನ್ನ ಸುಖ ದುಃಖ ಎರಡನ್ನೂ ಹಂಚಿಕೊಳ್ಳುವ ಸ್ವರೂಪಿಣಿ ಎನ್ನುತ್ತಾ ಶಿವನಲ್ಲಿ ಪ್ರಶ್ನಿಸುತ್ತಾ ನಮ್ಮಿಬ್ಬರಲ್ಲಿ ಯಾವುದೇ ವ್ಯತ್ಯಾಸವಿಲ್ಲ ಎಂದು . ಏಕೆಂದರೆ ಅವರು ದೇವರನ್ನು ಕಂಡುಕೊಳ್ಳುವ ರೀತಿ ಮತ್ತು ಬಾಳ್ವೆ ಮಾಡಿದ ರೀತಿ ಇಬ್ಬರೂ ಸಮನಾಗಿ ಅನುಭವಿಸಿದರು ಎಂದು. ಅಂದರೆ ಇಲ್ಲಿ ೧೨ನೆ ಶತಮಾನದಲ್ಲಿ ಶರಣರು ನೀಡಿದ  ಸ್ತ್ರೀ ಸಮಾನತೆಯನ್ನು ಕೂಡ ಕಾಣಬಹುದು .

Monday, 4 March 2013

ವಚನ ಸಿಂಚನ ೬೪:ಹೆಣ್ಣು,ದೈವ ಸ್ವರೂಪಿಣಿ

ತಾ ಮಾಡಿದ ಹೆಣ್ಣು ತನ್ನ ತಲೆಯನೇರಿತ್ತು
ತಾ ಮಾಡಿದ ಹೆಣ್ಣು ತನ್ನ ತೊಡೆಯನೇರಿತ್ತು
ತಾ ಮಾಡಿದ ಹೆಣ್ಣು ಬ್ರಹ್ಮನ ನಾಲಿಗೆಯನೇರಿತ್ತು
ತಾ ಮಾಡಿದ ಹೆಣ್ಣು ನಾರಾಯಣನ ಎದೆಯನೇರಿತ್ತು
ಅದು ಕಾರಣ ಹೆಣ್ಣು ಹೆಣ್ಣಲ್ಲ
ಹೆಣ್ಣು ರಕ್ಕಸಿಯಲ್ಲ
ಹೆಣ್ಣು ಪ್ರತ್ಯಕ್ಷ ಕಪಿಲಸಿದ್ಧಮಲ್ಲಿಕಾರ್ಜುನ ನೋಡಾ
                               -ಸಿದ್ಧರಾಮೇಶ್ವರ

ಈ ವಚನದಲ್ಲಿ ಸಿದ್ಧರಾಮ ಪುರಾಣದ ಕೆಲವು ನಿದರ್ಶನಗಳ ಮೂಲಕ ಹೆಣ್ಣಿನ ಘನತೆಯನ್ನು ಹೆಚ್ಚಿಸುತ್ತಾನೆ. ಶಿವ ತನಗೆ ಮತ್ತು ಹಲವು ದೇವರುಗಳಿಗೆ ದೇವತೆಗಳನ್ನು ಸೃಷ್ಟಿ ಮಾಡಿದ.. ಗಂಗೆ ಶಿವನ ತಲೆಯ ಮೇಲೆ ಕೂತಳು, ಪಾರ್ವತಿ ಶಿವನ ತೊಡೆಯ ಮೇಲೆ ಸಿಂಗರಿಸಿದಳು. ಸರಸ್ವತಿ ಬ್ರಹ್ಮನ ನಾಲಗೆಯಲ್ಲಿ ಲೀನವಾದಳು. ಲಕ್ಷ್ಮಿ ವಿಷ್ಣುವಿನ ಎದೆಗೆ ಒರಗಿಕೊಂಡಳು. ಇಲ್ಲಿ ದೇವರುಗಳೇ ಹೆಣ್ಣಿನ ಸಂಗವನ್ನು ಬಯಸುವಾಗ. ಇನ್ನು ಹೆಣ್ಣು, ಅದರಲ್ಲೂ ಐಹಿಕ ಹೆಣ್ಣು, ಕೇವಲ ಗಂಡನ ಭೋಗದ ವಸ್ತು ಆಗುವುದಿಲ್ಲ ಅಥವಾ ದೆವ್ವ,ಭೂತಗಳ ಸ್ವರೂಪವಲ್ಲ, ಬದಲಾಗಿ ಆಕೆ ದೈವ ಸ್ವರೂಪ ಎಂದು ಸಿದ್ಧರಾಮ ಹೇಳುತ್ತಾನೆ.ಶರಣರು ಹೆಣ್ಣನ್ನು ಉಚ್ಚ ಸ್ಥಾನದಲ್ಲಿಟ್ಟು ಗೌರವಿಸಿದ್ದರು ಎಂಬುದಕ್ಕೆ ಈ ವಚನ ಸಾಕ್ಷಿ..

ಯತ್ರ ನಾರ್ಯಸ್ತು ಪೂಜ್ಯಂತೆ,ರಮಂತೆ ತತ್ರ ದೇವತಃ ಎಂಬ ಹಾಗೆ ಇಲ್ಲಿ ಸಿದ್ಧರಾಮ ಕೂಡ ಹೆಣ್ಣು ಪೂಜನೀಯ ಎಂದು ಹೇಳುತ್ತಾನೆ ....

(ಅಂತರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ  ಈ ಸಂಚಿಕೆಯನ್ನು ಅಂಥ ದೈವ ಸ್ವರೂಪಿ ಹೆಣ್ಣಿಗೆ ಗೌರವದಿಂದ ಸಮರ್ಪಣೆ)